Advertisement
ಅಭಯದಾನ ಸರ್ವದಾನಗಳಲ್ಲಿ ಶ್ರೇಷ್ಠವಾಗಿದೆ. ಧರ್ಮಸ್ಥಳ ಅಭಯದಾನ ನೀಡುವ ಪವಿತ್ರ ಕ್ಷೇತ್ರವಾಗಿದೆ. ವ್ಯವಹಾರದಲ್ಲಿ ಸೋಲು, ಕಷ್ಟ, ನಷ್ಟ ಉಂಟಾದಾಗ, ಕೌಟುಂಬಿಕ ಕಲಹವಾದಾಗ, ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆ ಉಂಟಾದಾಗ, ನೊಂದು, ಬೆಂದು, ಭಯ, ಭೀತಿಯಿಂದ ಧರ್ಮಸ್ಥಳಕ್ಕೆ ಬಂದ ಭಕ್ತರಿಗೆ ಹೆದರಬೇಡಿ ಎಂಬ ಅಭಯದಾನ ನೀಡಲಾಗುತ್ತದೆ. ಮನೆಯಲ್ಲಿ ಹಿರಿಯರು ನೊಂದು ಕಣ್ಣೀರು ಸುರಿಸಿದರೂ ಅದು ಶಾಪವಾಗಿ ಪರಿಣಮಿಸುತ್ತದೆ. ಪೂರ್ವಜರ ಶಾಪ ದೋಷ ಪರಿಹಾರ, ವಾಕ್ ದೋಷ ನಿವೃತ್ತಿ, ಕೌಟುಂಬಿಕ ಕಲಹ, ಮನಸ್ತಾಪ ನಿವಾರಣೆಗಾಗಿ ಭಕ್ತರು ಪರಿಹಾರ ಕೋರಿ ಧರ್ಮಸ್ಥಳಕ್ಕೆ ಬರುತ್ತಾರೆ. ಅವರಿಗೆ ಅಭಯ ನೀಡಿ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಿ, ಆಶೀರ್ವಾದ ಪಡೆದು, ತಪ್ಪುಕಾಣಿಕೆ ಹಾಕಿ ಕ್ಷಮೆ ಯಾಚಿಸುವಂತೆ ತಿಳಿಸಲಾಗುತ್ತದೆ ಎಂದರು.
ಧರ್ಮಸ್ಥಳದಲ್ಲಿ ವಿಶಿಷ್ಟ ಶಿಸ್ತು, ಸಂಪ್ರದಾಯ ಮತ್ತು ಪರಂಪರೆ ಇದೆ. ಮಾತುಬಿಡ ಮಂಜುನಾಥ ಎಂಬ ಮಾತು ಎಲ್ಲರಿಗೂ ಚಿರಪರಿಚಿತವಿದೆ. ಧರ್ಮಸ್ಥಳದಿಂದ ಒಂದು ಕಲ್ಲನ್ನೂ ಹೊರಗೆ ತೆಗೆದುಕೊಂಡು ಹೋಗಬಾರದು ಎಂಬ ಸಂಪ್ರದಾಯವಿದೆ. ಶ್ರೀ ಮಂಜುನಾಥ ಸ್ವಾಮಿಯ ಮೇಲೆ ಶ್ರದ್ಧಾ – ಭಕ್ತಿ ಹಾಗೂ ಅಣ್ಣಪ್ಪ ಸ್ವಾಮಿಯ ಭಯದಿಂದ ಎಲ್ಲ ಕೆಲಸಗಳು ಸುಗಮವಾಗಿ ನಡೆಯುತ್ತವೆ ಎಂದು ಹೆಗ್ಗಡೆ ಅವರು ನುಡಿದರು.