Advertisement
ಸ್ವತ್ಛ ಕುಂದಾಪುರ ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಆರಂಭವಾದದ್ದು ಕೆಲವು ಯುವಕರ ಕನಸಾಗಿ. ಒಂದಷ್ಟು ಯುವಕರು ಪ್ಲಾಸ್ಟಿಕ್, ಬಾಟಲಿ ಮುಂತಾದ ಕರಗಿಹೋಗದ ಕಸದ ರಾಶಿಗಳನ್ನ ಮಣ್ಣಿನಿಂದ ಬೇರ್ಪಡಿಸಲು ಯೋಚಿಸಿದರು. ಇದಕ್ಕೆ ಕುಂದಾಪುರದ ಹಲವು ಮಿಡಿಯುವ ಹೃದಯಗಳು ಜತೆಗೂಡಿದವು. ಭರತ್ ಬಂಗೇರ ಅವರ ನೇತೃತ್ವದಲ್ಲಿ ಆರಂಭವಾದ ಅಭಿಯಾನದಲ್ಲಿ ಹಲವರು ಸೇರಿ, ಅಮಲಾ ಸ್ವತ್ಛಭಾರತ ಅಭಿಯಾನದವರೂ ಜತೆಯಾದರು. ಒಂದು ಅಭಿಯಾನದಂತೆ ಶುರುವಾಗಿ ಎಫ್ಎಸ್‌ಎಲ್‌ನ ಸ್ವಯಂ ಸೇವಕರು, ಹಲವಾರು ಕಾಲೇಜು ವಿದ್ಯಾರ್ಥಿಗಳು, ಬೇರೆ ಬೇರೆ ಸಂಘಟನೆಯ ರೂವಾರಿಗಳು, ಸಮಾನಮನಸ್ಕ ನಾಗರಿಕರು ಸೇರಿದರು.
ಪ್ರತಿ ರವಿವಾರ ಸಂಜೆ ಒಂದಷ್ಟು ಒಳ್ಳೆಯ ಕೆಲಸ ಮಾಡಲು ಮುಂದಾಗಿವೆ. ಇಂದಿನ ಯುವಕರಿಗೆ ಸಾಮಾಜಿಕ ಪ್ರಜ್ಞೆ ಇಲ್ಲ ಅನ್ನುವುದು ಸುಳ್ಳು ಮಾಡಿ ಸೂರ್ಯಾಸ್ತದ ಆಹ್ಲಾದದ ವೇಳೆ ಹಿತಕಾರಿ ಕೆಲಸದ ಮೂಲಕ ಮನಸ್ಸಿಗೆ ನೆಮ್ಮದಿ ಹರುಷ ಎರಡೂ à ಕಾರ್ಯಕ್ರಮದಲ್ಲಿರುತ್ತದೆ. ಎಲ್ಲರ ಗುರಿಯೊಂದೇ ಕುಂದಾಪುರದ ಸ್ವತ್ಛತೆ. ಹೆಚ್ಚಾಗಿ ಸಾಯಂಕಾಲ 4-4.30ಗೆ ರವಿವಾರ ಶುರುವಾಗುವ ಈ ಅಭಿಯಾನಕ್ಕೆ ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಫೇಸ್ ಬುಕ್ ಪೇಜ್‌ನಲ್ಲಿ ವ್ಯಾಪಕ ಪ್ರಚಾರ ನೀಡಲಾಗುತ್ತದೆ. ಎಲ್ಲಿ ಎಷ್ಟೊತ್ತಿಗೆ ಸೇರುವುದು ಎಂದು ಫೇಸ್‌ಬುಕ್ ಹಾಗೂ ವಾಟ್ಸಪ್‌ನಲ್ಲಿ ಸೂಚಿಸಲಾಗುತ್ತದೆ. ನಗರಾಡಳಿತ ಸಹಕಾರ
ಕುಂದಾಪುರದ ಹಲವು ಕಡೆ, ಸಮುದ್ರ ಕಿನಾರೆಗಳೇ ಮುಖ್ಯವಾಗಿಟ್ಟುಕೊಂಡು ಮಾಡಿದ ಹಲವು ವಾರಗಳ ಈ ಅಭಿಯಾನಕ್ಕೆ ಸಾಥ್ ಕೊಟ್ಟವರು ಕುಂದಾಪುರ ಪುರಸಭೆ ಹಾಗೂ ಹಲವು ಪಂಚಾಯತ್‌ಗಳು. ದಿನಕ್ಕೆ ಸೇರಿರುವ ಸ್ವಯಂಸೇವಕರ ಅನುಗುಣವಾಗಿ 300-800 ಕೆಜಿಯಷ್ಟು ಕಸಗಳನ್ನ ಒಟ್ಟುಮಾಡುತ್ತಾರೆ. ಪ್ಲಾಸ್ಟಿಕ್ ಕಸ, ಬಾಟಲಿಗಳನ್ನ ಮಾತ್ರ ಸ್ವಯಂಸೇವಕರು ಎತ್ತುತ್ತಾರೆ. ತಾನೇ ತಾನಾಗಿ ಕರಗಿಹೋಗುವ ಕಸಗಳನ್ನ ಎತ್ತುವುದಿಲ್ಲ. ಇವೆರಡೂ ಕಸದ ರಾಶಿಗಳನ್ನ ಬೇರೆ ಬೇರೆಯಾಗಿ ಹೆಕ್ಕಿ ಬೇರೆ ಬೇರೆ ಚೀಲಗಳಲ್ಲಿ ತುಂಬಿ ಪಂಚಾಯತ್ ಮತ್ತು ಪುರಸಭೆಗೆ ನೀಡಲಾಗುತ್ತದೆ.
Related Articles
Advertisement
ಸಾಮಾನ್ಯಜ್ಞಾನವಿಲ್ಲದ ಜನ ತಮ್ಮ ಕುಡಿತದ ಚಟಕ್ಕೆ ಕುಂದಾಪುರದ ಸಮುದ್ರ ಕಿನಾರೆಗಳನ್ನ ಗುರಿಯಾಗಿಸುವುದು ಖೇದಕರ. ಮನೆಯ ಕಸದ ರಾಶಿಗಳನ್ನು ಸಮುದ್ರ ಕಿನಾರೆಗಳಲ್ಲಿ ಹಾಕುವುದು ಕೂಡಾ ಕಂಡುಬಂದಿದೆ. ಸಮುದ್ರ ಕಿನಾರದಿಂದ ತೆಗೆಯುವ ಕೆಲಸಕ್ಕೆ ಸ್ವಯಂಸೇವಕರ ಉತ್ಸಾಹ ಕಾರಣವಾದರೆ, ಅದಕ್ಕೆ ತಣ್ಣೀರು ಎರಚುವಂತೆ ಅದೇ ಜಾಗದಲ್ಲಿ ಮತ್ತೆರಡು ದಿನಗಳಲ್ಲಿ ಬಾಟಲಿ ರಾಶಿಗಳು ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಉತ್ತರ ಕುಂದಾಪುರ ಪರಿಸರದ ಜನರೇ ನೀಡಬೇಕಿದೆ.
ಕುಂದಾಪುರದ ಸ್ವತ್ಛತೆ ನಮ್ಮ ಪಾಲಿನದಲ್ಲವೇ?ನಮ್ಮೂರು ನಮ್ಮ ಹೆಮ್ಮೆ, ಸ್ವತ್ಛ ಸಮುದ್ರ ಕಿನಾರೆಗಳು ನಮಗೇ ಸುಖ, ನಮ್ಮೂರಿನ ಸ್ವಚ್ಚತೆ ನಮ್ಮೆಲ್ಲರ ಕರ್ತವ್ಯ. ಇವೇ ಕೆಲವು ಅನಿಸಿಕೆಗಳಿಗೆ ಉತ್ತರ ಸ್ವತ್ಛ ಕುಂದಾಪುರ. ನಮ್ಮ ಸಮುದ್ರ ಕಿನಾರೆಗಳು ನಮ್ಮ ಹೆಮ್ಮೆ ಆಗಬೇಕೇ ವಿನಃ ಕಸದ ರಾಶಿಗಳಲ್ಲ. ಕುಡಿತ, ಅನೈತಿಕ ಚಟುವಟಿಕೆಗಳು ಸಮುದ್ರ ಕಿನಾರೆಗಳಲ್ಲಿ ನಡೆಯದಂತೆ ತಡೆಯುವುದು ಆಡಳಿತ ಹಾಗೂ ಪರಿಸರದ ಜನರ ಕರ್ತವ್ಯವಾಗಬೇಕು. ಪ್ರತಿ ಮನೆಯವರೂ ಈ ಸ್ವತ್ಛ ಕುಂದಾಪುರ ಅಭಿಯಾನದಲ್ಲಿ ಭಾಗಿಯಾದರೆ ಈ ಅಭಿಯಾನ ಯಶಸ್ಸು ಕಾಣುತ್ತದೆ. ನಮ್ಮ ಕುಂದಾಪುರ ಸ್ವತ್ಛ ಭಾರತಕ್ಕೆ ಮಾದರಿಯಾದೀತು.
-ಡಾ| ರಶ್ಮಿ ಕುಂದಾಪುರ, ವೈದ್ಯರು ಹಾಗೂ ಸ್ವತ್ಛ ಕುಂದಾಪುರ ತಂಡದ ಸ್ವಯಂಸೇವಕರು