ಮಲ್ಪೆ: ದೇಶ ವಿದೇಶಗಳ ಪ್ರವಾಸಿಗರ ಆಕರ್ಷಣೀಯ ತಾಣವಾದ ಮಲ್ಪೆ ಸೈಂಟ್‌ಮೇರೀಸ್ ದ್ವೀಪಕ್ಕೆ ಮಳೆಗಾಲದಲ್ಲಿ 4 ತಿಂಗಳ ಕಾಲ ಹೇರಲಾಗಿದ್ದ ಪ್ರವೇಶ ನಿರ್ಬಂಧದ ಅವಧಿ ತೆರವಾಗಿದ್ದು, ಇದೀಗ ಮತ್ತೆ ದ್ವೀಪಯಾನ ಆರಂಭಗೊಂಡಿದೆ. ಸೆ. 15ರಿಂದ ಪ್ರವೇಶ ಮುಕ್ತವಾಗಿದ್ದು ಅಂದಿನಿಂದಲೇ ಸ್ವತ್ಛತಾ ಕಾರ್ಯ ನಡೆಸಲಾಗುತ್ತದೆ.
ಕಳೆದ ನಾಲ್ಕೈದು ತಿಂಗಳು ಸ್ತಬ್ದವಾಗಿದ್ದ ದ್ವೀಪದಲ್ಲಿ ಗಿಡಗಂಟಿಗಳು ಎತ್ತರಕ್ಕೆ ಬೆಳೆದು ನಿಂತಿದ್ದು ಅದನ್ನು ತೆರವುಗೊಳಿಸುವ ಕೆಲಸ ನಡೆಯುತ್ತಿದೆ. ದ್ವೀಪದ ಸುತ್ತಲೂ ತ್ಯಾಜ್ಯಗಳು ಸಂಗ್ರಹವಾಗಿದ್ದು ಅದನ್ನು ಸ್ವತ್ಛಗೊಳಿಸಲಾಗುತ್ತದೆ.
ಈಗಾಗಲೇ ದ್ವೀಪದಲ್ಲಿ 12 ಮಂದಿ ಸ್ವತ್ಛತೆಯಲ್ಲಿ ತೊಡಗಿದ್ದಾರೆ. ಶೌಚಾಲಯ ಸ್ವತ್ಛತೆ, ಹಟ್‌ಗಳ ನಿರ್ಮಾಣ ಕಾರ್ಯವನ್ನು ನಡೆಸಲಾಗುತ್ತದೆ. ದ್ವೀಪದ ಪಶ್ಚಿಮ ಭಾಗದ ಅಪಾಯಕಾರಿ ಪ್ರದೇಶದಲ್ಲಿ ಸಮುದ್ರಕ್ಕೆ ಇಳಿಯದಂತೆ ಫ್ಲ್ಯಾಗ್‌ಗಳನ್ನು ಅಳವಡಿಸಿ, ಎಚ್ಚರಿಕೆ ಬೋರ್ಡ್ ಹಾಕಲಾಗುತ್ತದೆ ಎಂದು ಬೀಚ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಪಾಂಡುರಂಗ ಮಲ್ಪೆ ತಿಳಿಸಿದ್ದಾರೆ.
ಮಲ್ಪೆಯಿಂದ ಬೋಟ್ ವ್ಯವಸ್ಥೆ
ಉಡುಪಿಯಿಂದ ಸುಮಾರು 5 ಕಿ.ಮೀ. ದೂರ ಮಲ್ಪೆಗೆ ಬಂದರೆ, ಅಲ್ಲಿಂದ ಮೀನುಗಾರಿಕಾ ಬಂದರಿನ ಪಶ್ಚಿಮ ಭಾಗದಲ್ಲಿ ಸೀವಾಕ್ ಪಾಯಿಂಟ್ ಬಳಿ ದ್ವೀಪಕ್ಕೆ ದೊಡ್ಡ ಪ್ರವಾಸಿ ಬೋಟ್‌ನ ವ್ಯವಸ್ಥೆ ಇದೆ. ಅಲ್ಲಿಂದ ಸುಮಾರು 4-5 ಕಿ.ಮೀ. ದೂರವಿರುವ ದ್ವೀಪ ತಲುಪಲು ಬೋಟ್‌ನ ನೆರವಿನಿಂದ ತಲುಪಬೇಕು. ಇನ್ನೂ ಮಲ್ಪೆ ಬೀಚ್‌ನಿಂದ ದ್ವೀಪಕ್ಕೆ ಹೋಗಲು ಪ್ರವಾಸಿ ಸ್ಪೀಡ್‌ಬೋಟುಗಳಿವೆ.