Advertisement

ಶುದ್ಧ ನೀರಿನ ಅಭಾವ; ಪಂಪ್‌ಹೌಸ್‌ ಭೇಟಿ

02:14 PM Aug 25, 2018 | |

ಸುಳ್ಯ : ಕಲ್ಲುಮುಟ್ಲು ಪಂಪ್‌ ಹೌಸ್‌ನಿಂದ ಕೆಸರು ಮಿಶ್ರಿತ ನೀರು ಪೂರೈಕೆ ಆಗುತ್ತಿದ್ದು, ಮೂರು ದಿನಗಳಿಂದ ನೀರಿನ ಪೂರೈಕೆ ಸ್ಥಗಿತಗೊಂಡಿದೆ. ಪರ್ಯಾಯ ಮೂಲ ಬಳಸಿ ನಗರಕ್ಕೆ ತತ್‌ಕ್ಷಣ ಶುದ್ಧ ನೀರಿನ ಪೂರೈಕೆ ಮಾಡಬೇಕು. ವಾರದೊಳಗೆ ಸಮಸ್ಯೆ ಬಗೆಹರಿಸದಿದ್ದರೆ ಮುಂದಿನ ಹೋರಾಟ ಅನಿವಾರ್ಯ ಎಂದು ಕೆಪಿಸಿಸಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ ಎಚ್ಚರಿಸಿದ್ದಾರೆ. ಕಾಂಗ್ರೆಸ್‌ ಬೆಂಬಲಿತ ನ.ಪಂ. ಸದಸ್ಯರು ಹಾಗೂ ಕಾಂಗ್ರೆಸ್‌ ಮುಖಂಡರು ಶುಕ್ರವಾರ ನಗರಕ್ಕೆ ನೀರೊದಗಿಸುವ ಕಲ್ಲುಮುಟ್ಲು ಪಂಪ್‌ಹೌಸ್‌ಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಪರಿಶೀಲಿಸಿ ತತ್‌ಕ್ಷಣ ಸರಿಪಡಿಸುವಂತೆ ಆಗ್ರಹಿಸಿದರು. 

Advertisement

ಒಂದು ಪಂಪ್‌ ಹಾಳಾಗಿದೆ. ಜಾಕ್‌ ವೆಲ್‌ನಲ್ಲಿ ಕೆಸರು ತುಂಬಿ ನೀರೆತ್ತಲು ಸಾಧ್ಯವಾಗುತ್ತಿಲ್ಲ. ಜನರೇಟರ್‌ ಕೂಡ ಕೈ ಕೊಟ್ಟಿದೆ ಎಂದು ಸಿಬಂದಿಗಳು ಮಾಹಿತಿ ನೀಡಿದರು. ಒಂದು ಪಂಪ್‌ ಕೈ ಕೊಟ್ಟಾಗ ಇನ್ನೊಂದು ಪಂಪ್‌ ಬೇಕು. ಅದು ಇಲ್ಲಿ ಇಲ್ಲ. ಯಾಕೆ ಹೀಗೆ ಎಂದು ನ.ಪಂ.ಸದಸ್ಯ ಮುಸ್ತಾಫ‌ ಪ್ರಶ್ನಿಸಿದರು.

2 ಟ್ಯಾಂಕರ್‌ ನೀರು ಪೂರೈಕೆ
ಬಳಿಕ ಸ್ಥಳಕ್ಕೆ ಆಗಮಿಸಿದ ನ.ಪಂ. ಎಂಜಿನಿಯರ್‌ ಶಿವಕುಮಾರ್‌, ಆರೋಗ್ಯಾಧಿಕಾರಿ ರವಿಕೃಷ್ಣ ಅವರು ಬಳಿಯೂ ಸಮಸ್ಯೆ ಸರಿಪಡಿಸುವಂತೆ ಆಗ್ರಹಿಸಲಾಯಿತು. ಉತ್ತರಿಸಿದ ಎಂಜಿನಿಯರ್‌, ಕೆಸರು ಮಿಶ್ರಿತ ನೀರು ಬಳಸುವಂತಿಲ್ಲ. ಹಾಗಾಗಿ ಕೊಳವೆ ಬಾವಿ ಹಾಗೂ ಎರಡು ಟ್ಯಾಂಕರ್‌ ಮೂಲಕ ನೀರು ಪೂರೈಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಕಳೆದ ನಾಲ್ಕೈದು ವರ್ಷಗಳಿಂದ ಹೊಸ ಟ್ಯಾಂಕರ್‌ ಖರೀದಿಸಿ ಎಂದು ನ.ಪಂ.ಸಭೆಯಲ್ಲಿ ಒತ್ತಾಯ ಹೇರಿದರೂ ಖರೀದಿಸಿಲ್ಲ. ನಗರದಲ್ಲಿ ಶುದ್ಧ ನೀರಿನ ಅಭಾವವಿದ್ದರೂ ತುರ್ತು ಸಭೆ ಕೂಡ ಕರೆದಿಲ್ಲ ಎಂದು ಮುಸ್ತಾಫಾ ಅಸಮಾಧಾನ ವ್ಯಕ್ತಪಡಿಸಿದರು.

ಎರಡು ಟ್ಯಾಂಕರ್‌ ಸಾಲದು. ಹೆಚ್ಚುವರಿಯಾಗಿ ಮಂಗಳೂರಿನಿಂದ ತರಿಸಿ. ಅಲ್ಲದೆ ನಗರದಲ್ಲಿ ಕೆರೆ, ಬಾವಿ, ಕೊಳವೆಬಾವಿಗಳು ಸಾಕಷ್ಟು ಇವೆ. ಇವುಗಳನ್ನು ಬಳಸಿದರೆ ನದಿ ನೀರಿನ ಆವಶ್ಯಕತೆ ಇಲ್ಲ. ಕೆರೆಮೂಲೆಯಲ್ಲಿ ಬಾವಿಗೆ ಪಂಪ್‌ ಅಳವಡಿಸುವಂತೆ ವೆಂಕಪ್ಪ ಗೌಡ, ಮುಸ್ತಾಫ‌ ಕೆ.ಎಂ., ದಿನೇಶ್‌ ಅಂಬೆಕಲ್ಲು ಹೇಳಿದರು. ನ.ಪಂ.ಸದಸ್ಯರಾದ ಪ್ರೇಮಾ ಟೀಚರ್‌, ಶ್ರೀಲತಾ ಪ್ರಸನ್ನ, ಶಿವಕುಮಾರ್‌ ಕಂದಡ್ಕ, ಕಾಂಗ್ರೆಸ್‌ ಮುಖಂಡರಾದ ಸಿದ್ದಿಕ್‌ ಕೊಕ್ಕೊ, ಶರೀಫ್ ಕಂಠಿ, ಭವಾನಿಶಂಕರ ಕಲ್ಮಡ್ಕ, ರಿಯಾಜ್‌ ಕಟ್ಟೆಕ್ಕಾರ್‌, ಗಣೇಶ್‌ ಟೈಲರ್‌ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next