Advertisement

1,806 ಸ್ಟ್ರಕ್ಚರ್‌ಗಳನ್ನು 15 ದಿನದಲ್ಲಿ ತೆರವುಗೊಳಿಸಿ

12:22 AM Nov 13, 2019 | Lakshmi GovindaRaju |

ಬೆಂಗಳೂರು: ಬಿಬಿಎಂಪಿಯಲ್ಲಿ ನಡೆದಿದೆ ಎನ್ನಲಾದ 2 ಸಾವಿರ ಕೋಟಿ ರೂ.ಗಳ ಜಾಹಿರಾತು ಅಕ್ರಮದ ಕುರಿತ ಸಿಐಡಿ ತನಿಖೆಯ ಪ್ರಗತಿ ವರದಿ ಸಲ್ಲಿಸುವಂತೆ ಹೈಕೋರ್ಟ್‌ ನಿರ್ದೇಶನ ನೀಡಿದ್ದು, 1,806 ಸ್ಟ್ರಕ್ಚರ್‌ಗಳನ್ನು 15 ದಿನದಲ್ಲಿ ತೆರವುಗೊಳಿಸಲು ಸೂಚಿಸಿದೆ. ಬೆಂಗಳೂರು ನಗರದ ವ್ಯಾಪ್ತಿಯಲ್ಲಿನ ಅನಧಿಕೃತ ಜಾಹಿರಾತು ಫ‌ಲಕಗಳನ್ನು ತೆರವುಗೊಳಿಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕಾ ಹಾಗೂ ನ್ಯಾ. ಪ್ರದೀಪ್‌ ಸಿಂಗ್‌ ಯೆರೂರ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ಈ ನಿರ್ದೇಶನ ನೀಡಿತು.

Advertisement

ಅಲ್ಲದೇ, ನಗರದಲ್ಲಿ ಅನಧಿಕೃತ ಹೋರ್ಡಿಂಗ್‌, ಜಾಹಿರಾತು ಫ‌ಲಕಗಳನ್ನು ತೆರವುಗೊಳಿಸಿದ ಬಳಿಕವೂ ಇನ್ನೂ ಹಾಗೆಯೇ ಉಳಿದಿರುವ 1,806 ಸ್ಟ್ರಕ್ಚರ್‌ಗಳನ್ನು 15 ದಿನಗಳಲ್ಲಿ ತೆರವುಗೊಳಿಸಬೇಕು ಎಂದು ನ್ಯಾಯಪೀಠ ಬಿಬಿಎಂಪಿಗೆ ನಿರ್ದೇಶನ ನೀಡಿದೆ. ಅರ್ಜಿ ವಿಚಾರಣೆ ವೇಳೆ ಕೆಲ ಕಾಲ ವಾದ-ಪ್ರತಿವಾದ ಆಲಿಸಿದ ಪೀಠ, ಸಿಐಡಿ ತನಿಖೆಯ ಪ್ರಗತಿ ವರದಿಯನ್ನು ಸಲ್ಲಿಸುವಂತೆ ನಿರ್ದೇಶನ ನೀಡಿ ವಿಚಾರಣೆಯನ್ನು ನ.20ಕ್ಕೆ ಮುಂದೂಡಿತು.

ಇದಕ್ಕೂ ಮೊದಲು ಅರ್ಜಿದಾರರ ಪರ ವಕೀಲ ಜಿ.ಆರ್‌. ಮೋಹನ್‌ ವಾದ ಮಂಡಿಸಿ, ಪಾಲಿಕೆಯ ಜಾಹೀರಾತು ವಿಭಾಗದ ಹೆಚ್ಚುವರಿ ಆಯುಕ್ತ ಕೆ.ಮಥಾಯ್‌ 2016ರಲ್ಲಿ ಸುಮಾರು ಅಕ್ರಮ ಜಾಹೀರಾತುಗಳಿಂದ ಪಾಲಿಕೆಗೆ 2 ಸಾವಿರ ಕೋಟಿ ಆದಾಯ ನಷ್ಟವಾಗಿದೆ ಎಂದು ವರದಿ ನೀಡಿದ್ದರು. ಅದನ್ನು ಆಧರಿಸಿ ಆ ಬಗ್ಗೆ ತನಿಖೆ ನಡೆಸುವ ಹೊಣೆಯನ್ನು ಸಿಐಡಿಗೆ ವಹಿಸುವಂತೆ, ಆಗ ಪಾಲಿಕೆ ಆಯುಕ್ತರು ಸರ್ಕಾರಕ್ಕೆ ಶಿಫಾರಸು ಮಾಡಿದ್ದರು.

ಅದರಂತೆ, ಸರ್ಕಾರ ಸಿಐಡಿ ತನಿಖೆಗೆ ಆದೇಶ ನೀಡಿದೆ. ಆದರೆ ತನಿಖೆ ಯಾವ ಹಂತದಲ್ಲಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು. ಈ ವಾದ ಪರಿಗಣಿಸಿ ತನಿಖಾ ಪ್ರಗತಿ ವರದಿ ಸಲ್ಲಿಸುವಂತೆ ನ್ಯಾಯಪೀಠ ಸೂಚನೆ ನೀಡಿತು. ಬಿಬಿಎಂಪಿ ಪರ ವಕೀಲರು ವಾದ ಮಂಡಿಸಿ, ಬೆಂಗಳೂರಿನಲ್ಲಿ ಒಟ್ಟು 3,862 ಅನಧಿಕೃತ ಜಾಹೀರಾತು ಫಲಕಗಳಿದ್ದವು, ಅವುಗಳಲ್ಲಿ 1,040ರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

ಹೈಕೋರ್ಟ್‌ ನಿರ್ದೇಶನದಂತೆ ಸ್ವಯಂ ತೆರವಿಗೆ ಅವಕಾಶ ನೀಡಿದಾಗ ಹಲವರು ತೆರವುಗೊಳಿಸಿದ್ದರು, ಇದೀಗ ಕೇವಲ 1,806 ಜಾಹೀರಾತು ಚೌಕಟ್ಟುಗಳಿವೆ. ಕೆಲವೊಂದಕ್ಕೆ ನ್ಯಾಯಾಲಯದ ತಡೆ ಇದೆ. ಒಂದೊಮ್ಮೆ ನ್ಯಾಯಾಲಯ ಆದೇಶಿಸಿದರೆ ಅವುಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಅಗ ಅರ್ಜಿದಾರರ ಪರ ವಕೀಲರು, ಏಕಸದಸ್ಯ ನ್ಯಾಯಪೀಠ ಚೌಕಟ್ಟು ತೆರವಿಗೆ ತಡೆ ನೀಡಿಲ್ಲ. ಆದರೂ ಪಾಲಿಕೆ ಸಮ್ಮನೆ ಕಾಲಹರಣ ಮಾಡುತ್ತಿದೆ ಎಂದು ಆಪಾದಿಸಿದರು.

Advertisement

ಅದಕ್ಕೆ ನ್ಯಾಯಪೀಠ, ಅವು ಅಕ್ರಮ ಎಂದು ಗೊತ್ತಿದ್ದರೂ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು. ಅದಕ್ಕೆ, ಪಾಲಿಕೆ ಆಗಲೇ ನೋಟಿಸ್‌ ನೀಡಿ ತೆರವುಗೊಳಿಸಲು ಕ್ರಮ ಕೈಗೊಂಡಿದೆ ಎಂದು ಸಮಜಾಯಿಷಿ ನೀಡಿದರು. ಹಾಗಿದ್ದರೆ ಪಾಲಿಕೆ ಮೊದಲು ತೆರವುಗೊಳಿಸಲಿ ಎಂದು ಹೇಳಿದರು. ಹದಿನೈದು ದಿನ ಕಾಲಾವಕಾಶ ನೀಡಿದರೆ ಬಾಕಿ ಇರುವ 1,806 ಜಾಹೀರಾತು ಫಲಕಗಳ ಚೌಕಟ್ಟನ್ನು ತೆರವುಗೊಳಿಸಲಾಗುವುದು ಎಂದು ಪಾಲಿಕೆ ಪರ ವಕೀಲರು ನ್ಯಾಯಪೀಠಕ್ಕೆ ಮನವಿ ಮಾಡಿದರು. ಅದನ್ನು ದಾಖಲಿಸಿಕೊಂಡ ನ್ಯಾಯಪೀಠ 15 ದಿನ ಸಮಯ ನೀಡಿತು.

ನ್ಯಾಯಾಂಗ ನಿಂದನೆ ಎಚ್ಚರಿಕೆ: ಬಿಬಿಎಂಪಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದ 2011ರಿಂದ 2016ನೇ ಸಾಲಿನ ಸಿಎಜಿ ಲೆಕ್ಕಪರಿಶೋಧನೆಯನ್ನು ಕಾಲಮಿತಿಯೊಳಗೆ ಮುಗಿಸುವಂತೆ ನಿರ್ದೇಶನ ನೀಡಬೇಕು ಎಂದು “ನಮ್ಮ ಬೆಂಗಳೂರು ಪ್ರತಿಷ್ಠಾನ’ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ 2019ರ ಅ.11 ಹಾಗೂ ಅ.25ರಂದು ನೀಡಲಾಗಿದ್ದ ಕೋರ್ಟ್‌ ಆದೇಶಗಳನ್ನು ಪಾಲನೆ ಮಾಡದ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಆರೋಪದಡಿ ಕ್ರಮ ಜರುಗಿಸುವುದಾಗಿ ಹೈಕೋರ್ಟ್‌ ಎಚ್ಚರಿಕೆ ನೀಡಿದೆ.

ಮಂಗಳವಾರ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ, ಕೋರ್ಟ್‌ ಆದೇಶ ಪಾಲನೆ ಯಾಕೆ ಮಾಡಿಲ್ಲ, ಹಾಗೂ ಅದಕ್ಕೆ ಹೊಣೆಹೊತ್ತ ಅಧಿಕಾರಿಗಳ ಹೆಸರು ಹಾಗೂ ಹುದ್ದೆಯ ವಿವರಗಳನ್ನೊಳಗೊಂಡ ಅಫಿಡವಿಟ್‌ನ್ನು ನ.26ರೊಳಗೆ ಸಂಬಂಧಪಟ್ಟ ಹಿರಿಯ ಅಧಿಕಾರಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿತು.

Advertisement

Udayavani is now on Telegram. Click here to join our channel and stay updated with the latest news.

Next