Advertisement

ಹವಾಮಾನ ವೈಪರೀತ್ಯ: ಕೋವಿಡ್‌ ನಡುವೆ ವೈರಲ್‌ ಜ್ವರದ ಆತಂಕ

08:33 PM Oct 03, 2021 | Team Udayavani |

ಮಹಾನಗರ: ಪ್ರಸ್ತುತ ಬಿಸಿಲು ಮತ್ತು ಮಳೆಯ ವಾತಾವರಣ, ಹವಾಮಾನ ವೈಪರೀತ್ಯದಿಂದಾಗಿ ಹಿರಿಯರು, ಮಕ್ಕಳೆನ್ನದೆ ಎಲ್ಲೆಡೆ ವೈರಲ್‌ ಜ್ವರ ಬಾಧಿಸುತ್ತಿದೆ. ಕೋವಿಡ್‌ ನಡುವೆ ಇದು ಆತಂಕಕ್ಕೆ ಕಾರಣವಾಗಿದೆ.

Advertisement

ಶಾಲೆಗಳಲ್ಲಿ ಭೌತಿಕ ತರಗತಿಗಳು ಆರಂಭವಾಗಿದ್ದು, ಮಕ್ಕಳಲ್ಲಿ ಯಾವುದೇ ರೀತಿಯ ಜ್ವರ ಕಂಡು ಬಂದರೂ ಹೆತ್ತವರಲ್ಲಿ ಆತಂಕ ಮನೆ ಮಾಡುತ್ತದೆ. 2 -3 ವಾರಗಳ ಹಿಂದೆ ಜ್ವರ ಬಾಧೆ ಹೆಚ್ಚಾಗಿತ್ತು. ಈಗ ಸ್ವಲ್ಪ ನಿಯಂತ್ರಣಕ್ಕೆ ಬಂದಿದೆ. ಆದರೆ ಕೆಲವು ದಿನಗಳ ಬಿಸಿಲಿನ ಬಳಿಕ ಮತ್ತೆ ಮಳೆ ಸುರಿಯುತ್ತಿರುವುದರಿಂದ ಎಚ್ಚರಿಕೆ ವಹಿಸುವುದು ಅನಿವಾರ್ಯವಾಗಿದೆ.

ಕಳೆದ ಮೇಯಿಂದ ಆಗಸ್ಟ್‌ ಅಂತ್ಯದ ವರೆಗೆ 4 ತಿಂಗಳುಗಳ ಕಾಲ ಮಕ್ಕಳು ಮನೆಯಲ್ಲಿದ್ದರು. ಸೆಪ್ಟಂಬರ್‌ನಲ್ಲಿ ಕಾಲೇಜು ಮತ್ತು ಶಾಲೆಗಳು ಪುನರಾರಂಭಗೊಂಡಿದ್ದು, 6ನೇ ತರಗತಿಗಿಂತ ಮೇಲಿನ ಮಕ್ಕಳಿಗೆ ಭೌತಿಕ ತರಗತಿ ಒಂದು ವಾರದ ಹಿಂದೆಯಷ್ಟೇ ಆರಂಭವಾಗಿವೆ. ಮಕ್ಕಳು ಮನೆಯಲ್ಲಿ ಇದ್ದಂತಹ ಸಂದರ್ಭದಲ್ಲಿ ಜ್ವರ ಪ್ರಕರಣಗಳು ಕಡಿಮೆ ಇದ್ದವು. ಸಮರ್ಪಕವಾಗಿ ಮಾಸ್ಕ್ ಧರಿಸುವುದರಿಂದ ವೈರಲ್‌ ಜ್ವರದಿಂದ ರಕ್ಷಣೆ ಪಡೆಯಲು ಸಾಧ್ಯ ಎನ್ನುತ್ತಾರೆ ದ.ಕ. ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ| ನವೀನ್‌ಚಂದ್ರ ಕುಲಾಲ್‌.

6 ತಿಂಗಳಲ್ಲಿ 3,500 ಮಕ್ಕಳಿಗೆ ಚಿಕಿತ್ಸೆ
6 ತಿಂಗಳುಗಳಲ್ಲಿ ದ.ಕ. ಜಿಲ್ಲೆಯ ವಿವಿಧ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಒಟ್ಟು 3,500 ಮಕ್ಕಳು ವಿವಿಧ ಕಾಯಿಲೆಗಳಿಗಾಗಿ ಚಿಕಿತ್ಸೆ ಪಡೆದಿದ್ದಾರೆ. ಈ ಪೈಕಿ ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಯಲ್ಲಿ 785 ಮಂದಿ ಹೊರ ರೋಗಿಗಳಾಗಿ, 183 ಮಂದಿ ಒಳರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ. ಯಾವುದೇ ಮಗು ತೀವ್ರತರವಾದ ಆರೋಗ್ಯ ಸಮಸ್ಯೆಗೆ ಒಳಗಾಗಿಲ್ಲ ಎಂದು ಜಿಲ್ಲಾ ಆರೋಗ್ಯ ಇಲಾಖೆ ತಿಳಿಸಿದೆ.

ಇದನ್ನೂ ಓದಿ:ಉಪಚುನಾವಣೆಗಳಿಗೆ ಬಿಜೆಪಿ ಉಸ್ತುವಾರಿ ನೇಮಕ | ವಿಜಯೇಂದ್ರಗೆ ಸಿಗದ ಸ್ಥಾನ

Advertisement

ಮಕ್ಕಳ ಆರೋಗ್ಯ: ಮುನ್ನೆಚ್ಚರಿಕೆ ಇರಲಿ
– ಕುಡಿಯಲು ಬಿಸಿ ನೀರನ್ನೇ ನೀಡುವುದು.
– ತಂಪು ಪಾನೀಯ, ಐಸ್‌ಕ್ರೀಂ ಆದಷ್ಟು ಕಡಿಮೆ ಮಾಡಿ
– ಬೆಚ್ಚಗಿನ ಬಟ್ಟೆ ಧರಿಸಬೇಕು, ಮಳೆಯಲ್ಲಿ ಒದ್ದೆಯಾಗಬಾರದು.
– ಶೀತ, ನೆಗಡಿ, ಕೆಮ್ಮು, ಜ್ವರ ಬಂದರೆ ವೈದ್ಯರ ಬಳಿಗೆ ಕರೆದೊಯ್ಯಬೇಕು.
– ಅವಶ್ಯ ಬಿದ್ದರೆ ತಪಾಸಣೆ/ ಪರೀಕ್ಷೆಗೆ ಒಳಪಡಿಸಬೇಕು.
– ವೈರಲ್‌ ಜ್ವರವನ್ನು ನಿರ್ಲಕ್ಷಿಸಿದರೆ ನ್ಯುಮೋನಿಯಾಕ್ಕೂ ಕಾರಣವಾದೀತು.

ಶಾಲೆಗಳಲ್ಲಿ ಮುನ್ನೆಚ್ಚರಿಕೆ ಅಗತ್ಯ
ಶಾಲೆಗಳಲ್ಲಿ ಭೌತಿಕ ತರಗತಿಗಳು ಆರಂಭವಾಗಿ ಒಂದು ವಾರವಾಗಿದ್ದು, ಇದುವರೆಗೆ ಯಾರಿಗೂ ಆರೋಗ್ಯ ಸಮಸ್ಯೆ ಉಂಟಾಗಿರುವ ಕುರಿತು ಮಾಹಿತಿ ಬಂದಿಲ್ಲ. ಸಾಕಷ್ಟು ಮುನ್ನೆಚ್ಚರಿಕೆ ವಹಿಸುವಂತೆ ಆಡಳಿತ ಮಂಡಳಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ.
-ಡಾ| ಕಿಶೋರ್‌ ಕುಮಾರ್‌, ದ.ಕ. ಡಿಎಚ್‌ಒ

Advertisement

Udayavani is now on Telegram. Click here to join our channel and stay updated with the latest news.

Next