Advertisement

ಜಮೀನಿನಲ್ಲಿ ಪೊದೆ, ನೀಲಗಿರಿ ಬೆಳೆಸಿದ್ದರೆ ತೆರವುಗೊಳಿಸಿ

09:22 PM Mar 04, 2020 | Lakshmi GovindaRaj |

ಕುಣಿಗಲ್‌: ಚಿರತೆ ಹಾವಳಿ ತಡೆಗೆ ತಾಲೂಕು ಆಡಳಿತ ಎಲ್ಲಾ ರೀತಿಯ ಕ್ರಮ ಕೈಗೊಂಡಿದ್ದು, ರೈತರು ಕೃಷಿ ಚಟಿವಟಿಕೆ ಮಾಡದೆ ಜಮೀನಿನಲ್ಲಿ ಪೊದೆ, ನೀಲಗಿರಿ ಮರಗಳು ಬೆಳೆದಿದ್ದರೆ ತಕ್ಷಣ ತೆರವುಗೊಳಿಸಬೇಕು. ಇಲ್ಲವಾದಲ್ಲಿ ಕರ್ನಾಟಕ ಭೂ ಕಂದಾಯ ಅಧಿನಿಯಮದಡಿ ವಶಕ್ಕೆ ಪಡೆಯಲಾಗುವುದು ಎಂದು ತಹಶೀಲ್ದಾರ್‌ ವಿ.ಆರ್‌.ವಿಶ್ವನಾಥ್‌ ಎಚ್ಚರಿಸಿದರು.

Advertisement

ತಾಪಂ ಸಭಾಂಗಣದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ತುಮಕೂರು, ಕುಣಿಗಲ್‌, ಗುಬ್ಬಿ ಗಡಿಭಾಗದಲ್ಲಿ ಚಿರತೆ ದಾಳಿ ನಿರಂತರವಾಗಿದೆ. ಇದರಿಂದ ಸಾಕು ಪ್ರಾಣಿಗಳು ಹಾಗೂ ಮಾನವನ ಪ್ರಾಣ ಹಾನಿಯೂ ಸಂಭವಿಸಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ಎಲ್ಲಾ ರೀತಿಯ ಕ್ರಮ ಕೈಗೊಂಡಿದೆ. ಅಲ್ಲದೆ ಈ ಸಂಬಂಧ ಕರಪತ್ರ ಮುದ್ರಿಸಿ ಹಾಗೂ ಗ್ರಾಮ ಪಂಚಾಯಿತಿ, ಅಂಗನವಾಡಿ ನೌಕರರ ಮೂಲಕ ವಿತರಣೆ ಮಾಡಿಸಿ ಜಾನ ಜಾಗೃತಿ ಮೂಡಿಸುವಂತ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

ಸರ್ಕಾರಿ ಜಮೀನು, ಕೆರೆ, ಕಟ್ಟೆ, ಕಾಲುವೆಗಳಲ್ಲಿ ಇರುವ ಪೊದೆ, ಗಿಡ ಗಂಟಿ ತೆರವುಗೊಳಿಸುವ ಸಂಬಂಧ ಈಗಾಗಲೇ ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಿಗರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆ ಕರೆದು ನಿರ್ದೇಶನ ನೀಡಲಾಗಿದೆ. ತೆರವು ಕಾರ್ಯ ನಾಳೆಯಿಂದಲೇ ಪ್ರಾರಂಭವಾಗಲಿದೆ. ಅಲ್ಲದೆ ಸಣ್ಣ, ದೊಡ್ಡ ಇಳುವರಿ ರೈತರು ಹಲವು ವರ್ಷಗಳಿಂದ ತಮ್ಮ ಜಮೀನಿನಲ್ಲಿ ಯಾವುದೇ ಕೃಷಿ ಚಟುವಟಿಕೆ ಮಾಡದೆ ಜಮೀನಿನಲ್ಲಿ ಪೊದೆ,

ಗಿಡಗಂಟಿ ಹಾಗೂ ನಿಲಗಿರಿ ಮರಗಳು ಬೆಳೆದಿರುವುದರಿಂದ ಕಾಡು ಪ್ರಾಣಿಗಳ ವಾಸಕ್ಕೆ ಅನುಕೂಲವಾಗಿದೆ. ಆದ್ದರಿಂದ ರೈತರು ತಮ್ಮ ಜಮೀನುಗಳನ್ನು ಸ್ವತ್ಛಗೊಳಿಸಿಕೊಳ್ಳಿಸಿಕೊಂಡು ಅನುಕೂಲ ಮಾಡಿಕೊಡಬೇಕು. ಇಲ್ಲವಾದಲ್ಲಿ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ತೋಟ ಹಾಗೂ ಜಮೀನಿನಲ್ಲಿ ಮನೆ ಕಟ್ಟಿಕೊಂಡು ವಾಸವಾಗಿರುವ ಜನರು ಎಚ್ಚರಿಕೆ ವಹಿಸಬೇಕು. ಮನೆಯಿಂದ ಒಬ್ಬರೆ ಹೊರ ಬರಬಾರದು. ಮಕ್ಕಳ ಬಗ್ಗೆ ಅತಿ ಎಚ್ಚರ ವಹಿಸಬೇಕೆಂದರು.

ನಾಲ್ಕು ಚಿರತೆ ಸೆರೆ: ಜಿಲ್ಲೆಯ ಕುಣಿಗಲ್‌, ಹೆಬ್ಬೂರು, ಗುಬ್ಬಿ ಈ ಪ್ರದೇಶದಲ್ಲಿ ನಾಲ್ಕು ಚಿರತೆ ಹಿಡಿದು ಬನ್ನೇರಗಟ್ಟ, ಬಂಡಿಪುರಕ್ಕೆ ಕಳಿಸಿಕೊಡಲಾಗಿದೆ. ಈ ಭಾಗದಲ್ಲಿ ಈಗ 4ರಿಂದ 5 ಚಿರತೆ ಇರುವ ಸಂಬಂಧ ಮಾಹಿತಿ ಇದೆ. ಚಿರತೆ ಸೆರೆ ಹಿಡಿಯಲು ಬನ್ನಿಕುಪ್ಪೆ, ದೊಡ್ಡಮಲಳವಾಡಿ ಸೇರಿ ಮೊದಲಾದ ಕಡೆ 19ರಿಂದ 20 ಬೋನು ಇಡಲಾಗಿದೆ. ಅಲ್ಲದೆ ಅದರ ಚಲನವಲನ ಕಂಡು ಹಿಡಿಯಲು 70 ಟ್ರ್ಯಾಕ್‌ ಕ್ಯಾಮರಾ ಅಳವಡಿಸಲಾಗಿದೆ.

Advertisement

ಈಗಾಗಲೇ ಎಸ್‌ಟಿಪಿ ಹಾಗೂ ಸೋಲಿಗರ ತಂಡ ಕಾರ್ಯಚರಣೆ ಇಳಿದಿದ್ದು, ಇನ್ನೊಂದು ವಾರದಲ್ಲಿ ನರಭಕ್ಷಕ ಚಿರತೆ ಸೆರೆ ಹಿಡಿಯಲಾಗುವುದು. ಚಿರತೆ ಎಲ್ಲಾದರೂ ಕಂಡು ಬಂದಲ್ಲಿ ತಕ್ಷಣ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಅರಣ್ಯ ಇಲಾಖೆ ಅ ಕಾರಿಗಳಿಗೆ ಮಾಹಿತಿ ನೀಡುವಂತೆ ಆರ್‌ಎಫ್‌ಒ ಮಂಜುನಾಥ್‌ ಮನವಿ ಮಾಡಿದರು. ಗೋಷ್ಠಿಯಲ್ಲಿ ತಾಪಂ ಇಒ ಶಿವರಾಜಯ್ಯ, ಸಿಪಿಐ ನಿರಂಜನ್‌ಕುಮಾರ್‌ ಇದ್ದರು.

26 ಲಕ್ಷ ರೂ ಪರಿಹಾರ: 2018-19 ನೇ ಸಾಲಿನಲ್ಲಿ ಚಿರತೆ ದಾಳಿಯಿಂದ 146 ಸಾಕು ಪ್ರಾಣಿಗಳು ಮೃತಪಟ್ಟಿವೆ. ಈ ಸಂಬಂಧ 10.84 ಲಕ್ಷ ಪರಿಹಾರ ಹಾಗೂ ದಾಳಿಯಿಂದ ಸಣ್ಣಪುಟ್ಟ ಗಾಯಗೊಂಡ ಮೂವರಿಗೆ 92.846 ಸಾವಿರ ಪರಿಹಾರ ನೀಡಲಾಗಿದೆ. 2019-20ನೇ ಸಾಲಿನಲ್ಲಿ ಸಾಕು ಪ್ರಾಣಿಗಳ ಹತ್ಯೆ 123 ಪ್ರಕರಣ ದಾಖಲಾಗಿದೆ. ಅದರಲ್ಲಿ 40 ಪ್ರಕರಣದಲ್ಲಿ 2.25 ಲಕ್ಷ ರೂ. ಪರಿಹಾರ ನೀಡಲಾಗಿದೆ.

ಇನ್ನು ಉಳಿದ 83 ಪ್ರಕರಣಕ್ಕೆ 5.83 ಲಕ್ಷ ಪರಿಹಾರ ಬಾಕಿ ಇದೆ. ಪರಿಹಾರ ಹಣ ಬಂದಿದ್ದು, ಮಾ.15ರ ಒಳಗೆ ನೀಡಲಾಗುವುದು. ಮತ್ತೆ ಮೂರು ಮಂದಿ ಗಾಯಗೊಂಡ ಪ್ರಕರಣಕ್ಕೆ 1.20 ಲಕ್ಷ ಹಾಗೂ ದೊಡ್ಡಮಲಳವಾಡಿ ಗ್ರಾಮದ ಆನಂದಯ್ಯ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಲಾಗಿದೆ ಎಂದು ಆರ್‌ಎಫ್‌ಒ ಮಂಜುನಾಥ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next