Advertisement

ಈ ವರ್ಷದ ಅಂತ್ಯಕ್ಕೆ ವಿಶ್ವದ 22 ದಶಕಲಕ್ಷ ಜನರ ಸ್ಥಳಾಂತರ! : ಇಲ್ಲಿದೆ ಕಾರಣ

10:02 AM Dec 06, 2019 | Sriram |

ಮ್ಯಾಡ್ರೀಡ್‌ : ವಿಶ್ವದೆಲ್ಲಡೆ ಹವಾಮಾನ ವೈಪರೀತ್ಯ ಬದಲಾವಣೆಗಳ ಕುರಿತು ತೀವ್ರ ಚರ್ಚೆ ನಡೆಯುತ್ತಿರುವ ನಡುವೆಯೇ ಮತ್ತೂಂದು ಆಘಾತಕಾರಿ ವಿಷಯ ಹೊರ ಬಿದ್ದಿದ್ದು, ಡಿಸೆಂಬರ್‌ ತಿಂಗಳ ಅಂತ್ಯದೊಳಗೆ ವಿಶ್ವದ 22 ದಶಲಕ್ಷ ಜನರನ್ನು ಸ್ಥಳಾಂತರಿಸಬೇಕಾಗುತ್ತದೆ ಎಂದು ಜಾಗತಿಕ ಹವಾಮಾನ ವರದಿ ತಿಳಿಸಿದೆ.

Advertisement

ಡಿಸೆಂಬರ್‌ 3 ರಂದು ಮ್ಯಾಡ್ರೀಡ್‌ನ‌ಲ್ಲಿ ನಡೆದ ಸಮ್ಮೇಳನದಲ್ಲಿ (ಕೋಪ್‌ 25) ಈ ವಿಷಯವಾಗಿ ಚರ್ಚೆ ನಡೆದಿದೆ. ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಂಒ) ಜಾಗತಿಕ ಹವಾಮಾನ 2019 ವರದಿಯನ್ನು ಬಿಡುಗಡೆ ಮಾಡಿದ್ದು, ಹವಾಮಾನ ವೈಪರೀತ್ಯದಿಂದಾಗುತ್ತಿರುವ ಹಲವಾರು ದುಷ್ಪರಿಣಾಮಗಳನ್ನು ತೆರೆದಿಟ್ಟಿದೆ.

ದಿನ ಕಳೆದಂತೆ ಹದೆಗೆಡುತ್ತಿರುವ ವಾತಾವರಣದಿಂದ ಈಗಾಗಲ್ಲೇ ಸಾಕಷ್ಟು ತೊಂದರೆ ತಾಪತ್ರಯಗಳು ಎದುರಾಗಿದ್ದು, ಪರಿಸ್ಥಿತಿ ಹೀಗೆ ಮುಂದುವರೆದರೆ ಹವಾಮಾನ ವೈಪರೀತ್ಯದಿಂದಾಗಿ 2019ರ ಡಿಸೆಂಬರ್‌ 31 ರ ವೇಳೆಗೆ 22 ದಶಲಕ್ಷ ಜನರನ್ನು ಸ್ಥಳಾಂತರಿಸಬೇಕಾಗುತ್ತದೆ ಎಂದು ವರದಿ ತಿಳಿಸಿದೆ.

ಕಳೆದ ಕೆಲವು ದಶಕಗಳಿಂದ ಸಮಸ್ಯೆಯ ತೀವ್ರತೆ ಹೆಚ್ಚಾಗುತ್ತಿದ್ದು, ಈ ವರ್ಷದಲ್ಲಿ ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಗಳಿಂದಾಗಿ ಅಧಿಕ ಮಟ್ಟದಲ್ಲಿ ಹವಾಮಾನ ವೈಪರೀತ್ಯ ಘಟನೆಗಳು ನಡೆದಿವೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ.

ವರದಿಯ ಪ್ರಕಾರ, 2019ರ ಜನವರಿ ಮತ್ತು ಜೂನ್‌ ನಡುವೆ   ಒಂದು ದೇಶದೊಳಗಿನ ಸುಮಾರು 10 ದಶಲಕ್ಷಕ್ಕೂ ಹೆಚ್ಚು ಜನರು ಆಂತರಿಕವಾಗಿ ಸ್ಥಳಾಂತರಗೊಂಡಿದ್ದಾರೆ. ಇದರಲ್ಲಿ 7ಲಕ್ಷ ರಷ್ಟು ಜನರು ಪ್ರವಾಹ ಮತ್ತು ಚಂಡಮಾರುತಗಳಂತಹ ಹವಾಮಾನ ವೈಪರೀತ್ಯದಿಂದಾಗಿ ಸ್ಥಳಾಂತರಗೊಂಡಿದ್ದಾರೆ ಎಂದು ವರದಿ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next