Advertisement

ADANI ಕಂಪನಿಗೆ ಕ್ಲೀನ್‌ಚಿಟ್‌: ಸುಪ್ರೀಂ ಕೋರ್ಟ್‌ ತಜ್ಞರ ಸಮಿತಿ ವರದಿ

09:34 PM May 19, 2023 | Team Udayavani |

ನವದೆಹಲಿ: ಹಿಂಡನ್‌ಬರ್ಗ್‌ ಆರೋಪಗಳಿಗೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಸುಪ್ರೀಂ ಕೋರ್ಟ್‌ ನೇಮಕ ಮಾಡಿದ್ದ ತಜ್ಞರ ಸಮಿತಿಯು, ಅದಾನಿ ಗ್ರೂಪ್‌ಗೆ ಕ್ಲೀನ್‌ಚಿಟ್‌ ನೀಡಿದ್ದು, ಮೇಲ್ನೋಟಕ್ಕೆ ಕಂಪನಿಯು ಯಾವುದೇ ಷೇರು ದರ ತಿರುಚುವಿಕೆಯಲ್ಲಿ ತೊಡಗಿರುವುದು ಕಂಡುಬಂದಿಲ್ಲ ಎಂದು ಹೇಳಿದೆ. ಅಲ್ಲದೇ, ಮಾರುಕಟ್ಟೆ ನಿಯಂತ್ರಕ ಸೆಬಿ ಕಡೆಯಿಂದ ನಿಯಂತ್ರಣಾ ವೈಫ‌ಲ್ಯ ಉಂಟಾಗಿದೆ ಎಂಬ ತೀರ್ಮಾನಕ್ಕೆ ಬರಲು ಸಾಧ್ಯವಾಗುತ್ತಿಲ್ಲ ಎಂದೂ ಸ್ಪಷ್ಟಪಡಿಸಿದೆ.

Advertisement

ಅದಾನಿ ಸಂಸ್ಥೆಯು ಷೇರುಗಳ ತಿರುಚುವಿಕೆಯಲ್ಲಿ ತೊಡಗಿದೆ ಎಂಬ ಹಿಂಡನ್‌ಬರ್ಗ್‌ ವರದಿಯು ಇಡೀ ಅದಾನಿ ಸಾಮ್ರಾಜ್ಯವನ್ನೇ ಅಲುಗಾಡಿಸಿತ್ತು. ಏಕಾಏಕಿ ಕಂಪನಿಯ ಷೇರುಗಳ ಮೌಲ್ಯ ಭಾರೀ ಕುಸಿತ ಕಂಡಿತ್ತು. ಕಂಪನಿ ಮೇಲಿನ ವಿಶ್ವಾಸಾರ್ಹತೆಯೂ ಕುಸಿದಿತ್ತು. ಆದರೆ, ಈ ಎಲ್ಲ ಆರೋಪಗಳನ್ನು ಅಲ್ಲಗಳೆದಿದ್ದ ಅದಾನಿ ಸಮೂಹ ಸಂಸ್ಥೆ, ನಾವು ಎಲ್ಲ ಕಾನೂನುಗಳನ್ನು ಪಾಲಿಸಿದ್ದೇವೆ. ನಮ್ಮ ವಹಿವಾಟಿನಲ್ಲಿ ಯಾವುದೇ ತಪ್ಪು ನಡೆದಿಲ್ಲ ಎಂದು ಹೇಳಿತ್ತು. ಕೊನೆಗೆ ಈ ಪ್ರಕರಣ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಬಳಿಕ, ಈ ಕುರಿತು ತನಿಖೆಗೆಂದು ನ್ಯಾಯಾಲಯವು ಡೊಮೈನ್‌ ತಜ್ಞರ ಸಮಿತಿಯೊಂದನ್ನು ರಚಿಸಿತ್ತು.

ಇತ್ತೀಚೆಗಷ್ಟೇ ತನಿಖೆಯ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಸಮಿತಿಯು, “ಅದಾನಿ ಗ್ರೂಪ್‌ ಷೇರುಗಳ ತಿರುಚುವಿಕೆಯಲ್ಲಿ ತೊಡಗಿಲ್ಲ. ರಿಟೇಲ್‌ ಹೂಡಿಕೆದಾರರಿಗೆ ನೆರವಾಗಲು ಸಮೂಹ ಸಂಸ್ಥೆಯು ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಹೂಡಿಕೆದಾರರಲ್ಲಿ ವಿಶ್ವಾಸ ಮೂಡಿಸುವ ನಿಟ್ಟಿನಲ್ಲೂ ಕಂಪನಿ ಹೆಜ್ಜೆಯಿಟ್ಟಿದೆ. ಪರಿಣಾಮ ಪ್ರಸ್ತುತ ಷೇರುಗಳು ಸ್ಥಿರವಾಗಿವೆ. ಹಿಂಡನ್‌ಬರ್ಗ್‌ ವರದಿಯ ಪರಿಣಾಮದಿಂದ ಅದಾನಿ ಷೇರುಗಳು ಪತನಗೊಂಡಾಗ, ಕೆಲವು ಕಂಪನಿಗಳು ಅದರ ಲಾಭ ಪಡೆದವು. ಅದಾನಿ ಕಂಪನಿಯಲ್ಲಿ ಹೂಡಿಕೆ ಮಾಡಿದ್ದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಕೂಡ ಸೆಬಿ ನಿಯಮವನ್ನು ಪಾಲಿಸಿವೆ’ ಎಂದು ಹೇಳಿದೆ.

ಅದಾನಿ ಗ್ರೂಪ್‌ಗೆ ಸಮಿತಿ ಕ್ಲೀನ್‌ಚಿಟ್‌ ಕೊಟ್ಟ ಬೆನ್ನಲ್ಲೇ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ಕಿಡಿಕಾರಿದೆ. “ರಾಹುಲ್‌ಗಾಂಧಿಯವರಿಗೆ ಭಾಷಣ ಬರೆದುಕೊಡುವವರು ಇನ್ನು ಮುಂದೆ ತಮ್ಮ ಸುಳ್ಳಿನ ಯಂತ್ರವನ್ನು ಉಳಿಸಿಕೊಳ್ಳಲು ಬೇರೆ ಯಾವುದಾದರೂ ಸುಳ್ಳನ್ನು ಹುಡುಕಿಕೊಳ್ಳಬೇಕಾಗುತ್ತದೆ’ ಎಂದು ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವೀಯ ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next