Advertisement
ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಕ್ಲೀನ್ ಅಂಡ್ ಗ್ರೀನ್ ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ಡಾಕ್ಟರ್ ಎಂ.ಸಿ. ಸುಧಾಕರ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಕಳೆದ ಮೂರು ವಾರಗಳಿಂದ ಕಾರ್ಯಪ್ರವೃತರಾಗಿರುವ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅವರು ಪ್ರತಿ ಮಂಗಳವಾರ ಒಂದೊಂದು ನಗರಕ್ಕೆ ಭೇಟಿ ನೀಡಿ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳುತ್ತಿದ್ದಾರೆ. ಇದರಿಂದಾಗಿ ಜನರಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಜೊತೆಗೆ ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಸಂಕಲ್ಪ ಮಾಡಿದ್ದಾರೆ.
Related Articles
Advertisement
ನಗರದ ಕೋಟೆ ವೃತ್ತದಲ್ಲಿ ಸರ್ಕಾರಿ ಶಾಲೆಯ ಮುಂದೆ ಕಸವನ್ನು ಶೇಖರಣೆ ಮಾಡಿ ಬ್ಲಾಕ್ ಸ್ಪಾಟ್ ಮಾಡಿಕೊಂಡಿರುವುದನ್ನು ನೋಡಿ ಅಸಮಾಧಾನ ವ್ಯಕ್ತಪಡಿಸಿ ಶಾಲೆಯ ಸುತ್ತಮುತ್ತಲು ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಆಯಾ ಮುಖ್ಯ ಶಿಕ್ಷಕರಿಗೆ ನಿರ್ದೇಶನ ನೀಡಬೇಕೆಂದು ತಹಶೀಲ್ದಾರ್ ಗೆ ಸೂಚಿಸಿದರು.
ಇದೇ ವೇಳೆ ಚಹಾ ಅಂಗಡಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಅಲ್ಲಿ ನೈರ್ಮಲ್ಯ ಹದಗೆಟ್ಟಿರುವುದನ್ನು ನೋಡಿ ಹೋಟೆಲ್ ಮಾಲೀಕರನ್ನು ತರಾಟೆಗೆ ತೆಗೆದುಕೊಂಡರು. ಮಳೆಯಿಂದ ಈ ತರಹ ಆಗಿದೆ ಎಂದು ನಿರ್ಲಕ್ಷ ಭರಿತವಾಗಿ ಉತ್ತರಿಸಿದ್ದರಿಂದ ಕೆಂಡಮಂಡಲರಾದ ಜಿಲ್ಲಾಧಿಕಾರಿ, ಕೂಡಲೇ ಹೋಟೆಲ್ ಮಾಲೀಕನಿಗೆ ನೋಟಿಸ್ ನೀಡಿ ಹೋಟೆಲ್ ಮುಚ್ಚಲು ಕ್ರಮ ಕೈಗೊಳ್ಳಬೇಕೆಂದು ಪೌರಾಯುಕ್ತರಿಗೆ ನಿರ್ದೇಶನ ಮಾಡಿದರು.
ನಂತರ ನಗರದ ಎರಡನೇ ಟಿಎಂಸಿ ಬಡಾವಣೆ ಎರಡನೇ ಕಾರ್ಮಿಕ ನಗರ ಪ್ರದೇಶಕ್ಕೆ ತೆರಳಿದ ಜಿಲ್ಲಾಧಿಕಾರಿ ಅಲ್ಲಿನ ರಸ್ತೆ ಚರಂಡಿಗಳು ಸಾಕ್ಷಾತ್ ದರ್ಶನ ಮಾಡಿದರು.
ಅಮೃತ ನಗರ ಯೋಜನೆಯಡಿ ನಗರದಲ್ಲಿ ಅಗತ್ಯವಾಗಿ ಬೇಕಾಗಿರುವ ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡಲು ನಗರಸಭೆಯಲ್ಲಿ ಚರ್ಚಿಸಿ ಒಂದು ಪ್ರಸ್ತಾವನೆ ಸಲ್ಲಿಸಿದರೆ ಕೂಡಲೇ ಅದಕ್ಕೆ ಅನುಮೋದನೆ ನೀಡುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು.
ಕಳೆದ ವರ್ಷ ಮಳೆಯಿಂದ ಹಾನಿಯಾಗಿರುವ ರಸ್ತೆ ಮತ್ತು ಚರಂಡಿಗಳ ಅಭಿವೃದ್ಧಿಗಾಗಿ ವಿಶೇಷ ನೆರವು ನೀಡಲು ಕ್ರಮ ಕೈಗೊಳ್ಳುವುದಾಗಿ ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಆಶ್ವಾಸನೆ ನೀಡಿದರು.
ತಹಶೀಲ್ದಾರ್ ಬಿ.ಎನ್. ಸ್ವಾಮಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಎಂ. ರೇಣುಕಾ, ಶಿಡ್ಲಘಟ್ಟ ನಗರಸಭೆಯ ಅಧ್ಯಕ್ಷ ಸುಮಿತ್ರ ರಮೇಶ್, ಪೌರಾಯುಕ್ತ ಆರ್. ಶ್ರೀಕಾಂತ್, ಶಿಡ್ಲಘಟ್ಟ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ ರೆಡ್ಡಿ, ಜೆಡಿಎಸ್ ಮುಖಂಡರಾದ ತಾದೂರು ರಘು, ನಂದ್ ಕಿಶನ್, ಹನುಮಂತಪುರ ವಿಜಯಕುಮಾರ್, ಮದೀನಾ ಮಸೀದಿಯ ಅಧ್ಯಕ್ಷ ಎಚ್. ಎಸ್. ಫಯಾಝ್ ಮತ್ತಿತರರು ಉಪಸ್ಥಿತರಿದ್ದರು.