ಕನಕಪುರ: ಮಾದಪ್ಪನ ಭಕ್ತರು ಎಲ್ಲೆಂದರಲ್ಲಿ ಬಳಸಿ ಎಸೆದು ಹೋಗಿದ್ದ ಪ್ಲಾಸ್ಟಿಕ್ ಮತ್ತು ಅನುಪಯುಕ್ತ ತಾಜ್ಯವನ್ನು ಅರಣ್ಯ ಇಲಾಖೆ ಸಿಬ್ಬಂದಿ ಸ್ವಚ್ಛ ಮಾಡಿ ಜಾಗೃತಿ ಮೂಡಿಸಿದ್ದಾರೆ.
ನಿಷೇಧಿತ ಪ್ಲಾಸ್ಟಿಕ್ ಬಳಕೆ ಪರಿಸರದ ಮೇಲೆ ಅಷ್ಟೆ ಅಲ್ಲ, ವನ್ಯ ಜೀವಿ ಸಂಪತ್ತಿಗೂ ಅಪಾಯಕಾರಿ. ಹಾಗಾಗಿ, ಮಹಾ ಶಿವರಾತ್ರಿ ಅಂಗವಾಗಿ ಕಾಲ್ನಡಿಗೆಯಲ್ಲಿ ತೆರಳುವ ಮಾದಪ್ಪನ ಭಕ್ತರು, ತಾಲೂಕಿನ ಉಯ್ಯಂಬಳ್ಳಿ ಗ್ರಾಮದಿಂದ ಸಂಗಮದವರೆಗೂ ರಸ್ತೆಯ ಇಕ್ಕೆಲಗಳಲ್ಲಿ ಬಳಸಿ ಬಿಸಾಡಿದ್ದ ನೀರಿನ ಬಾಟಲಿ, ಬೇಕರಿ. ತಿಂಡಿ ಪಾಕೆಟ್ ಹಾಗೂ ಅನುಪಯುಕ್ತ ತ್ಯಾಜ್ಯವನ್ನು ಸ್ವತ್ಛಗೊಳಿಸುವ ಮೂಲಕ ಅರಣ್ಯ ಇಲಾಖೆ ಸಿಬ್ಬಂದಿ ಜಾಗೃತಿ ಮೂಡಿಸುವ ಕೆಲಸ ಮಾಡಿದರು. ಶಿವರಾತ್ರಿ ಅಂಗವಾಗಿ ಪ್ರತಿವರ್ಷ ಹರಕೆ ಹೊತ್ತ ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಕಾಲ್ನಡಿಗೆಯಲ್ಲಿ ಮಾದಪ್ಪನ ಬೆಟ್ಟಕ್ಕೆ ತೆರಳಲು ಪಾದಯಾತ್ರೆಯನ್ನು ತಾಲೂಕಿನಿಂದಲೇ ಪ್ರಾರಂಭ ಮಾಡುತ್ತಾರೆ.
ಹೀಗೆ, ಕಾಲ್ನಡಿಗೆಯಲ್ಲಿ ಹೋಗುವ ಲಕ್ಷಾಂತರ ಭಕ್ತರಿಗೆ ಅನ್ನ ಸಂತರ್ಪಣೆ, ಪಾನಕ, ಮಜ್ಜಿಗೆ ವಿತರಣೆ ಸಾಗರೋಪಾದಿಯಲ್ಲಿ ನಡೆಯುತ್ತದೆ. ಮಾದಪ್ಪನ ಭಕ್ತರು ಕಾಲ್ನಡಿಗೆಯಲ್ಲಿ ಹೋಗುವ ಮಾರ್ಗ ಮಧ್ಯೆ ನೂರಾರು ಗ್ರಾಮಸ್ಥರು ಮಾದಪ್ಪನ ಭಕ್ತರಿಗೆ ಅನ್ನಸಂತರ್ಪಣೆ ಮಾಡಲೆಂದೆ ಹರಕೆ ಹೊತ್ತು, ಬೆಟ್ಟಕ್ಕೆ ಹೋಗುವ ಭಕ್ತರಿಗೆ ಅನ್ನಸಂತರ್ಪಣೆ, ಪಾನಕ, ಮಜ್ಜಿಗೆ ವಿತರಣೆ ಮಾಡುತ್ತಾರೆ. ಇದು ಕಾಲ್ನಡಿಗೆಯಲ್ಲಿ ಹೋಗುವ ಭಕ್ತರಿಗೆ ವರದಾನವಾದರೆ, ವನ್ಯ ಸಂಪತ್ತಿಗೆ ಮಾರಕವಾಗಿ ಪರಿಣಮಿಸಿದೆ.
ಅರಣ್ಯ ಇಲಾಖೆ ಸಿಬ್ಬಂದಿ ಜಾಗೃತಿ: ಪರಿಸರದ ಮೇಲೆ ಮುಂದಾಗುವ ದುಷ್ಪರಿಣಾಮಗಳನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಪ್ಲಾಸ್ಟಿಕ್ ಬಳಕೆ ನಿಷೇಧ ಮಾಡಿದೆ. ಆದರೆ, ಮಾದಪ್ಪನ ಭಕ್ತರಿಗೆ ಅನ್ನಸಂತರ್ಪಣೆ, ಮಜ್ಜಿಗೆ, ಪಾನಕ ವಿತರಣೆ ಮಾಡಲು ಬಹುತೇಕ ಪ್ಲಾಸ್ಟಿಕ್ ಬಳಕೆ ಮಾಡುತ್ತಾರೆ. ಕಾವೇರಿ ವನ್ಯಜೀವಿಧಾಮದಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಬಿಸಾಡದಂತೆ ಅರಣ್ಯ ಇಲಾಖೆ ಸಿಬ್ಬಂದಿ ಜಾಗೃತಿ ಮೂಡಿಸಿದ್ದಾರೆ. ಮಾದಪ್ಪನ ಬೆಟ್ಟಕ್ಕೆ ಹೋಗುವ ಲಕ್ಷಾಂತರ ಭಕ್ತರು ಮಾರ್ಗ ಮಧ್ಯೆ ಬಳಸಿದ ಪ್ಲಾಸ್ಟಿಕ್ ಬಾಟಲ್, ಲೋಟ, ತಟ್ಟೆ ಹಾಗೂ ಅನುಪಯುಕ್ತ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡುತ್ತಾರೆ. ಇದರಿಂದ ರಸ್ತೆಯ ಇಕ್ಕೆಲಗಳು ಕಸದ ರಾಶಿಯಂತೆ ಮಾರ್ಪಡುತ್ತದೆ.
ರಸ್ತೆಗಳ ಇಕ್ಕೆಲಗಳಲ್ಲಿ ಪ್ಲಾಸ್ಟಿಕ್ ಬಾಟಲ್: ಬಳಸಿ ಬಿಸಾಡುವ ಪ್ಲಾಸ್ಟಿಕ್ ಪರಿಸರದ ಮೇಲೆ ಅಷ್ಟೆ ಅಲ್ಲದೆ, ವನ್ಯ ಸಂಪತ್ತಿನ ಮೇಲೂ ದುಷ್ಪಾರಿಣಾಮ ಬೀರುತ್ತದೆ. ಕಾಲ್ನಡಿಗೆಯಲ್ಲಿ ಬೆಟ್ಟಕ್ಕೆ ಹೋಗುವ ಭಕ್ತರು, ಸಂಗಮದ ಕಾವೇರಿ ವನ್ಯಜೀವಿಧಾಮದಲ್ಲೆ ಕಾವೇರಿ ನದಿ ದಾಟಿ ಹಾದು ಹೋಗಬೇಕು. ಏಳಗಳ್ಳಿ ತಾಯಿ ಮುದ್ದಮ್ಮನ ದರ್ಶನ ಪಡೆದು ಕಾಲ್ನಡಿಗೆ ಆರಂಭ ಮಾಡುವ ಭಕ್ತರು, ಹೆಗ್ಗನೂರು ದೊಡ್ಡಿ, ಕುಪ್ಪೆದೊಡ್ಡಿ, ಬೊಮ್ಮಸಂದ್ರ ಗ್ರಾಮಗಳ ಮಾರ್ಗವಾಗಿ ಕಾವೇರಿ ವನ್ಯಜೀವಿಧಾಮದ ಕಾಲು ದಾರಿಯ ಮೂಲಕ ತೆರಳಬೇಕು. ಭಕ್ತರು ರಸ್ತೆಗಳ ಇಕ್ಕೆಲಗಳಲ್ಲಿ ಪ್ಲಾಸ್ಟಿಕ್ ಬಾಟಲು, ತಿಂಡಿ-ತಿನಿಸುಗಳ ಪ್ಲಾಸ್ಟಿಕ್ ವಸ್ತುಗಳನ್ನು ಹಾಗೂ ಅನುಪಯುಕ್ತ ವಸ್ತು ಎಲ್ಲೆಂದರಲ್ಲಿ ಎಸೆದು ಹೋಗುತ್ತಾರೆ.
ಪ್ಲಾಸ್ಟಿಕ್ ಪ್ರಾಣಿ ಸಂಕುಲಕ್ಕೆ ಕಂಟಕ: ವನ್ಯಜೀವಿ ಸಂಪತ್ತು ರಕ್ಷಣೆ ಮಾಡುವ ಅರಣ್ಯ ಇಲಾಖೆ ಸಿಬ್ಬಂದಿ ಮಲೆ ಮಹದೇಶ್ವರ ಬೆಟ್ಟದ ಭಕ್ತರ ಪಾದಯಾತ್ರೆ ಮುಗಿದ ನಂತರ ಕಾವೇರಿ ವನ್ಯಜೀವಿ ಧಾಮದ ಸಂಗಮ ವಲಯದ ಸ್ವತ್ಛತಾ ಕಾರ್ಯವನ್ನು ಕೈಗೊಂಡು ಪ್ರಾಣಿ ಸಂಕುಲಕ್ಕೆ ಕಂಟಕವಾದ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ ಬೇರೆ ಕಡೆಗೆ ಸ್ಥಳಾಂತರಿಸಿದರು. ಕಸದ ರಾಶಿಯಾಗಿದ್ದ ರಸ್ತೆಯ ಇಕ್ಕೆಲಗಳನ್ನು ಸ್ವತ್ಛಗೊಳಿಸಿ ಜಾಗೃತಿ ಮೂಡಿಸುವುದರ ಜೊತೆಗೆ ವನ್ಯಸಂಪತ್ತಿನ ಮೇಲೆ ಪ್ಲಾಸ್ಟಿಕ್‌ನಿಂದ ಆಗುವ ಅನಾಹುತಗಳನ್ನು ತಡೆಗಟ್ಟುವ ಕೆಲಸ ಮಾಡಿರುವುದು ಪ್ರಸಂಸೆಗೆ ಕಾರಣವಾಗಿದೆ.
ವನ್ಯಸಂಪತ್ತು ಸಂರಕ್ಷಣೆ ಪ್ರತಿಯೊಬ್ಬರ ಹೊಣೆ : ಕಾವೇರಿ ವನ್ಯಜೀವಿಧಾಮದ ಮಧ್ಯ ಭಾಗದಲ್ಲಿ ಹಾದು ಹೋಗುವ ಪಾದಯಾತ್ರೆಗಳಿಗೆ ಯಾವುದೇ ತರಹದ ಪ್ಲಾಸ್ಟಿಕ್ ನೀರಿನ ಬಾಟಲ್ ಎಸೆಯಬಾರದೆಂದು ಅರಿವು ಮೂಡಿಸಿದರೂ, ಭಕ್ತರು ಕೇಳುವುದಿಲ್ಲ. ಪ್ಲಾಸ್ಟಿಕ್‌ನಿಂದ ಪರಿಸರ ಹಾಗೂ ವನ್ಯಸಂಪತ್ತಿನ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ಜನರಿಗೆ ಅರಿವಿಲ್ಲ. ಪ್ಲಾಸ್ಟಿಕ್ ವಸ್ತುಗಳನ್ನು ಪ್ರಾಣಿಗಳು ತಿಂದರೆ ಅವುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಪರಿಸರ ಹಾಗೂ ವನ್ಯಸಂಪತ್ತು ಸಂರಕ್ಷಣೆ ಪ್ರತಿಯೊಬ್ಬರ ಹೊಣೆ. ಅದನ್ನು ಯಾರು ಮರೆಯಬಾರದು ಎಂದು ಅರಣ್ಯ ಇಲಾಖೆ ಸಿಬ್ಬಂದಿಗಳು ಮನವಿ ಮಾಡಿದರು.