Advertisement

ಗ್ರಾ.ಪಂ.ಸದಸ್ಯರಿಂದಲೇ ಸ್ವಚ್ಚತಾ ಕಾರ್ಯ 

03:44 PM Oct 02, 2017 | |

ಸಿದ್ಧಕಟ್ಟೆ : ಹೆಚ್ಚಿನ ನಗರ, ಪಟ್ಟಣ, ಹಳ್ಳಿಗಳು ಕಸ ಹಾಗೂ ಒಳ ಚರಂಡಿ ತ್ಯಾಜ್ಯ ಸಮಸ್ಯೆಗಳಿಂದ ಹೊರತಾಗಿಲ್ಲ. ಸಾರ್ವಜನಿಕ ಸ್ಥಳಗಳನ್ನು ಸ್ವಚ್ಚವಾಗಿರಿಸುವುದು ಸ್ಥಳೀಯ ಆಡಳಿತಗಳ ಕರ್ತವ್ಯವಾಗಿದ್ದರೂ ಅದರ ಅನುಷ್ಠಾನ ಸುಲಭ ಸಾಧ್ಯವಲ್ಲ. ಆದರೆ ಬಂಟ್ವಾಳ ತಾ| ಸಂಗಬೆಟ್ಟು ಗ್ರಾಮ ಪಂಚಾಯತ್‌ ಈಗಾಗಲೇ ಸ್ವಚ್ಚತೆಗಾಗಿ ಹಲವು ಯೋಜನೆಯನ್ನು ರೂಪಿಸಿ, ಕಾರ್ಯಗತಗೊಳಿಸಿ ಯಶಸ್ವಿಯಾಗಿದೆ. ಇತ್ತೀಚೆಗೆ ಗ್ರಾಮದ ಸ್ವಚ್ಚತೆ ಕುರಿತು ಇನ್ನೊಂದು ಯೋಜನೆಯನ್ನು ಗ್ರಾಮ ಪಂಚಾಯತ್‌ ರೂಪಿಸಿದೆ. ಇಲ್ಲಿ ಸ್ವತಃ ಗ್ರಾ.ಪಂ. ಸದಸ್ಯರೇ ಸ್ವಚ್ಚತಾ ಕಾರ್ಯ ನಡೆಸುತ್ತಾರೆ.

Advertisement

ಅಭಿಯಾನ
ಸಾಕಷ್ಟು ಅನುದಾನ, ಮೂಲಸೌಕರ್ಯ ಮತ್ತು ಮಾನವ ಸಂಪನ್ಮೂಲ ಇಲ್ಲದಿದ್ದರೂ ಸಂಗಬೆಟ್ಟು ಗ್ರಾ.ಪಂ. ವ್ಯವಸ್ಥಿತ ಬದಲಾವಣೆ, ಸುಧಾರಣೆ ಮತ್ತು ಹೊಣೆಗಾರಿಕೆಯಿಂದ ಸ್ವಚ್ಚತೆಯ ಪ್ರಯತ್ನ ನಡೆಸಿದೆ. ಸ್ವಚ್ಚತೆಗೆ ಆದ್ಯತೆ ನೀಡುವ ನಿರ್ಣಯವನ್ನು ಸಂಗಬೆಟ್ಟು ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಕೈಗೊಂಡಿದೆ. ಗ್ರಾ.ಪಂ.ಗೆ ಸಂಬಂಧಿಸಿದ ಪ್ರತಿ ಮಾಸಿಕ ಸಭೆ ಬಳಿಕ ಗ್ರಾ.ಪಂ. ವ್ಯಾಪ್ತಿಯ ಪ್ರಮುಖ ಸ್ಥಳಗಳಲ್ಲಿ ಸ್ವತಃ ಗ್ರಾ.ಪಂ. ಸದಸ್ಯರು ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಂಡು ಸಂಪೂರ್ಣ ಗ್ರಾಮದ ಸ್ವಚ್ಚತೆ ಕುರಿತು ಅಭಿಯಾನ
ನಡೆಸುತ್ತಿದ್ದಾರೆ.

ಸಿದ್ಧಕಟ್ಟೆ ಮಾರುಕಟ್ಟೆ ಆವರಣ, ಗ್ರಾಮ ಪಂಚಾಯತ್‌ ಆವರಣ, ಕಾಲನಿಗಳ ಆವರಣ ಹೀಗೆ ವಿವಿಧ ಕಡೆಗಳಲ್ಲಿ ನಿರ್ಣಯದಂತೆ ಸ್ವಚ್ಚತಾ ಕಾರ್ಯ ನಡೆಸಲಿದ್ದಾರೆ.

ವಾರ್ಡ್‌ ಮಟ್ಟದ ಸಭೆ
ಗ್ರಾಮದ ಸಂಪೂರ್ಣ ಸ್ವಚ್ಚತೆಯ ದೃಷ್ಟಿಯಿಂದ ಕಸ ವಿಲೇವಾರಿಯ ಕುರಿತು ವಾರ್ಡ್‌ ಮಟ್ಟದಲ್ಲೇ ಸಾರ್ವಜನಿಕರ ಸಭೆಯನ್ನು ನಡೆಸಿ, ಸಾರ್ವಜನಿಕರಿಂದ ಮಾಹಿತಿಯನ್ನು ಸಂಗ್ರಹಿಸಿ ವಿವಿಧ ಯೋಜನೆಯನ್ನು ರೂಪಿಸಲು ಗ್ರಾ.ಪಂ. ಅನುಕೂಲ ಕಲ್ಪಿಸಿದೆ. ತ್ಯಾಜ್ಯ ವಿಲೇವಾರಿ, ಕೊಳಚೆ ನೀರು ಮೊದಲಾದ ಸಮಸ್ಯೆಗಳ ಪರಿಹಾರಕ್ಕೆ ಇನ್ನೂ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಸ್ವಚ್ಚತೆ, ಪರಿಸರ ಸಂರಕ್ಷಣೆಗೆ ಸಾರ್ವಜನಿಕರು, ವಿದ್ಯಾರ್ಥಿಗಳು, ಸ್ವಯಂ ಸೇವಾ ಸಂಸ್ಥೆಗಳು ಕೂಡ ಕೈ ಜೋಡಿಸಬೇಕಾಗಿದೆ.ಇದು ಸ್ವಚ್ಚತಾ ಕಾರ್ಯಕ್ಕೆ ಇನ್ನೊಂದು ಹೆಜ್ಜೆ. ಮುಂದಿನ ದಿನಗಳಲ್ಲಿ ಸ್ವತ್ಛತಾ ಕಾರ್ಯ ನಿರಂತರವಾಗಿ ನಡೆಯಲು ಗ್ರಾ.ಪಂ. ಆಡಳಿತ ಮತ್ತು ಸಂಘ-ಸಂಸ್ಥೆಗಳು ಜತೆಗೂಡಿ ಇನ್ನಷ್ಟು ಯೋಜನೆಯನ್ನು ರೂಪಿಸಲಿವೆ ಎಂದು ಗ್ರಾ.ಪಂ. ಆಡಳಿತ ತಿಳಿಸಿದೆ.

ಅಭಿಯಾನಕ್ಕೆ ಸಹಕಾರ
ಈಗಾಗಲೇ ಜಾಗೃತಿಗಾಗಿ ಫಲಕ, ಪ್ರಕಟನೆಯನ್ನು ಗ್ರಾಮ ವ್ಯಾಪ್ತಿಯಲ್ಲಿ ಆಳವಡಿಸಲಾಗಿದೆ. ಜತೆಗೆ ಸ್ವಚ್ಚತೆಯ ಕುರಿತು ಅಭಿಯಾನ ಸಕ್ರಿಯವಾಗಿ ನಡೆಯಲಿದೆ. ಸಂಗಬೆಟ್ಟು, ಕರ್ಪೆ ಗ್ರಾಮಗಳ ವಿವಿಧ ಸಂಘ-ಸಂಸ್ಥೆಗಳ ಸಹಕಾರವೂ ಇದೆ.
ಸತೀಶ್‌ ಪೂಜಾರಿ, ಉಪಾಧ್ಯಕ್ಷರು, ಸಂಗಬೆಟ್ಟು ಗ್ರಾ.ಪಂ.

Advertisement

ರತ್ನದೇವ್‌ ಪುಂಜಾಲಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next