Advertisement

ನೋಟಿಸ್‌ ನೀಡದೇ ಅಕ್ರಮ ಒತ್ತುವರಿ ತೆರವುಗೊಳಿಸಿ

04:15 PM Jul 08, 2018 | Team Udayavani |

ಹುಬ್ಬಳ್ಳಿ: ಮಹಾನಗರದ ಅಭಿವೃದ್ಧಿಗೆ ತೊಡಕಾಗಿರುವ ಅಕ್ರಮ ಒತ್ತುವರಿಯನ್ನು ನೋಟಿಸ್‌ ನೀಡದೆ ತೆರವುಗೊಳಿಸಬೇಕು. ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳದಿದ್ದರೆ ಯಾವುದೇ ಕೆಲಸಗಳು ಆಗುವುದಿಲ್ಲ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು. ಮಹಾನಗರ ಪಾಲಿಕೆ ಕಚೇರಿಯಲ್ಲಿ ನಡೆದ ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದ ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳ ಜಿಲ್ಲಾ ಅಭಿವೃದ್ಧಿಗೆ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ದಿಶಾ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Advertisement

ಅಕ್ರಮ ಒತ್ತುವರಿ ತೆರವಿಗೆ ನೋಟಿಸ್‌ ನೀಡಿದರೆ ಕೋರ್ಟ್‌ಗೆ ಹೋಗಿ ತಡೆಯಾಜ್ಞೆ ತರುತ್ತಾರೆ. ಇದರಿಂದ ನಿಗದಿತ ಅವಧಿಯೊಳಗೆ ಯೋಜನೆ ಪೂರ್ಣಗೊಳಿಸಲು ಸಾಧ್ಯವಿಲ್ಲ. ನಗರದಲ್ಲಿ ಅದೆಷ್ಟೋ ಯೋಜನೆಗಳು ಇಂತಹ ತಾಂತ್ರಿಕ ಕಾರಣದಿಂದ ನನೆಗುದಿಗೆ ಬಿದ್ದಿವೆ. ಅಕ್ರಮ ಒತ್ತುವರಿ ವಿರುದ್ಧ ಕಠಿಣ ಕ್ರಮ ಕೈಗೊಂಡರೆ ಮಾತ್ರ ಒಂದಿಷ್ಟು ಬದಲಾವಣೆ ತರಲು ಸಾಧ್ಯ ಎಂದರು. ನಗರದ ಸ್ವಚ್ಛತೆಗೆ ನೂರಾರು ಕೋಟಿ ರೂ. ಖರ್ಚು ಮಾಡಲಾಗುತ್ತದೆ. ಆದರೆ ನಗರದ ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ. ಸಣ್ಣ ಮಳೆಯಾದರೆ ಸಾಕು ಇಡೀ ರಸ್ತೆ ಧೂಳು ತುಂಬಿಕೊಳ್ಳುತ್ತದೆ. ಯಾವಾಗ ಮಹಾನಗರ ಧೂಳಿನಿಂದ ಮುಕ್ತವಾಗುತ್ತದೆ ಎಂದು ಸಂಸದ ಜೋಶಿ ಅಧಿಕಾರಿಗಳನ್ನು ಪ್ರಶ್ನಿಸಿದರು. ಪಾಲಿಕೆ ಆಯುಕ್ತ ಶಕೀಲ್‌ ಅಹ್ಮದ್‌ ಮಾತನಾಡಿ, ಪ್ರಮುಖ ರಸ್ತೆಗಳ ಸ್ವಚ್ಛತೆಗೆ ಆದ್ಯತೆ ನೀಡಲಾಗಿದ್ದು, ಮುಂದಿನ ಮೂರು ತಿಂಗಳಲ್ಲಿ ನಗರದ ಸ್ವಚ್ಛತೆ ಒಂದು ಹಂತಕ್ಕೆ ತಲುಪುತ್ತದೆ. ಮಹಾ ನಗದಲ್ಲಿರುವ ಕಂಟೇನರ್‌ಗಳನ್ನು ಶೀಘ್ರ ತೆಗೆಯಲಾಗುವುದು. ಮನೆಯಿಂದ ಕಸ ಸಂಗ್ರಹಿಸುವ ಕಾರ್ಯವನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದರು.

ಮಾಜಿ ಸಿಎಂ ಜಗದೀಶ ಶೆಟ್ಟರ ಮಾತನಾಡಿ, ಮಹಾಪೌರ ಹಾಗೂ ಆಯುಕ್ತರು ನಿತ್ಯ 2 ಗಂಟೆ ನಗರದಲ್ಲಿ ಓಡಾಡಿದರೆ ಸ್ವಚ್ಛತಾ ಕಾರ್ಯಗಳು ಸರಿಯಾಗಿ ನಡೆಯುತ್ತವೆ. ಖಾಲಿ ನಿವೇಶನಗಳ ಸ್ವಚ್ಛತೆ ಬಗ್ಗೆ ಪಾಲಿಕೆ ಸೂಕ್ತ ಗಮನ ಹರಿಸಬೇಕು. ಮಾಲೀಕರಿಗೆ ಸೂಚನೆ ನೀಡಬೇಕು. ಅವರು ಸ್ವಚ್ಛಗೊಳಿಸದಿದ್ದರೆ ಪಾಲಿಕೆಯಿಂದ ಕೆಲಸ ಮಾಡಿಸಿ ಮಾಲೀಕರಿಗೆ ದಂಡ ಹಾಕುವ ಕೆಲಸ ಆಗಬೇಕು. ನಗರದಲ್ಲಿನ ಅನಧಿಕೃತ ಜಾಹಿರಾತು ಹೋಲ್ಡಿಂಗ್‌ಗಳಿವೆ. ಬೇಕಾಬಿಟ್ಟಿಯಾಗಿ ದರ ವಿಧಿಸುತ್ತಿರುವುದು ಕಂಡು ಬಂದಿದೆ ಈ ಬಗ್ಗೆ ಸೂಕ್ತ ಗಮನಹರಿಸಿ ಪಾಲಿಕೆಯ ಆದಾಯದ ಕಡೆ ಹೆಚ್ಚು ಗಮನ ಹರಿಸುವಂತೆ ಸೂಚಿಸಿದರು.

ಹೆಚ್ಚುವರಿ ತೆರಿಗೆ: ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಪ್ಲಾಸ್ಟಿಕ್‌ ಉತ್ಪಾದಕರ ಮೇಲೆ ಶೇ.3 ಹೆಚ್ಚುವರಿ ತೆರಿಗೆ ವಿಧಿಸಲು ಅವಕಾಶವಿದ್ದು, ಈ ಹಣವನ್ನು ಸ್ವತ್ಛತೆಗೆ ಬಳಸಬಹುದಾಗಿದೆ. ಅಭಿವೃದ್ಧಿ ಯೋಜನೆಗಳ ಅನುಷ್ಠಾನದ ವಿಚಾರದಲ್ಲಿ ನಿರ್ಲಕ್ಷ ಮಾಡುವ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದರು.

ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆಗೆ ಒತ್ತು ನೀಡುವುದರ ಬದಲು ಕೇಂದ್ರ ಸರಕಾರದ ನಿರ್ಭಯ ಯೋಜನೆಯಲ್ಲಿರುವ ಅನುದಾನ ಬಳಸಲು ಯೋಚಿಸಬೇಕು. ಈ ಕುರಿತು ಬೆಂಗಳೂರಿನಲ್ಲಿ ಯೋಜನೆ ಸಿದ್ಧಪಡಿಸಿದ್ದು, ಅಲ್ಲಿನ ಅಧಿಕಾರಿಗಳನ್ನು ಸಂಪರ್ಕಸಿ ವಿಸ್ತೃತ ವರದಿ ತಯಾರಿಸಿ ಕೇಂದ್ರ ಸರಕಾರಕ್ಕೆ ಕಳುಹಿಸಿ ಮಂಜೂರು ಮಾಡಿಸಿಕೊಡುವುದಾಗಿ ಸಂಸದ ಜೋಶಿ ಭರವಸೆ ನೀಡಿದರು.

Advertisement

ಹೆಚ್ಚುವರಿ ಶುಲ್ಕ ವಸೂಲಿ: ನಗರದ ವಿವಿಧ ಕಡೆಗಳಲ್ಲಿ ಪಾಲಿಕೆಯಿಂದ ಟೆಂಡರ್‌ ಪಡೆದಿರುವ ಗುತ್ತಿಗೆದಾರರು ಬೇಕಾಬಿಟ್ಟಿಯಾಗಿ ಪಾರ್ಕಿಂಗ್‌ ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಜನರಿಗೆ ವಂಚನೆಯಾಗದಂತೆ ತಡೆಯುವ ನಿಟ್ಟಿನಲ್ಲಿ ತಂತ್ರಜ್ಞಾನ ಅಳವಡಿಕೆ ಕುರಿತು ಪಾಲಿಕೆ ಅಧಿಕಾರಿಗಳು ಚಿಂತಿಸಬೇಕು ಎಂದು ಸಭೆಯಲ್ಲಿ ಪ್ರಸ್ತಾಪವಾಯಿತು.

ಮಹಾಪೌರ ಸುಧೀರ ಸರಾಫ್, ಶಾಸಕ ಅಮೃತ ದೇಸಾಯಿ, ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ, ಉಪ ಮಹಾಪೌರ ಮೇನಕಾ ಹುರಳಿ, ವಿವಿಧ ಇಲಾಖೆಯ ಅಧಿಕಾರಿಗಳಿದ್ದರು.

ಸೋಲಾರ್‌ ಸಿಟಿ-ಅಸಮಾಧಾನ
ಸೋಲಾರ್‌ ಸಿಟಿ ನಿರ್ಮಾಣಕ್ಕಾಗಿ ಕಳೆದ 9 ವರ್ಷಗಳಿಂದ ವಿಸ್ತೃತ ಕ್ರಿಯಾ ಯೋಜನೆ ತಯಾರಿಸುವಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು ವಿಫ‌ಲರಾಗಿದ್ದಾರೆ. ಇಷ್ಟು ವರ್ಷಗಳು ಕಳೆದರೂ ಒಂದು ಕ್ರಿಯಾ ಯೋಜನೆ ಸಿದ್ಧಪಡಿಸಲು ಆಗಿಲ್ಲ. ಅಧಿಕಾರಿಗಳಿಗೆ ಯಾವುದೇ ಜವಾಬ್ದಾರಿ ಇಲ್ಲದಂತಾಗಿದೆ ಎಂದು ಸಂಸದ ಪ್ರಹ್ಲಾದ ಜೋಶಿ ಅಸಮಾಧಾನ ವ್ಯಕ್ತಪಡಿಸಿ, ಈ ಕುರಿತು ವರದಿ ತಯಾರಿಸಿ ದೆಹಲಿಗೆ ಬನ್ನಿ ಮಂಜೂರು ಪಡೆಯುವ ನಿಟ್ಟಿನಲ್ಲಿ ಪ್ರಯತ್ನಿಸೋಣ ಎಂದರು. ಜಿಲ್ಲಾಧಿಕಾರಿ ಡಾ|ಎಸ್‌.ಬಿ.ಬೊಮ್ಮನಹಳ್ಳಿ ಮಾತನಾಡಿ, ಸಭೆಗಳಲ್ಲಿ ಕೇವಲ ಕಾರಣ ಕೊಡುತ್ತೀರಿ ವಿನಃ ಪ್ರಗತಿ ಏನಿಲ್ಲ. 9 ವರ್ಷಗಳಿಂದ ಒಂದು ಯೋಜನೆಗೆ ಕ್ರಿಯಾ ಯೋಜನೆ ತಯಾರಿಸಲು ಯಾಕೆ ಆಗಿಲ್ಲ. ಇದಕ್ಕಾಗಿ ಓರ್ವ ಅಧಿಕಾರಿಯನ್ನು ನಿಯೋಜಿಸುವಂತೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next