ಕಾರಟಗಿ: ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲಾ ವಿಭಾಗದ ಮುಖ್ಯದ್ವಾರದ ಪಕ್ಕದಲ್ಲಿನ ಖಾಲಿ ಜಾಗೆಯಲ್ಲಿ ಕೆಲ ಪ್ರಭಾವಿಗಳು ಒತ್ತುವರಿ ಮಾಡಿ ಸ್ಥಳದಲ್ಲೇ ಶೆಡ್ ನಿರ್ಮಿಸಿ ವ್ಯಾಪಾರ ನಡೆಸುತ್ತಿದ್ದು, ಈ ಕುರಿತು ಪ್ರೌಢಶಾಲೆ ಪ್ರಾಂಶುಪಾಲರು ಸೇರಿ ಕಾಲೇಜು ಆಡಳಿತ ಮಂಡಳಿ ಸ್ಥಳೀಯ ಪುರಸಭೆ ಮತ್ತು ಪಿಎಸ್‌ಐಗೆ ಮೂರು ಬಾರಿ ಮನವಿ ಸಲ್ಲಿಸಿದ್ದರೂ ಶೆಡ್ ತೆರವಿಗೆ ಮುಂದಾಗಿಲ್ಲ ಎಂದು ಕಾಲೇಜಿನ ಪ್ರಾಚಾರ್ಯ ಅನಿಲಕುಮಾರ ದೂರಿದ್ದಾರೆ.
ಪಟ್ಟಣದ ಕಾರಟಗಿ-ನವಲಿ ಮುಖ್ಯ ರಸ್ತೆಯಲ್ಲಿರುವ ಈ ಪ್ರೌಢಶಾಲೆಯ ಗೇಟ್ ಪಕ್ಕದಲ್ಲೇ ಪ್ರಭಾವಿ ವ್ಯಕ್ತಿಯೊಬ್ಬರು ಎರಡು ದಿನಗಳ ಹಿಂದೆ ಜಾಗೆ ಒತ್ತುವರಿ ಮಾಡಿಕೊಂಡು ಶೆಡ್ ಹಾಕಿಕೊಂಡಿದ್ದಾರೆ. ಈ ತರಹ ಈಗಾಗಲೇ ಕಾಂಪೌಂಡ್ ಸುತ್ತಲೂ 8 ಕಡೆ ಒತ್ತುವರಿ ಮಾಡಿ ಸಂತೆ ಮಾರುಕಟ್ಟೆ ತರಹ ವಾತಾವರಣ ಸೃಷ್ಟಿಸಿ ಶೈಕ್ಷಣಿಕ ವಾತಾವರಣವನ್ನೇ ಹದಗೆಡಿಸಿದ್ದಾರೆ. ಈ ಕುರಿತು ದೂರು ಸಲ್ಲಿಸಿದರೂ ಸಂಬಂಧಿಸಿದ ಪುರಸಭೆ ಆಡಳಿತ ಯಾವುದನ್ನು ಗಣನೆಗೆ ತೆಗೆದುಕೊಂಡಿಲ್ಲ. ದಿನೇ ದಿನೆ ಶೆಡ್‌ಗಳು ಹೆಚ್ಚಾಗುತ್ತಿವೆ. ಪುರಸಭೆ ಆಡಳಿತ ಮಂಡಳಿ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಶಾಲೆಯ ಪ್ರಾಚಾರ್ಯರು ಅಸಹಾಯಕತೆ ವ್ಯಕ್ತಪಡಿಸಿದರು.
ಶಾಲೆ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಬೈಕ್, ಸೈಕಲ್ ನಿಲ್ಲಿಸಲು ಕಚೇರಿಗೆ ಬರುವ ಸಾರ್ವಜನಿಕರ, ಪೋಷಕರ ವಾಹನಗಳನ್ನು ನಿಲ್ಲಿಸಲು ಸ್ಥಳವಕಾಶ ಇಲ್ಲದಂತಾಗಿದೆ. ಶೆಡ್‌ಗಳನ್ನು ಕಿತ್ತು ಹಾಕಿ ಜಾಗೆಯನ್ನು ಖಾಲಿ ಮಾಡಿಸಿಕೊಡಬೇಕೆಂದು ಪುರಸಭೆ ಮುಖ್ಯಾಧಿಕಾರಿಗಳಿಗೆ ಮತ್ತೂಮ್ಮೆ ಆಗ್ರಹಿಸುವುದಾಗಿ ತಿಳಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿಗಳು, ಸಂಬಂಧಿಸಿದ ಶಾಲಾ ಆಡಳಿತ ಮಂಡಳಿಯವರು, ಅಲ್ಲಿನ ಪ್ರಾಂಶುಪಾಲರು ಶೆಡ್ ಹಾಕುವ ಮುಂಚೆ, ಒತ್ತುವರಿ ಮಾಡುವ ಮುಂಚೆ ಅವರಿಗೆ ಪಾಠ ಕಲಿಸಬೇಕಿತ್ತು. ಆದರೆ ಅದನ್ನು ಮಾಡದೇ ಈಗ ಪುರಸಭೆಯವರಿಗೆ ಮನವಿ ಸಲ್ಲಿಸಿದರೆ ನಾವೇನು ಮಾಡುವುದು. ಅವರು ಬೇಕಾದರೆ ಪೊಲೀಸ್ ರಕ್ಷಣೆಯಲ್ಲಿ ಅಕ್ರಮ ಶೆಡ್‌ಗಳನ್ನು ಕಿತ್ತು ಹಾಕಿಸಿಕೊಳ್ಳಲಿ ಎಂದರು.
ಈ ಬಗ್ಗೆ ಸಂಬಂಧಿಸಿದ ಶಾಲಾಡಳಿತ ಮಂಡಳಿ ಅಧ್ಯಕ್ಷ ಸ್ಥಾನದಲ್ಲಿರುವ ಶಾಸಕರಾಗಲಿ, ಇನ್ನಿತರ ಸದಸ್ಯರು ಮುಂದೆ ನಿಂತು ಪಟ್ಟಣದ ಮಕ್ಕಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ಶೆಡ್‌ಗಳನ್ನು ಕಿತ್ತು ಹಾಕಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಶಾಲೆಯಲ್ಲಿ ಶೈಕ್ಷಣಿಕ ವಾತಾವರಣ ಕಾಪಾಡುವುದು ಕಷ್ಟವಾಗಬಹುದು ಎಂದು ಪ್ರಾಚಾರ್ಯ ಅನಿಲಕುಮಾರ ಹೇಳಿದರು.