ಲೋಕಾಪುರ: ಪಟ್ಟಣದ ಬಾಗಲಕೋಟೆ ರಸ್ತೆಯಲ್ಲಿ ತಾಲೂಕು ಆಡಳಿತದ ಅನುಮತಿಯಿಲ್ಲದೇ ಪ್ರತಿಷ್ಠಾಪಿಸಲಾಗಿದ್ದ ಜ್ಯೋತಿ ಬಾ ಫುಲೆ ನಾಮಫಲಕ, ರಾಯಣ್ಣ ಮೂರ್ತಿ ಹಾಗೂ ಚನ್ನಮ್ಮನ ಮೂರ್ತಿಯನ್ನು ಪೊಲೀಸ್ ಸರ್ಪಗಾವಲಿನಲ್ಲಿ ತೆರವುಗೊಳಿಸಲಾಗಿದೆ ಎಂದು ತಹಶೀಲ್ದಾರ್‌ರು ತಿಳಿಸಿದ್ದಾರೆ.
ಮೂರ್ತಿ ತೆರವು ವಿರೋಧಿಸಿ ವೆಂಕಟಾಪುರದಲ್ಲಿ ನಡೆದ ಪೂರ್ವಭಾವಿ ಸಭೆಯ ಕುರಿತು ಪ್ರತಿಕ್ರಿಯೆ ನೀಡಿದ ತಹಶೀಲ್ದಾರ್‌ರು, ಪರವಾನಗಿ ಪಡೆಯದೇ ಸ್ಥಾಪನೆ ಮಾಡಿದ್ದರು. ರಾಯಣ್ಣ ಮೂರ್ತಿಯನ್ನು ಸ್ವಯಂ ಪ್ರೇರಿತವಾಗಿ ತೆರವುಗೊಳಿಸಲು ಎರಡು ದಿನ ಕಾಲಾವಕಾಶ ನೀಡಲಾಗಿತ್ತು.
ನಾಲ್ಕು ದಿನದ ಅಂತರದಲ್ಲಿ ಎರಡು ಸಮುದಾಯದವರು ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿದ್ದರಿಂದ ಪಟ್ಟಣದಲ್ಲಿ ಅಶಾಂತಿ ಸಾಮಾಜಿಕ ಘರ್ಷಣೆ ಉಂಟಾಗುವ ಸಾಧ್ಯತೆ ಗಳಿದ್ದರಿಂದ ಮುಂಜಾಗ್ರತ ಕ್ರಮವಾಗಿ ಕಾನೂನು ರೀತಿಯಲ್ಲಿ ತೆರವುಗೊಳಿಸಲಾಗಿದೆ. ಮೂರ್ತಿಗಳಿಗೆ ಯಾವುದೇ ರೀತಿಯ ಹಾನಿ ಉಂಟಾಗಿಲ್ಲ. ತೆರವುಗೊಳಿಸಲಾದ ಮೂರ್ತಿಗಳು ತಾಲೂಕು ಆಡಳಿತದ ವಶದಲ್ಲಿ ಸುರಕ್ಷಿತವಾಗಿವೆ ಎಂದು ತಿಳಿಸಿದ್ದಾರೆ. ಕಂದಾಯ ಇಲಾಖೆಗೆ ಸೇರಿದ ಸರ್ಕಾರಿ ಜಮೀನಿನಲ್ಲಿ ಜ. 20 ರಂದು ರಾಯಣ್ಣ ಅಭಿಮಾನಿಗಳು ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದರು.
ಅದೇ ದಿನ ಸಾಯಂಕಾಲ ತಾಲೂಕಾಡಳಿತದವರು ಆಗಮಿಸಿ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ಸ್ವಯಂ ಪ್ರೇರಿತವಾಗಿ ತೆರವುಗೊಳಿಸಲು ಮನವಿ ಮಾಡಿದರು. ಅದೇ ಪ್ರದೇಶದಲ್ಲಿ ಜ. 2 ರಂದು ಕಿತ್ತೂರ ರಾಣಿ ಚನ್ನಮ್ಮನ ಅಭಿಮಾನಿಗಳು ರಾಣಿ ಚನ್ನಮ್ಮ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರು. ತಹಶೀಲ್ದಾರ್ ನೇತೃತ್ವದಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಜ್ಯೋತಿ ಬಾಫುಲೆ ನಾಮಫಲಕ, ಸಂಗೊಳ್ಳಿ ರಾಯಣ್ಣ ಮೂರ್ತಿ ಹಾಗೂ ಕಿತ್ತೂರ ಚನ್ನಮ್ಮನ ಮೂರ್ತಿಯನ್ನು ತೆರವುಗೊಳಿಸಿದ್ದಾರೆ.