Advertisement

ಹಳ್ಳಿಗಳಲ್ಲಿ ನಡೆಯಲಿದೆ ಶುಚಿತ್ವ ರ‍್ಯಾಂಕ್ ಸರ್ವೆ

02:32 PM Dec 29, 2021 | Team Udayavani |

ಬೆಂಗಳೂರು: ಗ್ರಾಮ ಸ್ವಚ್ಛತೆ ಸಂಬಂಧಿಸಿದಂತೆ ಕೇಂದ್ರದ ಸ್ವಚ್ಛ ಸರ್ವೇಕ್ಷಣ ತಂಡ , ರ್‍ಯಾಂಕಿಂಗ್‌ ನೀಡುವ ಸಂಬಂಧ ಹಳ್ಳಿಗರಿಂದಲೇ ಮಾಹಿತಿ ಪಡೆಯಲು ಮುಂದಾಗಿದೆ.

Advertisement

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಗ್ರಾಮೀಣ ಜನರ ಬಳಿಗೆ ಹೋಗಿ ಸ್ವಚ್ಛತೆ ವಿಚಾರದಲ್ಲಿ ಕೈಗೊಂಡಿರುವ ಕ್ರಮ ಹಾಗೂ ಪ್ರಗತಿಯ ಸಾಕ್ಷಾತ್‌ ದರ್ಶನ ಮಾಡಿ ಮಾಹಿತಿ ಸಂಗ್ರಹಿಸಿ ಆಯಾ ಜಿಲ್ಲೆಗಳಿಗೆ ಶ್ರೇಯಾಂಕ ಕುರಿತು‌ ವರದಿ ನೀಡಲಿದೆ. ಕೇಂದ್ರ ತಂಡ ಸದ್ಯದಲ್ಲೇ ಬೆಂಗಳೂರು ನಗರ ಜಿಪಂನ ಹಲವು ಗ್ರಾಪಂಗಳಿಗೆ ಭೇಟಿ ನೀಡಿ ನೇರ ಪರಿವೀಕ್ಷಣೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.

ತಂಡವು, ಕೇಂದ್ರದ ಕುಡಿಯುವ ನೀರು, ನೈರ್ಮಲ್ಯ ಇಲಾಖೆಯಡಿ ನಡೆದಿರುವ ಗ್ರಾಮೀಣ ನೈರ್ಮಲ್ಯ ಸುಧಾರಣೆ ಸೇರಿದಂತೆ ಮತ್ತಿತರರ ಪೂರಕ ಮಾಹಿತಿಗಳನ್ನು ಹಳ್ಳಿಗರಿಂದಲೇ ಕಲೆಹಾಕಲಿದೆ. ಪ್ರತಿಹಳ್ಳಿಯಲ್ಲಿ ವಯಕ್ತಿಕ ಗೃಹ ಶೌಚಾಲಯ, ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನೈರ್ಮಲ್ಯ ಮತ್ತು ಶುಚಿತ್ವದ ಪ್ರಗತಿ ದತ್ತಾಂಶಗಳ ಬಗ್ಗೆ ಮಾಹಿತಿ ಪಡೆಯಲಿದೆ.

ಒಟ್ಟು ಮೂರು ಹಂತಗಳಲ್ಲಿ ಜಿಲ್ಲೆಗಳಲ್ಲಿ ಮೌಲ್ಯಂಕನ ನಡೆಯಲಿದೆ. ಅದರಲ್ಲಿ ಒಂದು ಸಾರ್ವಜನಿಕರಿಂದ ನೇರವಾಗಿ ಮಾಹಿತಿಯನ್ನು ಪಡೆಯವುದಾಗಿದೆ. ಈ ಪ್ರಕ್ರಿಯೆಯಲ್ಲಿ ಹಳ್ಳಿಗರು ಆ್ಯಪ್‌ ಮತ್ತು ವೆಬ್‌ಸೈಟ್‌ ಮೂಲಕ ತಮ್ಮ ಗ್ರಾಮಗಳಲ್ಲಿ ನಡೆದಿರುವ ಸ್ವತ್ಛತೆ ಸೇರಿದಂತೆ ಇನ್ನಿತರ ಪೂರಕ ಮಾಹಿತಿಯನ್ನು ಕೇಂದ್ರದ ತಂಡಕ್ಕೆ ನೀಡಬಹುದಾಗಿದೆ ಎಂದು ನಗರ ಜಿಪಂನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸ್ವಚ್ಛ ಭಾರತ್‌ ಮಿಷನ್‌ (ಗ್ರಾಮೀಣ) ಯೋಜನೆಯ ಹಂತ-2 ರ ಘಟಕಾಂಶಗಳು ಹಾಗೂ ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ, ಘನ ತ್ಯಾಜ್ಯ ನಿರ್ವಹಣೆ, ಋತು ಚಕ್ರ ನೈರ್ಮಲ್ಯ ನಿರ್ವಹಣೆ ಸೇರಿದಂತೆ ಹಲವು ವಿಷಯಗಳಿಗೆ ಸಮೀಕ್ಷೆಯಲ್ಲಿ ಕೇಂದ್ರ ತಂಡ ಹೆಚ್ಚಿನ ಆದ್ಯತೆಯನ್ನು ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಜಿಲ್ಲೆಗಳಿಗೆ ರ್‍ಯಾಂಕ್‌ ನೀಡುವ ಕುರಿತಂತೆ ಕೇಂದ್ರ ಕುಡಿವ ನೀರು ಮತ್ತು ನೈರ್ಮಲ್ಯ ಮಂತ್ರಾಲಯ 2018 ಮತ್ತು 2019 ನೇ ಸಾಲಿನಿಂದಲೂ ಸ್ವಚ್ಛ ಸರ್ವೇಕ್ಷಣೆ ಗ್ರಾಮೀಣ ಯೋಜಿಸುತ್ತಿದೆ. ಕೇಂದ್ರ ತಂಡ ದತ್ತಾಂಶಗಳ ಜತೆಗೆ ಶಾಲೆ, ಅಂಗನವಾಡಿ ಕೇಂದ್ರ, ಸಂತೆ, ಬಸ್‌ ನಿಲ್ದಾಣ ಮತ್ತು ಧಾರ್ಮಿಕ ಕೇಂದ್ರಗಳು ಸರ್ವೆಯನ್ನೂ ಮಾಡಲಿದ್ದಾರೆ.

86 ಗ್ರಾಪಂಗಳಲ್ಲಿ ಸಮೀಕ್ಷೆ :  ಬೆಂಗಳೂರು ನಗರ ಜಿಪಂ ವ್ಯಾಪ್ತಿಯಲ್ಲಿ ಐದು ತಾಲೂಕುಗಳು ಹಾಗೂ 20 ಹೋಬಳಿಗಳಿವೆ. ಜತೆಗೆ 86 ಗ್ರಾಪಂ ಸೇರಿದಂತೆ ಒಟ್ಟು 588 ಹಳ್ಳಿಗಳಿವೆ. ಇದರಲ್ಲಿ ಆಯ್ದ ಪ್ರದೇಶಗಳಿಗೆ ಕೇಂದ್ರ ತಂಡ ಭೇಟಿ ನೀಡಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಡಿ ಸಾರ್ವಜನಿಕ ಸ್ಥಗಳಲ್ಲಿ ನಡೆದಿರುವ ಸ್ವಚ್ಛತೆಯ ಕಾರ್ಯದ ಬಗ್ಗೆ ಪೂರಕ ಮಾಹಿತಿ ಸಂಗ್ರಹಿಸಲಿದೆ.

ಗ್ರಾಮ ಸ್ವಚ್ಛತೆ ಸಂಬಂಧಿಸಿದಂತೆ ಶೀಘ್ರದಲ್ಲೆ ಕೇಂದ್ರ ತಂಡ ಬೆಂಗಳೂರು ನಗರ ಜಿಲ್ಲೆಯ ಹಲವು ಗ್ರಾಪಂಗಳಿಗೆ ಭೇಟಿನೀಡಿ ಖುದ್ದಾಗಿ ಹಳ್ಳಿಗರಿಂದಲೇ ಶುಚಿತ್ವಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆಯಲಿದೆ.ಈ ಸ್ವಚ್ಛ ಸರ್ವೇಕ್ಷಣೆ ಸರ್ವೇಯಲ್ಲಿ ಜನರು ಕೂಡ ಆ್ಯಪ್‌ ಮೂಲಕ ಮಾಹಿತಿ ನೀಡಬಹುದಾಗಿದೆ.– ನೋಮೇಶ್‌ ಕುಮಾರ್‌,ಉಪಕಾರ್ಯದರ್ಶಿ, ಬೆಂಗಳೂರು ನಗರ ಜಿಪಂ

 

-ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next