Advertisement

ಸ್ವಚ್ಛತೆ ಸಿಪಾಯಿ

09:46 AM Dec 01, 2019 | Team Udayavani |

ಹುಬ್ಬಳ್ಳಿ: ಮುಕ್ಕಾದ ದೇವರ ಪೋಟೋ ದೇವಸ್ಥಾನ ಆವರಣದಲ್ಲಿ ಇಡಬಾರದು, ದೇವಸ್ಥಾನದ ಸ್ವಚ್ಛತೆ ನಮ್ಮ ನಿಮ್ಮೆಲ್ಲರ ಕರ್ತವ್ಯ. ಇಂತಹ ಅಪಾಯಕಾರಿ ವಸ್ತುಗಳನ್ನು ಪಾಲಿಕೆ ವಾಹನಕ್ಕೆ ಕೊಟ್ಟು ಸಹಕರಿಸಿ…

Advertisement

ಇದು ಮಹಾನಗರ ಪಾಲಿಕೆ, ದೇವಸ್ಥಾನದ ಆಡಳಿತ ಮಂಡಳಿಯವರ ಮನವಿ ಅಥವಾ ಸೂಚನೆಯಲ್ಲ. ಮಹಾನಗರ ಪಾಲಿಕೆ ಘನ ತ್ಯಾಜ್ಯ ಸಾಗಿಸುವ ಆಟೋ ಟಿಪ್ಪರ್‌ ಚಾಲಕನ ಪರಿಸರ ಪ್ರಜ್ಞೆ ಹಾಗೂ ಸ್ವಚ್ಛತಾ ಅಭಿಯಾನವಾಗಿದೆ. ದೇವಸ್ಥಾನದ ಆವರಣ ಹಾಗೂ ಅಲ್ಲಿನ ಪ್ರಶಾಂತ ವಾತಾವರಣಕ್ಕೆ ಧಕ್ಕೆಯಾಗಬಾರದು ಎನ್ನುವ ಉದ್ದೇಶದಿಂದ ಆಟೋ ಟಿಪ್ಪರ್‌ ಚಾಲಕ ಮಲ್ಲಪ್ಪ ಯಾಮೋಜಿ ಜನರಲ್ಲಿ ಸ್ವಚ್ಛತೆ ಪ್ರಜ್ಞೆ ಮೂಡಿಸುವ ಕಾಯಕದಲ್ಲಿ ತೊಡಗಿದ್ದಾರೆ.

ಮಲ್ಲಪ್ಪ ಯಾಮೋಜಿ ಧಾರವಾಡದ 17ನೇ ವಾರ್ಡ್‌ನಲ್ಲಿ ಅತ್ಯಂತ ಪ್ರೀತಿಯ ಪೌರ ಕಾರ್ಮಿಕ. ಪರಿಸರ ಸ್ವಚ್ಛತೆ ಬಗೆಗಿನ ಕಾಳಜಿ ಹಾಗೂಕಾರ್ಯಗಳಿಂದ ಈ ಭಾಗದಲ್ಲಿ ಚಿರಪರಿಚಿತರು. ಕಳೆದ ಐದಾರು ವರ್ಷಗಳಿಂದಘನತ್ಯಾಜ್ಯ ಸಾಗಿಸುವ ಅಟೋ ಟಿಪ್ಪರ್‌ ಚಾಲಕರಾಗಿ ಗುತ್ತಿಗೆ ಆಧಾರದ ಮೇಲೆಕಾರ್ಯ ನಿರ್ವಹಿಸುತ್ತಿದ್ದಾರೆ. ನಸುಕಿನಲ್ಲೇ ಕಾರ್ಯಾರಂಭ ಮಾಡುವ ಮಲ್ಲಪ್ಪ ಶಿಸ್ತಿನ ಸಿಪಾಯಿ. ಕಲಿತದ್ದು ಏಳನೇ ತರಗತಿಯಾದರೂ ಇವರ ನಡೆ ನುಡಿಯಿಂದ ಇಲ್ಲಿನ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಜನರಲ್ಲಿ ಜಾಗೃತಿ :  ದೇವಸ್ಥಾನದ ಆವರಣ, ಉದ್ಯಾನವನ, ಕೆಲ ಮರಗಳ ಕೆಳಗೆ ಮುಕ್ಕಾದ ದೇವರ ಫೋಟೊಗಳನ್ನು ಬಿಸಾಡುವುದರಿಂದ ಜನರಿಗೆ ತೊಂದರೆ ಎನ್ನುವ ಕಾರಣಕ್ಕೆ ಹೊಸ ಅಭಿಯಾನ ಆರಂಭಿಸಿದ್ದಾರೆ. ತಮ್ಮ ವಾರ್ಡ್‌ ವ್ಯಾಪ್ತಿಯ ಪ್ರತಿಯೊಂದು ದೇವಸ್ಥಾನ, ಉದ್ಯಾನವನಗಳಿಗೆ ತೆರಳಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಸ್ವಂತ ಖರ್ಚಿನಲ್ಲಿ ಒಂದಷ್ಟು ಕರಪತ್ರ ಮುದ್ರಿಸಿ ಹಂಚುತ್ತಿದ್ದಾರೆ. ದೇವಸ್ಥಾನದ ಅರ್ಚಕರು, ಆಡಳಿತ ಮಂಡಳಿಯವರಿಗೆ ಭೇಟಿಯಾಗಿ ಅವರ ಅನುಮತಿಯೊಂದಿಗೆ ಫೋಟೋ ಬಿಸಾಡುವ ಸ್ಥಳದಲ್ಲಿ ಕರಪತ್ರ ಅಂಟಿಸುತ್ತಿದ್ದಾರೆ. ಆಟೋ ಟಿಪ್ಪರ್‌ನ ಮೈಕ್‌ ಸಹಾಯದಿಂದ ಈ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.

ಪೋಟೊಗಳಲ್ಲಿನ ಮೊಳೆ, ಒಡೆದ ಗಾಜು ಅಪಾಯಕಾರಿ ವಸ್ತುಗಳಿಂದ ಜನರಿಗೆ ಸಾಕಷ್ಟು ತೊಂದರೆ. ಮೇಲಾಗಿ ಪ್ರಶಾಂತವಾದ ಸ್ಥಳ ಕಲುಷಿತಗೊಳ್ಳುತ್ತದೆ ಎನ್ನುವ ಕಾರಣದಿಂದ ಮುಕ್ಕಾದ ದೇವರ ಫೋಟೊ, ಅಪಾಯಕಾರಿ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡದೆ ಪಾಲಿಕೆ ವಾಹನಕ್ಕೆ ಕೊಡಿ ನಾವು ತೆಗೆದುಕೊಂಡು ಹೋಗುತ್ತೇವೆ ಎನ್ನುವ ಸಂದೇಶ ಸಾರುತ್ತಿದ್ದಾರೆ.

Advertisement

ಸ್ವ ಮೌಲ್ಯಮಾಪನದ ನೌಕರ: ತಾವು ಮಾಡಿದ ಕೆಲಸದ ಬಗ್ಗೆ ಜನರಿಗೆ ತೃಪ್ತಿ ಇದೆಯೋ ಇಲ್ಲವೋ ಎಂದು ತಿಳಿದುಕೊಳ್ಳುವ ಮಲ್ಲಪ್ಪ ಇದಕ್ಕಾಗಿ ಅವರಿಂದ ಲಿಖೀತ ಅಭಿಪ್ರಾಯ ಪಡೆಯುತ್ತಾರೆ. ಹಿರಿಯ ಸಾಹಿತಿಗಳಾದ ಡಾ| ಎಂ.ಎಂ.ಕಲಬುರ್ಗಿ, ಗಿರಡ್ಡಿ ಗೋವಿಂದರಾಜು, ಚನ್ನವೀರ ಕಣವಿ, ಹೈಕೋರ್ಟ್‌ ನ್ಯಾಯಮೂರ್ತಿಗಳು ಸೇರಿದಂತೆ ಗಣ್ಯರಿಂದ ತಮ್ಮ ಕಾರ್ಯದ ಕುರಿತು ಅಭಿಪ್ರಾಯ ಪಡೆದಿದ್ದಾರೆ. ನಾವು ಮಾಡಿರುವ ಕೆಲಸ ತೃಪ್ತಿಯಿದೆಯಾ ಎನ್ನುವ ಕಾರಣಕ್ಕೆ ಸಂಗ್ರಹಿಸುತ್ತೇನೆ. ಅಭಿಪ್ರಾಯದಲ್ಲಿ ಸ್ವಚ್ಛತೆ ಕುರಿತು ಅಸಮಾಧಾನ ವ್ಯಕ್ತಪಡಿಸಿದರೆ ಅದನ್ನು ಪೂರ್ಣಗೊಳಿಸದೆ ಮತ್ತೂಂದು ಕೆಲಸ ಮಾಡುವುದಿಲ್ಲ ಎನ್ನುತ್ತಾರೆ ಮಲ್ಲಪ್ಪ ಯಾಮೋಜಿ.

ಮಲ್ಲಪ್ಪ ಯಮೋಜಿ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ. ಹೀಗೆ ಮಾಡಬೇಕು ಎಂದು ಯಾವ ಅಧಿಕಾರಿಯೂ ಹೇಳಿಲ್ಲ. ಸ್ವಯಂಪ್ರೇರಣೆಯಿಂದ ಸ್ವಂತ ಖರ್ಚಿನಲ್ಲಿ ಈ ಕಾರ್ಯಕ್ಕೆ ಮುಂದಾಗಿದ್ದಾರೆ. ಇವರ ಕಾರ್ಯ ಪ್ರತಿಯೊಬ್ಬರಿಗೂ ಮಾದರಿಯಾಗಿದೆ. ಡಾ| ಸುರೇಶ ಇಟ್ನಾಳ, ಮಹಾನಗರ ಪಾಲಿಕೆ ಆಯುಕ್ತ

ದೇವಸ್ಥಾನ ಹಾಗೂ ಅಲ್ಲಿನ ಆವರಣ ಭಕ್ತಿಯ ಕೇಂದ್ರ. ಇಂತಹ ಸ್ಥಳದಲ್ಲಿ ಮುಕ್ಕಾದ ದೇವರ ಫೋಟೋಗಳನ್ನು ಹಾಕುತ್ತಿರುವುದು ಸರಿಯಲ್ಲ. ಫೂಟೋದಲ್ಲಿ ಮೊಳೆ, ಗಾಜು ಅಪಾಯಕಾರಿ ವಸ್ತುಗಳು ಇರುವುದರಿಂದ ಅವುಗಳನ್ನು ಸಂಗ್ರಹಿಸಿ ಸಾಗಿಸಬೆಕು ಎನ್ನುವ ಉದ್ದೇಶದಿಂದ ಜನರಲ್ಲಿ ಜಾಗೃತಿ ಮೂಡಿಸುವುದು, ಕರಪತ್ರ ಹಂಚುವುದು  ಮಾಡುತ್ತಿದ್ದೇನೆ. ಮಲ್ಲಪ್ಪ ಯಾಮೋಜಿ, ಆಟೋ ಟಿಪ್ಪರ್‌ ಚಾಲಕ

Advertisement

Udayavani is now on Telegram. Click here to join our channel and stay updated with the latest news.

Next