ರಾಯಚೂರು: ಪ್ರತಿಯೊಬ್ಬರೂ ಮನೆ ಹಾಗೂ ಸುತ್ತಮುತ್ತಲಿನ ಪರಿಸರ ಸ್ವಚ್ಛ ಮಾಡಿದರೆ, ಸ್ವಚ್ಛ ದೇಶ ನಿರ್ಮಾಣವಾಗುವ ಜೊತೆಗೆ ಸಾಂಕ್ರಾಮಿಕ ರೋಗ ಮುಕ್ತ ದೇಶ ನಿರ್ಮಾಣವಾಗುತ್ತದೆ ಎಂದು ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್.ಎ. ಮಹಾಜನ್ ಹೇಳಿದರು.
ನಗರದ ಆಶಾಪೂರ ರಸ್ತೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ಜಿಪಂ, ಸಾರ್ವಜನಿಕ ಶಿಕ್ಷಣಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಲಿಂಗ ತಾರತಮ್ಯ ಮತ್ತು ಮೂಢನಂಬಿಕೆ ವಿರುದ್ಧ ಅರಿವು ಹಾಗೂ ಪರಿಸರ ಸ್ವಚ್ಛತೆ ಕುರಿತು ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಡೆಂಘೀ, ಚಿಕೂನ್‌ಗುನ್ಯಾ ಸೇರಿ ಸಾಂಕ್ರಾಮಿಕ ರೋಗಗಳಿಂದ ಮುಕ್ತವಾಗುವುದು ಅವಶ್ಯ. ಇಂತಹ ಗಂಭೀರ ಸಾಂಕ್ರಾಮಿಕ ರೋಗಗಳಿಂದ ಮುಕ್ತವಾಗಲು ಸುತ್ತಲಿನ ಪರಿಸರ ಸ್ವತ್ಛವಾಗಿಟ್ಟುಕೊಳ್ಳುವುದು ಮುಖ್ಯ. ಈ ಉದ್ದೇಶದಿಂದ ಡೆಂಘೀ ರೋಗದ ಕುರಿತು ಜಾಗೃತಿ ಮೂಡಿಸುವುದು ಅವಶ್ಯ ಎಂದರು.
ಶಾಲೆ ಸುತ್ತಮುತ್ತ ಗಿಡ-ಮರ ಬೆಳೆಸಬೇಕು. ಇದರಿಂದ ಪರಸರ ಸಂರಕ್ಷಣೆ ಮಾಡಬಹುದು. ಬಾಲ ಕಾರ್ಮಿಕತೆ, ಬಾಲ್ಯವಿವಾಹ ನಿಷೇಧ, ಪೋಕ್ಸೋ ಕಾಯ್ದೆ, ಬಾಲನ್ಯಾಯ ಕಾಯ್ದೆ, ಮಕ್ಕಳ ಹಕ್ಕುಗಳು, ಸರ್ಕಾರಿ ಬಾಲ ಮಂದಿರಗಳ ಸದುಪಯೋಗ ಪಡೆಯಲು ಹಾಗೂ ಮಕ್ಕಳ ಯಾವುದೇ ಸಮಸ್ಯೆಗಳಿಗೆ ಮಕ್ಕಳ ಉಚಿತ ಸಹಾಯವಾಣಿ ಸಂಖ್ಯೆ: 1098ಗೆ ಕರೆ ಮಾಡುವಂತೆ ವಿದ್ಯಾರ್ಥಿಗಳಿಗೆ ಹೇಳಿದರು.
ಮಕ್ಕಳ ಸಹಾಯವಾಣಿ ಜಿಲ್ಲಾ ಸಂಯೋಜಕ ಸುದರ್ಶನ ಮಾತನಾಡಿ, ಮಕ್ಕಳು ಯಾವುದೇ ಅಪರಿಚಿತ ವ್ಯಕ್ತಿಗಳು ಕರೆದಲ್ಲಿ ಹೋಗದೇ ಜಾಗರೂಕರಾಗಬೇಕು. ಸುರಕ್ಷಿತ ಸ್ಪರ್ಶ ಹಾಗೂ ಅಸುರಕ್ಷಿತ ಸ್ಪರ್ಶದ ಬಗ್ಗೆ ಮತ್ತು ಮಕ್ಕಳ ಹಕ್ಕುಗಳ ಬಗ್ಗೆ ವಿವರವಾಗಿ ತಿಳಿಸಿದರು.
ಈ ವೇಳೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮನ್ಸೂರು ಅಹ್ಮದ್, ಹನುಮೇಶ, ಸಿಬ್ಬಂದಿಯಾದ ಜ್ಯೋತಿ, ಶಿವರಾಜ ಪಾಟೀಲ್, ಈರಣ್ಣ, ಖಾಜಾಬೀ, ದಿನೇಶ ಕುಮಾರ ಸೇರಿದಂತೆ ಇತರರಿದ್ದರು.