ಹವಾಮಾನ ವೈಪರೀತ್ಯ ಭಾರತ ಮಾತ್ರವಲ್ಲದೆ ಇಡೀ ವಿಶ್ವದ ಪಾಲಿಗೆ ಬಲುದೊಡ್ಡ ಸವಾಲಾಗಿ ಪರಿಣಮಿಸಿದೆ. ಹವಾಮಾನ ಬದಲಾವಣೆಯನ್ನು ನಿಯಂತ್ರಣದಲ್ಲಿಡುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆಗಳು, ಅಧ್ಯಯನಗಳು ನಡೆದು ವಿವಿಧ ಹಂತದಲ್ಲಿ ನಿರ್ಣಯಗಳನ್ನು ಕೈಗೊಂಡು ಅವುಗಳನ್ನು ಜಾರಿಗೊಳಿ ಸಲಾಗುತ್ತಿದ್ದರೂ ಇದರಿಂದ ಸಮಸ್ಯೆಗೆ ಹೇಳಿಕೊಳ್ಳು ವಂತಹ ಪರಿಹಾರವನ್ನೇನೂ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಹವಾಮಾನ ಬದಲಾವಣೆಯ ಪರಿಣಾಮಗಳ ಚರ್ಯೆಗಳು ಮಾರ್ಪಾಡುಗೊಳ್ಳುತ್ತಿರುವುದು ಬಿಟ್ಟರೆ ಈ ಸಮಸ್ಯೆಯ ನಾಗಾ ಲೋಟಕ್ಕೆ ಕಡಿವಾಣ ಹಾಕಲು ಜಾಗತಿಕ ಸಮುದಾಯಕ್ಕೆ ಸಾಧ್ಯವಾಗಿಲ್ಲ.
ಪ್ರಸಕ್ತ ವರ್ಷ ಅಂದರೆ 2023 ಜಗತ್ತಿನ ಬಹುತೇಕ ಎಲ್ಲೆಡೆ ಹವಾಮಾನದ ವಿಚಿತ್ರ ಸನ್ನಿವೇಶ ಸೃಷ್ಟಿಯಾದಂತಿದೆ. ಅದರಲ್ಲೂ ಭಾರತ ಹಿಂದೆಂದೂ ಕಂಡರಿಯದ ತಾಪವನ್ನು ಎದುರಿಸುತ್ತಿದ್ದು ಇನ್ನೂ 2 ತಿಂಗಳುಗಳ ಕಾಲ ದೇಶದ ನೆಲವನ್ನು ಬಿಸಿಲಿನ ಝಳ ಸುಡಲಿದೆ ಎಂಬ ಆತಂಕಕಾರಿ ಮುನ್ನೆಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.
ಈ ಬಾರಿ ಚಳಿಗಾಲ ಅಧಿಕೃತವಾಗಿ ಅಂತ್ಯಗೊಳ್ಳುವುದಕ್ಕೂ ಮುನ್ನವೇ ಬಿಸಿಲಿನ ಕಾವು ದೇಶದೆಲ್ಲೆಡೆ ಹೆಚ್ಚಾಗಿತ್ತು. ದಕ್ಷಿಣ ಮತ್ತು ಉತ್ತರ ಭಾರತ ಸಹಿತ ದೇಶದ ಬಹು ತೇಕ ಪ್ರದೇಶಗಳಲ್ಲಿ ಜನವರಿ ಅಂತ್ಯದಿಂದಲೇ ತಾಪಮಾನ ಒಂದೇ ಸಮನೆ ಹೆಚ್ಚಾಗ ತೊಡಗಿತ್ತು. ವಾಡಿಕೆಯ ಪ್ರಕಾರ ದೇಶದ ಪಶ್ಚಿಮ ಕರಾವಳಿಗೆ ಮುಂಗಾರು ಮಾರುತ ಗಳು ಪ್ರವೇಶಿಸಲು ಇನ್ನೂ ಎರಡು ತಿಂಗಳುಗಳಿವೆ. ಈ ಸಂದರ್ಭದಲ್ಲಿಯೇ ಭೂಮಿ ಒಲೆಯ ಮೇಲಿಟ್ಟ ಕಾವಲಿಯಂತಾಗಿದೆ.
ಇದೇ ವೇಳೆ ದೇಶದ ವಿವಿಧೆಡೆಗಳಲ್ಲಿ ಒಂದು ಸುತ್ತಿನ ಮಳೆ ಸುರಿದಿದೆ. ಬಹುತೇಕ ಭಾಗಗಳಿಗೆ ಇದು ಅಕಾಲಿಕ ಮಳೆ. ಈ ಮಳೆ ಕಾದಿದ್ದ ನೆಲವನ್ನು ಒಂದಿಷ್ಟು ತಣ್ಣಗಾ ಗಿಸಿದ್ದರೂ ಇದರಿಂದ ಹೆಚ್ಚೇನೂ ಪ್ರಯೋಜನ ಲಭಿಸಿಲ್ಲ. ಅತಿಯಾದ ತಾಪಮಾನದ ಕಾರಣದಿಂದಾಗಿ ಸಿಡಿಲಿನ ಆರ್ಭಟದೊಂದಿಗೆ ಈ ಮಳೆ ಸುರಿದಿದೆ. ಇದರಿಂದಾಗಿ ಒಂದಿಷ್ಟು ಪ್ರಾಣಹಾನಿಯೂ ಸಂಭವಿಸಿದೆ. ಮತ್ತೆ ಹಲವೆಡೆ ಆಲಿಕಲ್ಲು ಮಳೆ ಸುರಿದಿದೆ. ಇದರಿಂದಾಗಿ ಭಾರೀ ಪ್ರಮಾಣದಲ್ಲಿ ಬೆಳೆ ಹಾನಿ ಸಂಭವಿಸಿದೆ. ಜೂನ್‌ವರೆಗೆ ಅತಿಯಾದ ತಾಪಮಾನ ಮತ್ತು ಮಳೆಯ ಜುಗಲ್‌ಬಂದಿ ಮುಂದುವರಿ ಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಅಕಾಲಿಕ ಮತ್ತು ಆಲಿಕಲ್ಲು ಮಳೆಯ ಪರಿಣಾಮ ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶಗಳಲ್ಲಿ ಸುಮಾರು 5.23 ಲಕ್ಷ ಹೆಕ್ಟೇರ್‌ಗಳಷ್ಟು ಪ್ರದೇಶದಲ್ಲಿನ ಗೋಧಿ ಬೆಳೆಗೆ ಹಾನಿಗೀಡಾಗಿದ್ದರೆ ಗೋಧಿ ಬೆಳೆಯುವ ದೇಶದ ಪ್ರಮುಖ ರಾಜ್ಯ ಗಳಾದ ಪಂಜಾಬ್ ಮತ್ತು ಹರಿಯಾಣದಲ್ಲಿ ಇನ್ನಷ್ಟೇ ನಷ್ಟದ ಪ್ರಮಾಣವನ್ನು ಅಂದಾ ಜಿಸಬೇಕಿದೆ. ರಬಿ ಋತುವಿನ ಬೆಳೆಗಳ ಕಟಾವಿನ ಹಂತಕ್ಕೆ ತಲುಪಿದ್ದು ಈ ಸಂದರ್ಭ ದಲ್ಲಿ ಅಕಾಲಿಕ ಮಳೆ ಸುರಿದ ಪರಿಣಾಮ ವ್ಯಾಪಕ ನಷ್ಟ ಸಂಭವಿಸಿದೆ. ಅಕಾಲಿಕ ತಾಪಮಾನ ಏರಿಕೆಯಿಂದ ಏಕದಳ ಮತ್ತು ದ್ವಿದಳ ಧಾನ್ಯಗಳ ಇಳುವರಿ ಮೇಲೆ ಪರಿಣಾಮ ಬಿದ್ದಿದ್ದರೆ ಈಗ ಅಕಾಲಿಕ ಮಳೆ ಮತ್ತಷ್ಟು ನಷ್ಟವನ್ನುಂಟು ಮಾಡಿದೆ.
ಹವಾಮಾನ ವೈಪರೀತ್ಯದಿಂದಾಗಿ ಒಂದೆಡೆಯಿಂದ ದೇಶದ ಆಹಾರ ಉತ್ಪಾ ದನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದರೆ ರೈತಾಪಿ ವರ್ಗ ತೀವ್ರ ಸಂಕಷ್ಟಕ್ಕೀಡಾಗಿದೆ. ದೇಶದ ಪ್ರಮುಖ ಆಹಾರ ಬೆಳೆಯಾದ ಗೋಧಿಯ ಇಳುವರಿ ಪ್ರಮಾಣ ಕಡಿಮೆಯಾಗಲಿದ್ದು ಆಹಾರ ಭದ್ರತೆಗೂ ಸವಾಲಾಗಿ ಪರಿಣಮಿಸಿದೆ. ಕೃಷಿ ಕ್ಷೇತ್ರದಲ್ಲಿನ ಹಿನ್ನಡೆ ದೇಶದ ಒಟ್ಟಾರೆ ಆರ್ಥಿಕತೆಗೂ ಹೊಡೆತ ನೀಡಲಿದೆ. ಈ ಎಲ್ಲ ಬೆಳವಣಿಗೆಗಳ ಬಗ್ಗೆ ಸರಕಾರ ಅಗತ್ಯ ಕ್ರಮ ತೆಗೆ ದುಕೊಳ್ಳಬೇಕಿದೆ.