Advertisement

ಜಿಲ್ಲೆಯಲ್ಲಿ ನೀಲಗಿರಿ ತೆರವು ಕಾರ್ಯಕ್ಕೆ ಚಾಲನೆ

05:00 PM Feb 23, 2020 | Suhan S |

ರಾಮನಗರ: ಅಂತರ್ಜಲ ಕಾಪಾಡಲು 2016-17ನೇ ಸಾಲಿನಲ್ಲಿ ಸರ್ಕಾರ ನೀಲಗಿರಿ ಮರಗಳನ್ನು ಕಟಾವು ಮಾಡಲು ಆದೇಶ ನೀಡ ಲಾಗಿತ್ತಾದರೂ, ರಾಮನಗರ ಜಿಲ್ಲೆಯಲ್ಲಿ ಈಗಷ್ಟೇ ನೀಲಗಿರಿ ಕಟಾವು ಕಾರ್ಯ ಆರಂಭವಾಗಿದೆ.

Advertisement

ಅಂತರ್ಜಲ ಕಡಿಮೆಯಾಗಲು ನೀಲಗಿರಿ ಮರಗಳು ಕಾರಣ ಎಂಬ ಹಿನ್ನೆಲೆಯಲ್ಲಿ ಸರ್ಕಾರ ರಾಜ್ಯದ ಅರಣ್ಯ ಪ್ರದೇಶದಲ್ಲಿ ನೀಲಗಿರಿ ಸಸಿಗಳನ್ನ  ನೆಡಲು ನಿಷೇಧಿಸಿದೆ. ಹಾಲಿ ಇರುವ ನೀಲಗಿರಿ ಮರಗಳನ್ನು ಹಂತ ಹಂತವಾಗಿ ತೆರವುಗೊಳಿಸಲು ಮುಂದಾಗಿದೆ. ರಾಮನಗರ ಜಿಲ್ಲೆಯಲ್ಲಿ ನೀಲಗಿರಿ ಮರಗಳ ಕಟಾವು ಈಗಷ್ಟೇ ಆರಂಭವಾಗಿದೆ. ನೀಲಗಿರಿ ಮರಗಳ ಜೊತೆಗೆ ಜಿಲ್ಲೆಯಲ್ಲಿ ಅಕೇಷಿಯಾ ಮರಗಳನ್ನು ಸಹ ತೆರವು ಗೊಳಿಸಲಾಗುತ್ತಿದೆ. ನೀಲಗಿರಿ ಮರಗಳು ನೀರು ಹೀರಿ ಅಂತರ್ಜಲ ಮಟ್ಟದ ಕುಸಿತಕ್ಕೆ ಕಾರಣವಾಗುತ್ತಿವೆ ಎಂಬ ಮಾತು 1980ನೇ ಸಾಲಿನಿಂದ ವ್ಯಕ್ತವಾಗುತ್ತಿದೆ. ರಾಜ್ಯದ ಕೆಲವು ಕಡೆ ರೈತರು ನೀಲಗಿರಿ ಮರಗಳು ನೀರನ್ನು ಹೀರುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿ ಸರ್ಕಾರದ ಗಮನ ಸೆಳೆದಿದ್ದರು. ಇದೇ ಕಾರಣಕ್ಕೆ ಸರ್ಕಾರ 2011ರ ಮಾರ್ಚ್‌ನಲ್ಲಿ ನೀಲಗಿರಿ ಸಸಿ ನೆಡಬೇಡಿ ಎಂದು ಆದೇಶ ಹೊರೆಡಿಸಿದೆ. 2017ರ ಜನವರಿಯಲ್ಲಿ ಅಕೇಶಿಯಾ ಆರಿಕ್ಯುಲಿಫಾರ್ಮಿಸ್‌ ಎಂಬ ಪ್ರಬೇಧದ ಸಸಿ ನೆಡದಿರುವಂತೆ ಆದೇಶಿಸಿದೆ.

ಪ್ರೋತ್ಸಾಹ ನೀಡದಂತೆ ಆದೇಶ: ಸರ್ಕಾರದ 25.2.2017ರ ಸುತ್ತೋಲೆಯಲ್ಲಿ ಅರಣ್ಯ ಪ್ರದೇಶ ಮತ್ತು ಸರ್ಕಾರಿ ಜಮೀನುಗಳಲ್ಲಿ ನೀಲಗಿರಿ ಸಸಿಗಳನ್ನು ಬೆಳೆಸುವುದನ್ನು ನಿಷೇದಿಸಿದೆ. ನೀಲಗಿರಿ ನೆಡು ತೋಪುಗಳನ್ನು ಕಟಾವು ಮಾಡಿ ಅವುಗಳ ಬದಲಿಗೆ ಬೇರೆ ಉಪಯುಕ್ತ ಸ್ಥಳೀಯ ಜಾತಿಯ ನೆಡು ತೋಪುಗಳನ್ನು ಬೆಳಸಬೇಕು ಎಂದು ನಿರ್ದೇಶನ ನೀಡಿದೆ. ಅಲ್ಲದೆ ನೀಲಗಿರಿ ಬೆಳೆಯ ಬಗ್ಗೆ ರೈತರಿಗೆ, ಸಾರ್ವಜನಿಕರಿಗೆ ಅಥವಾ ಖಾಸಗಿ ಸಂಸ್ಥೆಗಳಿಗೆ ಯಾವುದೇ ಪ್ರೋತ್ಸಾಹ ಹಾಗೂ ತಾಂತ್ರಿಕತೆ ಒದಗಿಸಬಾರದು ಎಂದು ಸ್ಟಷ್ಟ ಅದೇಶ ಹೊರೆಡಿಸಿದೆ. ಸದರಿ ಆದೇಶದನ್ವಯ 2016-17ನೇ ಸಾಲಿನಿಂದ ನೀಲಗಿರಿ ಮತ್ತು ಅಕೇಶಿಯಾ ಆರಿಕ್ಯು ಲಿಫಾರ್ಮಿಸ್‌ ಸಸಿಗಳನ್ನು ಅರಣ್ಯ ಇಲಾಖೆ ನೆಡುವುದನ್ನು ನಿಲ್ಲಿಸಿದೆ.

ಉರುವಲು ಬಳಕೆಗೆ: ಜಿಲ್ಲೆಯಲ್ಲಿ ರಾಮನಗರ, ಚನ್ನ ಪಟ್ಟಣ, ಮಾಗಡಿ, ಕನಕಪುರ ಮತ್ತು ಸಾತನೂರಿನಲ್ಲಿಅರಣ್ಯ ವಲಯಗಳಿದ್ದು, ಅಡುಗೆ, ಇತ್ಯಾದಿಗೆ ಕಟ್ಟೆಗೆಯೇ ಆಧಾರವಾಗಿದ್ದ ಕಾರಣ ಅರಣ್ಯ ಮತ್ತು ಸರ್ಕಾರಿ ಭೂಮಿಯಲ್ಲಿ ನೀಲಗಿರಿ ಮರಗಳನ್ನು ಬೆಳೆಸಲಾಗುತ್ತಿತ್ತು. ರಾಮನಗರ ಜಿಲ್ಲೆಯಲ್ಲಿ 1967-68ನೇ ಸಾಲಿನಿಂದಲೇ ನೀಲಗಿರಿ ಮರಗಳನ್ನು ಬೆಳೆಸಲಾಗಿದೆ. ರಾಮ ನಗರ ಮತ್ತು ಮಾಗಡಿ ವಲಯಗಳಲ್ಲಿ ನೀಲ ಗಿರಿ ಮರಗಳ ಸಂಖ್ಯೆ ಹೆಚ್ಚಾಗಿದೆ. ರಾಮನಗರ ವಲಯದಲ್ಲಿ ನೀಲಗಿರಿ ಮರಗಳ ಸಾಂದ್ರತೆ ಹೆಚ್ಚಾಗಿರುವುದು ಹಂದಿಗೊಂದಿ ಮತ್ತು ಹುಲ್ತಾರ್‌ ಅರಣ್ಯ ಪ್ರದೇಶದಲ್ಲಿ. ಮಾಗಡಿ ವಲಯದಲ್ಲಿ ಸಾವನದುರ್ಗ ಅರಣ್ಯ ಪ್ರದೇಶ, ಸಿದ್ದದೇವರ ಬೆಟ್ಟ ಪ್ರದೇಶಗಳಲ್ಲಿ ನೀಲಗಿರಿ ಮರಗಳ ಸಾಂದ್ರತೆ ಹೆಚ್ಚಾಗಿದೆ.

ನೀಲಗಿರಿ ಕಟಾವು ಆಗಿಲ್ಲ! :  ಅರಣ್ಯ ಇಲಾಖೆಯ ವರ್ಕಿಂಗ್‌ ಪ್ಲಾನ್‌ ಪ್ರಕಾರ ರಾಮನಗರ ವಲಯದಲ್ಲಿ 2016-17ನೇ ಸಾಲಿನಿಂದಲೇ ನೀಲಗಿರಿ ಮರಗಳ ಕಟಾವು ಆರಂಭವಾಗಬೇಕಿತ್ತು. 2016-17ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 890 ಹೆಕ್ಟೇರ್‌ನಲ್ಲಿದ್ದ ನೀಲಗಿರಿ ಮತ್ತು ಅಕೇಶಿಯಾ ಮರಗಳನ್ನು ಕಟಾವು ಗೊಳಿಸ ಬೇಕಿತ್ತು. ರಾಮನಗರ ವಲವೊಂದರಲ್ಲೇ 98 ಹೆಕ್ಟೇರ್‌ನಲ್ಲಿ ನೀಲಗಿರಿ ಮರಗಳನ್ನು 240 ಹೆಕ್ಟೇರ್‌ ಪ್ರದೇಶದಲ್ಲಿ ಅಕೇಶಿಯಾ ಮರಗಳನ್ನು ತೆರವುಗೊಳಿಸಬೇಕಿತ್ತು 2017-18ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 926 ಹೆಕ್ಟೇರ್‌

Advertisement

ಅರಣ್ಯ ಪ್ರದೇಶದಲ್ಲಿ ನೀಲಗಿರಿ ಮತ್ತು ಅಕೇಶಿಯಾ ಮರಗಳನ್ನು ಕಟಾವು ಮಾಡಬೇಕಿತ್ತು. ಈ ಪೈಕಿ ಮಾಗಡಿ ವಲಯದ ಸಾವನದುರ್ಗ ಅರಣ್ಯಪ್ರದೇಶದಲ್ಲಿ 30 ಹೆಕ್ಟೇರ್‌, ಸಿದ್ದದೇವರ ಬೆಟ್ಟ ಅರಣ್ಯ ಪ್ರದೇಶದಲ್ಲಿ 50 ಹಕ್ಟೇರ್‌, ಬಂತರಕುಪ್ಪೆ ಅರಣ್ಯ ಪ್ರದೇಶದಲ್ಲಿ 100ಕ್ಕೂ ಹೆಕ್ಟೇರ್‌ ಪ್ರದೇಶದಲ್ಲಿ ನೀಲಗಿರಿ ಮರಗಳನ್ನು ತೆರವುಗೊಳಿಸಬೇಕಿತ್ತು. 2018-19ನೇ ಸಾಲಿನಲ್ಲಿ 845 ಹೆಕ್ಟೇರ್‌ ಪ್ರದೇಶದಲ್ಲಿ ನೀಲಗಿರಿ ಮರಗಳನ್ನು ತೆರವು ಕಾರ್ಯ ನಡೆಯಬೇಕಿತ್ತು. 2019-20ನೇ ಸಾಲಿಗೆ 283 ಹೆಕ್ಟೇರ್‌ನಲ್ಲಿ ನೀಲಗಿರಿ ಮರಗಳು ಮತ್ತು 2020-21ನೇ ಸಾಲಿನಲ್ಲಿ 155 ಹೆಕ್ಟೇರ್‌ನಲ್ಲಿ ನೀಲಗಿರಿ ಮರಗಳ ಕಟಾವು ಯೋಜನಾ ವರದಿ ಪ್ರಕಾರ ಪ್ರಕಾರ ನಡೆಯಬೇಕಿತ್ತು. ಆದರೆ ಕೆಲವು ತಿಂಗಳುಗಳ ಹಿಂದಿ ನಿಂದ ನೀಲಗಿರಿ ತೆರವು ಕಾರ್ಯ ಆರಂಭವಾಗಿದೆ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.

ನೀಲಗಿರಿ ಏನು ಮಾಡ್ತಾರೆ? :  ರಾಜ್ಯದಲ್ಲಿ ನೀಲಗಿರಿ ಮರಗಳ ಕಟಾವನ್ನು ಅರಣ್ಯ ಇಲಾಖೆಯ ಅಂಗ ಸಂಸ್ಥೆಯಾದ ಕರ್ನಾಟಕ ಸ್ಟೇಟ್‌ ಫಾರೆಸ್ಟ್‌ ಇಂಡಸ್ಟ್ರೀಸ್‌ ಕಾರ್ಪೋರೇಷನ್‌ ವಹಿಸಿಕೊಂಡಿದೆ. ಕಟಾವು ಮಾಡಿದ ಮರಗಳನ್ನು ಸಂಸ್ಥೆ ಸಾರ್ವಜನಿಕರಿಗೆ ಹರಾಜು ಮಾಡುತ್ತದೆ. ನೀಲಗಿರಿ ಮರಗಳನ್ನು ಕೆಲವು ಕಾರ್ಖಾನೆಗಳು ಕಟ್ಟಿಗೆಯಾಗಿ ಬಳಸಲು ಮತ್ತು ನೀಲಗಿರಿ ಎಣ್ಣೆ ತೆಗೆಯಲು ಬಳಕೆ ಮಾಡಿಕೊಳ್ಳುತ್ತಾರೆ.

 

-ಬಿ.ವಿ.ಸೂರ್ಯ ಪ್ರಕಾಶ್‌

Advertisement

Udayavani is now on Telegram. Click here to join our channel and stay updated with the latest news.

Next