ಶಹಾಬಾದ: ಸ್ಮಶಾನದ ತುಂಬಾ ಬೆಳೆದಿದ್ದ ಮುಳ್ಳು ಕಂಠಿ ತೆರವುಗೊಳಿಸಲಾಯಿತು. ದಾರಿ ಕಾಣದೇ ಇದ್ದ ಸ್ಮಶಾನಕ್ಕೆ ಜೆಸಿಬಿ ಬಳಸಿ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಲಾಯಿತು.
ಕೊಳಸಾ ಫೈಲ್ ಬಡಾವಣೆಯಲ್ಲಿ ಯಾರಾದರೂ ಸತ್ತರೇ ಸಾವಿನ ಶೋಕಕ್ಕಿಂತ ಸ್ಮಶಾನಕ್ಕೆ ಶವ ಸಾಗಿಸುವ ನೋವೇ ಹೆಚ್ಚಾಗಿತ್ತು. ಸ್ಮಶಾನಕ್ಕೆ ದಾರಿಯಿಲ್ಲದೇ ಅನೇಕ ವರ್ಷಗಳಿಂದ ಇಲ್ಲಿನ ಜನರು ತೊಂದರೆ ಪಡುತ್ತಿದ್ದರು. ಸ್ಮಶಾನಕ್ಕೆ ಹೋಗಬೇಕಾದರೆ ಸರ್ಕಸ್ ಮಾಡುತ್ತಾ ಶವವನ್ನು ಎತ್ತಿಕೊಂಡು ಹೋಗಬೇಕಾದ ಪ್ರಸಂಗ ಎದುರಾಗಿತ್ತು. ಮಳೆಗಾಲದಲ್ಲಿ ಮೊಣಕಾಲುದ್ದ ನೀರು, ಕಾಲು ಜಾರುವ ಭಯದಲ್ಲಿ ಹೆಣ ಹೊತ್ತು ಸಾಗುವಂಥ ಪರಿಸ್ಥಿತಿ ಇತ್ತು. ಈ ಬಗ್ಗೆ ಮೂಲಸೌಲಭ್ಯ ಒದಗಿಸಿ ಕೊಡಬೇಕು ಎಂದು ಸಾರ್ವಜನಿಕರು ಅಳಲು ತೋಡಿಕೊಂಡರೂ ಅಧಿಕಾರಿಗಳು ಸ್ಪಂದಿಸಿರಲಿಲ್ಲ. ಈ ಕುರಿತು ಡಿಸೆಂಬರ್ 4ರಂದು “ಉದಯವಾಣಿ’ಯಲ್ಲಿ “ಕೊಳಸಾ ಫೈಲ್ ಸ್ಮಶಾನ ಅಭಿವೃದ್ಧಿ ಯಾವಾಗ?’ ಎಂಬ ತಲೆಬರಹದಡಿ ಮೂಡಿಬಂದ ವರದಿಗೆ ಸ್ಪಂದಿಸಿದ ನಗರಸಭೆಯ ಪೌರಾಯುಕ್ತರು ತಕ್ಷಣವೇ ಇಡೀ ಸ್ಮಶಾನದಲ್ಲಿ ಬೆಳೆದು ನಿಂತಿದ್ದ ಮುಳ್ಳು ಕಂಠಿಗಳನ್ನು, ಕಲ್ಲುಗಳನ್ನು ತೆರವುಗೊಳಿಸಲಾಯಿತು.
ಸ್ಮಶಾನದಲ್ಲಿನ ಹುಲ್ಲು, ಪೊದೆಯಲ್ಲಿನ ಗಿಡಗಳನ್ನು ಸ್ವತ್ಛಗೊಳಿಸಿ ಸುಡಲಾಯಿತು. ಇದರಿಂದ ಇಲ್ಲಿನ ಬಡಾವಣೆಯ ಜನರಿಗೆ ಸ್ಮಶಾನಕ್ಕೆ ಹೋಗಲು ಸಂಕಷ್ಟ ಪಡುತ್ತಿದ್ದ ಜನರಿಗೆ ಕೊಂಚ ಸಂತಸ ವ್ಯಕ್ತವಾಗಿದೆ. ಅಲ್ಲದೇ ಇದೇ ರೀತಿ ನಗರದ ಸಮಸ್ಯೆಗಳಿಗೆ ಸ್ಪಂದಿಸಿದರೇ ಏನೆಲ್ಲ ಬದಲಾವಣೆ ಕಾಣಬಹುದೆಂಬುದು ಸಾರ್ವಜನಿಕರ ಅಭಿಪ್ರಾಯ ವ್ಯಕ್ತವಾಗಿದೆ. ರುದ್ರಭೂಮಿಯಲ್ಲಿ ಕೊಳವೆ ಬಾವಿ, ಕೋಣೆಗಳನ್ನು ಹಾಗೂ ಕಾಂಪೌಂಡ್ ಪೂರ್ಣಗೊಳಿಸಿದರೇ ಅನುಕೂಲವಾಗುತ್ತದೆ ಎಂದು ಬಡಾವಣೆ ಜನರ ಆಗ್ರಹವಾಗಿದೆ.
ಕೊಳಸಾ ಫೈಲ್ ರುದ್ರಭೂಮಿಗೆ ಸರಿಯಾದ ದಾರಿ ಇರಲಿಲ್ಲ. ಅಲ್ಲದೇ ಮುಳ್ಳು ಕಂಟಿಗಳಿಂದ ಕೂಡಿತ್ತು. ಅನೇಕ ಬಾರಿ ಅಧಿಕಾರಿಗಳಿಗೆ ತಿಳಿಸಿದರೂ ಕ್ಯಾರೇ ಎನ್ನುತ್ತಿರಲಿಲ್ಲ. ಆದರೆ “ಉದಯವಾಣಿ’ ವರದಿ ಗಮನಿಸಿ ರುದ್ರಭೂಮಿಯನ್ನು ಸ್ವತ್ಛಗೊಳಿಸಿದ ಪೌರಾಯುಕ್ತರ ಕ್ರಮಕ್ಕೆ ಸ್ಥಳೀಯ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
–ಮನೋಹರ್ ಮೇತ್ರೆ, ಕೊಳಸಾ ಫೈಲ್ ಬಡಾವಣೆ ನಿವಾಸಿ
ಸದ್ಯ ಶವ ಸಂಸ್ಕಾರಕ್ಕೆ ತೊಡಕಾಗಿದೆ ಎಂದು “ಉದಯವಾಣಿ” ವರದಿಯಿಂದ ತಿಳಿದು ಬಂದಿದ್ದರಿಂದ ರುದ್ರಭೂಮಿಯನ್ನು ಸ್ವತ್ಛಗೊಳಿಸಲಾಗಿದೆ. ಎಲ್ಲವನ್ನು ನಗರ ಸಭೆಯಿಂದಲೇ ಮಾಡಲು ಸಾಧ್ಯವಿಲ್ಲ. ಆದಷ್ಟು ಆಯಾ ಸಮಾಜದ ಜನರು ರುದ್ರ ಭೂಮಿಯನ್ನು ಸ್ವತ್ಛವಾಗಿಟ್ಟುಕೊಳ್ಳಲು ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರ ಸಹಭಾಗಿತ್ವ ದೊರೆತರೆ ನಗರಸಭೆಯಿಂದ ಕ್ರಮ ಕೈಗೊಳ್ಳಲು ಸಾಧ್ಯ.
–ಡಾ| ಕೆ.ಗುರಲಿಂಗಪ್ಪ ಪೌರಾಯುಕ್ತರು ನಗರಸಭೆ