Advertisement

ತೆರವು: 93 ದೇಗುಲಗಳ ಪಟ್ಟಿ  ಸಿದ್ಧ: ಮೈಸೂರಿನಲ್ಲಿ  ಕಾರ್ಯಾಚರಣೆಗೆ ಜನರ ತೀವ್ರ ವಿರೋಧ

12:05 AM Sep 13, 2021 | Team Udayavani |

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿರುವ 93 ಧಾರ್ಮಿಕ ಕಟ್ಟಡಗಳ ತೆರವಿಗೆ ಮಹಾನಗರ ಪಾಲಿಕೆ ಮುಂದಾಗಿದ್ದು, ಜನರಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ.

Advertisement

ಸರಕಾರಿ, ಸಾರ್ವಜನಿಕ ಸ್ಥಳ, ರಸ್ತೆ ಬದಿ ಅನಧಿಕೃತವಾಗಿ ಧಾರ್ಮಿಕ ಕಟ್ಟಡಗಳಿದ್ದರೆ ತೆರವು ಮಾಡುವಂತೆ ಸುಪ್ರೀಂ ಕೋರ್ಟ್‌ ಮೌಖೀಕ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಕೆಲವು ಧಾರ್ಮಿಕ ಕಟ್ಟಡಗಳನ್ನು ಈಗಾಗಲೇ ತೆರವು ಮಾಡಲಾಗಿದೆ.

ಇದಕ್ಕೆ ಜನರಿಂದ ಭಾರೀ ಆಕ್ರೋಶ ವ್ಯಕ್ತವಾಗಿರುವ ಕಾರಣ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಈವರೆಗೆ ತೆರವು ಮಾಡಿರುವ ಕಟ್ಟಡಗಳು, ಪಟ್ಟಿಯಲ್ಲಿರುವ ಕಟ್ಟಡಗಳ ಬಗ್ಗೆ ಮನಪಾ ಸರಕಾರಕ್ಕೆ ವರದಿ ನೀಡಲು ಮುಂದಾಗಿದೆ.

93 ಕಟ್ಟಡ ಗುರುತು :

ನಗರದ ವಿವಿಧ ಭಾಗಗಳಲ್ಲಿ ಇರುವ 88 ಹಿಂದೂ ದೇಗುಲ, ಸೆಂಟ್‌ ಮೇರೀಸ್‌ ರಸ್ತೆಯ ಸಿಎಸ್‌ಐ ಚರ್ಚ್‌, ನಗರದ ದೇವರಾಜ ಅರಸು ರಸ್ತೆಯಲ್ಲಿರುವ ಗೋರಿ, ರೋಟರಿ ಶಾಲೆಯ ಪಕ್ಕದ ಗೋರಿ, ಪೀಪಲ್ಸ್‌ ಪಾರ್ಕ್‌ ಬಳಿಯ ಗೋರಿ ಮತ್ತು ಕಾಂತರಾಜ ಅರಸ್‌ ರಸ್ತೆಯಲ್ಲಿರುವ ದರ್ಗಾ ಸಹಿತ 93 ಧಾರ್ಮಿಕ ಕಟ್ಟಡಗಳನ್ನು ನೆಲಸಮ ಮಾಡಲು ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಮುಂದಾಗಿದೆ.

Advertisement

ಈಗಾಗಲೇ ಐದಕ್ಕೂ ಹೆಚ್ಚು ದೇಗುಲಗಳನ್ನು ತೆರವು ಮಾಡಿದ್ದು, ಉಳಿದ ದೇಗುಲಗಳ ತೆರವಿಗೆ ದೇವಾಲಯ ಸಮಿತಿಗಳಿಗೆ ಪಾಲಿಕೆ ನೋಟಿಸ್‌ ನೀಡಿದೆ. ಇದರಿಂದ ಕುಪಿತಗೊಂಡಿರುವ ದೇವಸ್ಥಾನ ಆಡಳಿತ ಮಂಡಳಿಗಳು, ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ದೇಗುಲಗಳನ್ನು ತೆರವು ಮಾಡದಂತೆ ಆಗ್ರಹಿಸಿದ್ದಾರೆ.

ನಂಜನಗೂಡು ಉಚ್ಚಗಣಿ ಗ್ರಾಮದ ಆದಿಶಕ್ತಿ ಮಹದೇವಮ್ಮ ದೇವಾಲಯವನ್ನು ರಾತೋರಾತ್ರಿ ಜಿಲ್ಲಾಡಳಿತ ತೆರವು ಮಾಡಿರುವ ಸಂಬಂಧ ರಾಜ್ಯಾದ್ಯಂತ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ದೇಗುಲಗಳೇ ಗುರಿ ಏಕೆ? :

ಅನಧಿಕೃತ ಕಟ್ಟಡಗಳು ಎಂದು ಹೇಳಿ ಶೇ. 90ರಷ್ಟು ಹಿಂದೂ ದೇಗುಲಗಳ ನೆಲಸಮ ಮಾಡುವ ಜಿಲ್ಲಾಡಳಿತ ಮತ್ತು ಪಾಲಿಕೆ ಕ್ರಮಕ್ಕೆ ಜನಪ್ರತಿನಿಧಿಗಳೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ದೇಗುಲಗಳನ್ನೇ ಗುರಿ ಮಾಡುತ್ತಿರುವುದೇಕೆ? ದರ್ಗಾ, ಚರ್ಚ್‌ಗಳನ್ನೇಕೆ ತೆರವು ಮಾಡಿಲ್ಲ ಎಂದು ಸಂಸದ ಪ್ರತಾಪಸಿಂಹ ಪ್ರಶ್ನಿಸಿದ್ದಾರೆ.

ಯತ್ನಾಳ್‌ ಖಂಡನೆ :

ದೇಗುಲಗಳನ್ನು ತೆರವು ಮಾಡು ತ್ತಿರುವುದು  ಖಂಡನೀಯ ಎಂದು ವಿಜಯಪುರ ನಗರ   ಶಾಸಕ ಬಸನ ಗೌಡ  ಯತ್ನಾಳ್‌ ಹೇಳಿದ್ದಾರೆ.

ಹಿಂದೂ ಹೆಸರಿನಲ್ಲಿಯೇ ರಾಜಕೀಯ ಅಸ್ತಿತ್ವ ಕಂಡುಕೊಂಡ ಬಿಜೆಪಿ ಆಡಳಿತದಲ್ಲಿ ಹಿಂದೂ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ. ಬೆಲೆ ಏರಿಕೆ ಹಿಂದೂಗಳನ್ನು ಕಾಡುತ್ತಿದೆ. ಹಿಂದೂ ದೇವಾಲಯಗಳನ್ನು ಸರಕಾರವೇ ಕೆಡವುತ್ತಿದೆ. ಅಸಲಿಗೆ ಬಿಜೆಪಿ ಆಡಳಿತದಲ್ಲಿ ಹಿಂದೂಗಳೇ ಅಪಾಯದಲ್ಲಿದ್ದಾರೆ.-ಕರ್ನಾಟಕ ಕಾಂಗ್ರೆಸ್‌(ಟ್ವೀಟ್‌)

ಸುಪ್ರೀಂ ಕೋರ್ಟ್‌ ಆದೇಶ ಮತ್ತು ಸಿಎಸ್‌ ಸೂಚನೆ ಮೇರೆಗೆ ಅನಧಿ ಕೃತ ಕಟ್ಟಡಗಳ ತೆರವು ಕಾರ್ಯಾ ಚರಣೆ ಆರಂಭಿಸಲಾಗಿತ್ತು.  ಸಾರ್ವಜನಿಕರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.– ಡಾ| ಬಗಾದಿ ಗೌತಮ್‌, ಮೈಸೂರು  ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next