Advertisement
ಜಿಲ್ಲಾ ಪಂಚಾಯತ್ ಹೊಯ್ಸಳ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನೆಯ ಸಂದರ್ಭದಲ್ಲಿ ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇಗೌಡ ಅರಸೀಕೆರೆ ತಾಲೂಕಿನಲ್ಲಿ ಬಹುತೇಕ ಶುದ್ಧ ನೀರಿನ ಘಟಕಗಳು ವಿಫಲವಾಗಿವೆ. ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಬೇಕು ಎಂಬ ಉದ್ದೇಶದಿಂದ ಸರ್ಕಾರ ಸ್ಥಾಪನೆ ಮಾಡಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ಉದ್ದೇಶವೇ ಸಫಲವಾಗುತ್ತಿಲ್ಲ. ನೀರು ಶುದ್ಧೀಕರಿಸುವ ಯಂತ್ರಗಳೇ ನಕಲಿ ಎಂಬ ಆರೋಪಗಳಿವೆ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ನಿರ್ವಹಿಸುತ್ತಿರುವ ಘಟಕಗಳ ಹೊರತುಪಡಿಸಿದರೆ ಜಿಲ್ಲಾ ಪಂಚಾಯತ್, ಖಾಸಗಿ ಕಂಪನಿಗಳು ಹಾಗೂ ಕೆಆರ್‌ಐಡಿಎಲ್ ನಿರ್ವಹಣೆಯ ಕುಡಿಯುವ ನೀರಿನ ಘಟಕಗಳು ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ದೂರಿದರು.
Related Articles
Advertisement
ಕಸ ವಿಲೇವಾರಿಗೆ ಜಾಗ ಕೊಡಿಸಿ: ಗ್ರಾಮೀಣ ಪ್ರದೇಶದಲ್ಲಿ ಘನ ತಾಜ್ಯ ವಿಲೇವಾಗಿ ಘಟಕಗಳನ್ನು ಪ್ರತಿ ಗ್ರಾಮ ಪಂಚಾಯತ್ ಕಚೇರಿ ವ್ಯಾಪ್ತಿಯಲ್ಲೂ ಸ್ಥಾಪಿಸಬೇಕಾಗಿದೆ. ಹಾಸನ ಜಿಲ್ಲೆಯ 267 ಗ್ರಾಮ ಪಂಚಾಯತ್‌ಗಳ ಪೈಕಿ 35 ಗ್ರಾಮ ಪಂಚಾಯತ್‌ಗಳಲ್ಲಿ ಮಾತ್ರ ಘನ ತಾಜ್ಯ ವಿಲೇವಾರಿ ಘಕಗಳ ಸ್ಥಾಪನೆಗೆ ಭೂಮಿ ನಿಗದಿಪಡಿಸಲಾಗಿದೆ. ಇನ್ನುಳಿದ ಗ್ರಾಮ ಪಂಚಾಯತ್‌ಗಳಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ತುರ್ತಾಗಿ ಭೂಮಿ ಗುರ್ತಿಸಿಕೊಡಬೇಕು. ತಾಜ್ಯ ವಿಲೇವಾರಿ ಘಟಕಗಳ ಸ್ಥಾಪನೆಗೆ ಪ್ರತಿ ಗ್ರಾಮ ಪಂಚಾಯತಿಗೂ ಕೇಂದ್ರ ಸರ್ಕಾರ 20 ಲಕ್ಷ ರೂ. ಕೊಡುತ್ತದೆ ಎಂದು ಹೇಳಿದ ಈಶ್ವರಪ್ಪ ಅವರು ಶಾಸಕರು ನೇತೃತ್ವ ವಹಿಸಿಕೊಂಡು ಗ್ರಾಮ ಪಂಚಾಯತಿಗಳಲ್ಲಿ ತಾಜ್ಯ ವಿಲೇವಾರಿ ಘಟಕಗಳ ಸ್ಥಾಪನೆಗೆ ಸ್ಥಳ ಒದಗಿಸಬೇಕು ಎಂದು ಮನವಿ ಮಾಡಿದರು.
ಅಕ್ರಮ ಸಾಗುವಳಿ: ಶಾಸಕ ಎ.ಟಿ.ರಾಮಸ್ವಾಮಿ ಅವರು ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಭೂಮಿಯನ್ನು ರೈತರು ಅಕ್ರಮವಾಗಿ ಸಾಗುವಳಿ ಮಾಡಿಕೊಂಡು ಹಕ್ಕುಪತ್ರ ನೀಡಲು ಅರ್ಜಿ ಸಲ್ಲಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕ ಉದ್ದೇಶಕ್ಕೆ ಭೂಮಿ ಉಳಿದಿಲ್ಲ. ಈಗಲಾದರೂ ಅಧಿಕಾರಿಗಳು ಸಾರ್ವಜನಿಕ ಉದ್ದೇಶಕ್ಕೆ ಭೂಮಿಯನ್ನು ಹುಡುಕಿ ಕಾಯ್ದಿರಿಸಬೇಕು ಎಂದು ಒತ್ತಾಯಿಸಿದರು.
ಶೇ.40:60 ಅನುಪಾತ ಮೀರದಿರಲಿ: ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಯಲ್ಲಿ ಜಿಲ್ಲೆಗೆ 2019 -20 ನೇ ಸಾಲಿನಲ್ಲಿ 62 ಲಕ್ಷ ಮಾನವ ದಿನಗಳ ಉದ್ಯೋಗ ಸೃಷ್ಟಿಯ ಗುರಿಯಿದ್ದು 273 ಕೋಟಿ ರೂ. ವೆಚ್ಚದ ಅಂದಾಜು ಮಾಡಲಾಗಿತ್ತು. ಈ ವರೆಗೆ 191 ಕೋಟಿ ರೂ. ವೆಚ್ಚವಾಗಿದೆ. ಕೂಲ ಮೊತ್ತ 2.06 ಕೋಟಿ ರೂ. ಸಾಮಗ್ರಿ ಮೊತ್ತ 57 .26 ಕೋಟಿ ರೂ. ಪಾವತಿಯ ಬಾಕಿ ಇದೆ ಎಂದು ಜಿಪಂ ಸಿಇಒ ಪರಮಶ್ ಸಭೆಗೆ ಮಾಹಿತಿ ನೀಡಿದರು.
ಕೂಲಿ ಮೊತ್ತಕ್ಕಿಂತ ಸಾಮಗ್ರಿ ಮೊತ್ತ ಶೇ. 60 ಕ್ಕಿಂತ ಹೆಚ್ಚಿರುವ ಬಗ್ಗೆ ಆರ್‌ಡಿಪಿಆರ್ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಅವರು ಆಕ್ಷೇಪ ವ್ಯಕ್ತಪಡಿಸಿದರು. ಇನ್ನು ಮುಂದೆ ಕೂಲಿ ಮತ್ತು ಸಾಮಗ್ರಿ ವೆಚ್ಚ ಶೇ. 40 ಮತ್ತು 60 ರಷ್ಟನ್ನು ಮೀರದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬಿ.ಎಸ್ ಶ್ವೇತಾ ಮಾತನಾಡಿ, ಹಾಸನ ಜಿಲ್ಲಾ ಪಂಚಾಯತ್‌ಗೆ ಹೆಚ್ಚು ಅನುದಾನ ನೀಡಬೇಕು. ಮಹಾತ್ಮಗಾಂಧಿ ಗ್ರಾಮೀಣ ಉಧ್ದೋಗ ಖಾತರಿ ಯೋಜನೆಗೆ ಹೆಚ್ಚು ಅನುದಾನ ನೀಡಬೇಕು ಎಂದು ಸಚಿವರಿಗೆ ಮನವಿ ಮಾಡಿದರು.
ಕುಡಿಯುವ ನೀರು ಯೋಜನೆ ಪೂರ್ಣಗೊಳಿಸಿ ಹಾಸನ: ಜಿಲ್ಲೆಯಲ್ಲಿ ಕಾವೇರಿ ಮತ್ತು ಹೇಮಾವತಿ ನದಿ ಹರಿಯುತ್ತಿದ್ದರೂ ಹಲವೆಡೆ ಇನ್ನೂ ಕುಡಿಯುವ ನೀರಿನ ಸಮಸ್ಯೆಗಳಿವೆ ಯಾವುದಾದರೊಂದು ಯೋಜನೆಯಡಿ ಕುಡಿಯುವ ನೀರು ಒದಗಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಸೂಚಿಸಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಚಾಲ್ತಿಯಲ್ಲಿರುವ ಬಹುಗ್ರಾಮ ಕುಡಿಯುವ ನೀರು ಯೋಜನೆ, ಅಮೃತ ಯೋಜನೆ ಜಲಧಾರೆ ಹಾಗೂ ಇತರೆ ಯೋಜನೆಗಳಲ್ಲಿ ಪ್ರಾರಂಭಿಸ ಲಾಗಿರುವ ಕೆಲಸಗಳನ್ನು ತ್ವರಿತವಾಗಿ ಮುಗಿಯಬೇಕು. ಅರಸೀಕೆರೆ ತಾಲೂಕಿಗೆ ಯಗಚಿ, ಹೇಮಾವತಿ ನದಿಯಿಂದ ಕುಡಿಯುವ ನೀರು ಪೂರೈಸುವ ಬಹುಗ್ರಾಮ ಕುಡಿಯುವ ನೀರು ಯೋಜನೆಗಳನ್ನು ಪೂರ್ಣಗೊಳಿಸಲು ಬೇಕಾಗಿರುವ ಹೆಚ್ಚುವರಿ ಹಣ ಬಿಡುಗಡೆ ಮಾಡಲಾಗುವುದು, ಫೆಬ್ರವರಿ ಅಂತ್ಯದೊಳಗೆ ಕಾಮಗಾರಿ ಮುಗಿಸಿ ಎಂದು ಸಚಿವರು ಸೂಚನೆ ನೀಡಿದರು. ಶಾಸಕ ಕೆ.ಎಂ.ಶಿವಲಿಂಗೇಗೌಡ ಹಾಗೂ ಸಿ.ಎನ್.ಬಾಲಕೃಷ್ಣ ಅರಸೀಕೆರೆ ಮತ್ತು ಚನ್ನರಾಯಪಟ್ಟಣ ತಾಲೂಕುಗಳ ಬರ ಪರಿಸ್ಥಿತಿ, ಕುಡಿಯುವ ನೀರಿನ ಸಮಸ್ಯೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಹಾಗೂ ಅಗತ್ಯ ಅನುದಾನಗಳ ಬಗ್ಗೆ ಸಚಿವರ ಗಮನ ಸೆಳೆದರು. ಹಾಸನ ಕ್ಷೇತದ ಶಾಸಕ ಪ್ರೀತಂ ಜೆ. ಗೌಡ ಮಾತನಾಡಿ, ಹಾಸನ ನಗರ ಬೆಳೆಯುತ್ತಿದೆ.ಆದಕ್ಕೆ ಹೊಂದಿಕೊಂಡಿರುವ 8 ಗ್ರಾಮ ಪಂಚಾಯ್ತಿಗಳಲ್ಲಿ ಸುಮಾರು 80 ಸಾವಿರ ಜನಸಂಖ್ಯೆಯಿದ್ದು, ಪ್ರತಿ ದಿನ ಕೊಳವೆ ಬಾವಿ ನೀರನ್ನೇ ಆಶ್ರಯಿಸಬೇಕಾಗಿದೆ. ಹಾಲಿ ಚಾಲ್ತಿಯಲ್ಲಿರುವ ಅಮೃತ ಯೋಜನೆಯನ್ನು ಗ್ರಾಮ ಪಂಚಾಯತಿಗಳಿಗೂ ವಿಸ್ತರಣೆ ಮಾಡಲು ಕಷ್ಟವಾಗಿದೆ ಹಾಗಾಗಿ ಹೇಮಾವತಿ ನದಿಯಿಂದ ಹಾಸನ ಕಸಬಾ ತಾಲೂಕಿನ ಹೋಬಳಿ ಸಾಲಗಾಮೆ, ಕಟ್ಟಾಯ ಹೋಬಳಿಗಳಿಗೆ ನೀರು ಪೂರೈಸುವ ಹೊಸ ಯೋಜನೆ ಜಾರಿಗೊಳಿಸಿ ಎಂದು ಮನವಿ ಮಾಡಿದರು. ಶಾಸಕ ಎ.ಟಿ. ರಾಮಸ್ವಾಮಿ ಮಾತನಾಡಿ, ಅರಕಲಗೂಡು ಕ್ಷೇತ್ರದಲ್ಲಿ ಕಾವೇರಿ-ಹೇಮಾವತಿ ನದಿ ಹರಿದರೂ ಇನ್ನೂ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವವಿದೆ. ಹಾಗಾಗಿ ಪೂರಕವಾದ ಯೋಜನೆಯನ್ನು ಅನುಷ್ಠಾನಗೊಳಿಸಬೇಕು, ಕೆರೆಗಳನ್ನು ತುಂಬಿಸುವ ಕಾಮಗಾರಿಗಳು ನಡೆಯಬೇಕು ಎಂದರು. ಜಿಪಂ ಅಧ್ಯಕ್ಷೆ ಬಿ.ಎಸ್.ಶ್ವೇತಾ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್, ಗ್ರಾಮೀಣಾಭಿವೃದ್ಧಿ ಸಚಿವರ ವಿಶೇಷ ಕರ್ತವ್ಯ ಅಧಿಕಾರಿ ಜಯರಾಂ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಮುಖ್ಯ ಇಂಜಿನಿಯರ್ ಪ್ರಕಾಶ್, ಜಿಪಂ ಸಿಇಒ ಪರಮೇಶ್ ಇದ್ದರು.