Advertisement

ಹವಾಮಾನ ವೈಪರೀತ್ಯ: ಮಾವಿನ ಫ‌ಸಲು ಕುಸಿತ

11:49 AM Apr 29, 2020 | mahesh |

ಚಿಕ್ಕಬಳ್ಳಾಪುರ: ಹಣ್ಣಿನ ರಾಜ ಮಾವು ಮಾರುಕಟ್ಟೆ ಪ್ರವೇಶಕ್ಕೆ ದಿನಗಣನೆ ಶುರುವಾಗಿದೆ. ಆದರೆ ಜಿಲ್ಲೆಯಲ್ಲಿ ಈ ವರ್ಷ ಮಳೆಯ ಏರುಪೇರು, ಹವಮಾನ ವೈಪರೀತ್ಯದ ಪರಿಣಾಮ ಮಾವಿನ ಫ‌ಸಲಿನಲ್ಲಿ ಭಾರೀ ಕುಸಿತ ಕಂಡಿದ್ದು, ಶೇ.25 ರಿಂದ 30 ರಷ್ಟು ಮಾವು ಮಾರುಕಟ್ಟೆಗೆ ಬರುವುದು ಅನುಮಾನವಾಗಿದೆ. ಹೌದು, ಏಷ್ಯಾದಲ್ಲಿಯೇ ಅತ್ಯಧಿಕ ಮಾವು ಬೆಳೆಯುವ ಅವಿಭಜಿತ ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಈ ಬಾರಿ ಮಾವು ನಿರೀಕ್ಷಿತ ಪ್ರಮಾಣದಲ್ಲಿ ಇಳುವರಿ ಬಾರದೇ ಕುಸಿತಗೊಂಡಿದ್ದು, ಕೈಗೆ ಸಿಗುವ ಮಾವಿಗೂ ಕೋವಿಡ್ ಸಂಕಷ್ಟದಿಂದ ಮಾರುಕಟ್ಟೆ ಸಿಗುತ್ತದೆಯೇ ಎಂಬ ಆತಂಕ ಬೆಳೆಗಾರರನ್ನು ಆವರಿಸಿದೆ.

Advertisement

ಮಾರುಕಟ್ಟೆ ಪ್ರವೇಶ ಅನುಮಾನ: ಜಿಲ್ಲೆಯಲ್ಲಿ ಬರೋಬ್ಬರಿ 11 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ತರಹೇವಾರಿ ಮಾವು ಬೆಳೆಯಲಾಗುತ್ತಿದ್ದು, ವಿಶೇಷವಾಗಿ ನಿಲಂ, ಬೆಂಗಳೂರಾ, ಮಲ್ಲಿಕಾ, ಬೇನಿಷಾ, ಬಾದಾಮಿ ಮತ್ತಿತರ ಹಣ್ಣುಗಳು ಹೆಚ್ಚು ಪ್ರಸಿದ್ಧಿ ಆಗಿವೆ. ಆದರೆ ಈ ಬಾರಿ ಮಾವಿನ ಮರಗಳು ಹೂವು ಬಿಡುವ ಸಂದರ್ಭದಲ್ಲಿ ಮಳೆ ಬಿದ್ದ ಪರಿಣಾಮ ಮಾವಿನ ಇಳುವರಿ ಕುಸಿದಿದೆ. ಜೊತೆಗೆ ಹವಾಮಾನ ವೈಪರೀತ್ಯವು ಮಾವಿನ ಮೇಲೆ ದುಷ್ಪರಿಣಾಮ ಬೀರಿದೆ. ಕೆಲವು ಮಾವಿನ ತಳಿಗಳು ಒಂದು ವರ್ಷ ಫ‌ಸಲು ಬಿಟ್ಟರೆ ಮತ್ತೂಂದು ವರ್ಷ ಫ‌ಸಲು ಬಿಡುವುದಿಲ್ಲ. ಹೀಗೆ ಹಲವು ಕಾರಣಗಳಿಂದ ಜಿಲ್ಲೆಯಲ್ಲಿ ಈ ವರ್ಷ ಮಾವು ನಿರೀಕ್ಷಿತ ಪ್ರಮಾಣದಲ್ಲಿ ಮಾರುಕಟ್ಟೆ ಪ್ರವೇಶಿಸುವುದು ಅನುಮಾನವಾಗಿದೆ.

ಕೋವಿಡ್ ಆತಂಕ: ಈಗಾಗಲೇ ಜಿಲ್ಲೆಯ ರೈತರಿಗೆ ಕೋವಿಡ್ ಸಂಕಷ್ಟ ಹೆಚ್ಚಾಗಿದೆ. ಬೆಳೆದ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಇಲ್ಲದೇ ತತ್ತರಿಸಿದ್ದು, ಪ್ರತಿ ವರ್ಷ ವಿದೇಶಗಳಿಗೆ
ರಫ್ತಾಗುತ್ತಿದ್ದ ಜಿಲ್ಲೆಯ ಮಾವು ಈ ಬಾರಿ ರಫ್ತು ಆಗುವುದು ಅನುಮಾನವಾಗಿದೆ. ಇದರಿಂದ ಬೆಳೆಗಾರರಿಗೆ ತಕ್ಕ ಬೆಲೆ ಹಾಗೂ ಮಾರುಕಟ್ಟೆ ಸಿಗುವುದೇ ಎಂಬುದನ್ನು
ಕಾದು ನೋಡಬೇಕಿದೆ.

ಜಿಲ್ಲೆಯಲ್ಲಿ ಒಟ್ಟು 11 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಇದ್ದು ಈ ಬಾರಿ ಹವಾ ಮಾನ ವೈಪರೀತ್ಯ ಹಾಗೂ ಎರಡು ವರ್ಷಕ್ಕೆ ಒಮ್ಮೆ ಮಾವು ಫ‌ಸಲಿನಲ್ಲಿ ಬದಲಾವಣೆ
ಆಗುವುದರಿಂದ ಸಹಜವಾಗಿ ಈ ವರ್ಷ ಶೇ.3 0 ರಿಂದ 40 ರಷ್ಟು ಮಾವು ಫ‌ಸಲು ಬಂದಿದೆ. ಮಾವು ಮಾರುಕಟ್ಟೆಗೆ ಬರುವುದರೊಳಗೆ ಲಾಕ್‌ ಡೌನ್‌ ಸಡಿಲಗೊಳ್ಳುವ ವಿಶ್ವಾಸವಿದೆ.
● ಕುಮಾರಸ್ವಾಮಿ, ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ

ಜಿಲ್ಲೆಯಲ್ಲಿ ಈ ವರ್ಷ ಮಾವಿನ ಫ‌ಸಲು ಶೇ.70 ರಷ್ಟು ಕುಸಿದಿದೆ. ಶೇ.25ರಿಂದ ಶೇ.30 ರಷ್ಟು ಫ‌ಸಲು ಬಂದಿದೆ. ಮಾವು ಮೇ ಅಂತ್ಯದ ವೇಳೆಗೆ ಮಾರುಕಟ್ಟೆಗೆ ಬರಲಿದ್ದು, ಕೊರೊನಾ ವೈರಸ್‌ ಪರಿಣಾಮ ಇಡೀ ಜಗತ್ತು ಗೃಹ ಬಂಧನದಲ್ಲಿರುವ ಪರಿಣಾಮ ಮಾವುಗೆ ವಿದೇಶಗಳಿಂದ ಬೇಡಿಕೆ ಇಲ್ಲದೇ ರೈತರಿಗೆ ನಷ್ಟ ಉಂಟಾಗುವ ಸಾಧ್ಯತೆ ಇದೆ.
● ಕೆ.ಶ್ರೀನಿವಾಸರೆಡ್ಡಿ, ಜಿಲ್ಲಾಧ್ಯಕ್ಷರು, ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘ

Advertisement
Advertisement

Udayavani is now on Telegram. Click here to join our channel and stay updated with the latest news.

Next