ಚಳ್ಳಕೆರೆ: ನಗರ ವ್ಯಾಪ್ತಿಯಲ್ಲಿ ಬರುವ ರಾಜಕಾಲುವೆಗಳ ಹೂಳೆತ್ತುವ ಕಾರ್ಯ ಕಳೆದ ಹತ್ತಾರು ವರ್ಷಗಳಿಂದ ನಡೆಯದೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗುವ ಸಂಭವ ಹೆಚ್ಚಿದೆ. ಮಳೆಗಾಲ ಪ್ರಾರಂಭಕ್ಕೂ ಮುನ್ನ ರಾಜಕಾಲುವೆಗಳ ಸ್ವತ್ಛತಾ ಕಾರ್ಯ ಕೈಗೊಳ್ಳಬೇಕೆಂದು ಅಖಿಲ ಭಾರತ ವಿಶ್ವಕರ್ಮ ಪರಿಷತ್ ರಾಜ್ಯಾಧ್ಯಕ್ಷ ಆರ್.ಪ್ರಸನ್ನಕುಮಾರ್ ಒತ್ತಾಯಿಸಿದ್ದಾರೆ.
ಶನಿವಾರ ನಗರದ ಮಹದೇವಿ ರಸ್ತೆ, ರೈಲ್ವೆ ಸ್ಟೇಷನ್ ರಸ್ತೆಗಳಲ್ಲಿ ಹಾದುಹೋಗಿರುವ ರಾಜಕಾಲುವೆಗಳನ್ನು ವೀಕ್ಷಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ನಗರ ವ್ಯಾಪ್ತಿಯಲ್ಲಿ ಹಲವೆಡೆ ರಾಜಕಾಲುವೆಗಳು ಒತ್ತುವರಿಯಾಗಿವೆ. ಇನ್ನೂ ಕೆಲವು ಕಡೆ ರಾಜಕಾಲುವೆ ಮಣ್ಣಲ್ಲಿ ಮುಚ್ಚಿಹೋಗಿವೆ. ಇದರ ಪರಿಣಾಮ ಅಂಬೇಡ್ಕರ್ ನಗರದ, ಜನತಾ ಕಾಲೋನಿ, ಗಾಂಧೀನಗರ, ರಹೀಂನಗರ, ಹಳೇಟೌನ್, ಮಹದೇವಿ ರಸ್ತೆ, ಕಾಟಪ್ಪನಹಟ್ಟಿ, ಗೊಲ್ಲರಹಟ್ಟಿ ಹೀಗೆ ಹಲವಾರು ತಗ್ಗು ಪ್ರದೇಶದಲ್ಲಿ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸುತ್ತಿವೆ. ಈಗಾಗಲೇ ಹಲವು ಬಾರಿ ಮಳೆಯಿಂದ ಸಾಕಷ್ಟು ನಷ್ಟ ಅನುಭವಿಸಲಾಗಿದೆ. ಹೀಗಾಗಿ ಮಳೆಗಾಲ ಪ್ರಾರಂಭಕ್ಕೂ ಮುನ್ನ ನಗರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ರಾಜಕಾಲುವೆಗಳಲ್ಲಿ ತುಂಬಿರುವ ಹೂಳು ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು ಎಂದು ಒತ್ತಾಯಿಸಿದರು.
ಸ್ವಚ್ಛತಾ ಸ್ಥಳಕ್ಕೆ ಭೇಟಿ ನೀಡಿದ ನಗರಸಭೆ ಉಪಾಧ್ಯಕ್ಷೆ ಆರ್.ಮಂಜುಳಾ ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ ಈಗಾಗಲೇ ರಾಜಕಾಲುವೆಗಳ ಸ್ವಚ್ಛತಾ ಕಾರ್ಯ ನಡೆದಿದೆ. ಸಾಕಷ್ಟು ಕಡೆ ಹೂಳುತುಂಬಿ ಮುಚ್ಚಿವೆ. ಇನ್ನೂ ಕೆಲವೆಡೆ ಕಾಲುವೆ ಮುಚ್ಚಿ ಕಟ್ಟಡ ನಿರ್ಮಿಸಲಾಗಿದೆ. ಈಗಾಗಲೇ ನಗರಸಭೆ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿ ಸರ್ವೆ ಕಾರ್ಯ ಕೈಗೊಳ್ಳಲಾಗಿದೆ. ರಹೀಂನಗರ, ಚಿತ್ರಯ್ಯನಹಟ್ಟಿ, ಸೂಜಿಮಲ್ಲೇಶ್ವರ ನಗರ, ಕಾಟಪ್ಪನಹಟ್ಟಿ ಮೂಲಕ ಹರಿಯುವ ರಾಜಕಾಲುವೆ ಕಾಮಗಾರಿ ಪ್ರಗತಿಯಲ್ಲಿದೆ. ಇನ್ನೂ ಸಾಕಷ್ಟು ಕಡೆ ರಾಜಕಾಲುವೆಗಳ ತೆರವು ಕಾರ್ಯ ನಡೆಸಲಾಗುವುದು ಎಂದರು.
ಅರ್ಧಕ್ಕೆ ನಿಂತ ಕಾಮಗಾರಿ
ಮಳೆ ಬಂದರೆ ಅವಾಂತರ ಸೃಷ್ಟಿಸುತ್ತಿರುವ ಕಾಟಪ್ಪನಹಟ್ಟಿ ಗೊಲ್ಲರಹಟ್ಟಿಯಲ್ಲಿ ರಾಜಕಾಲುವೆ ಕಾಮಗಾರಿ ಅರ್ಧಕ್ಕೆ ನಿಂತಿದ್ದು ಸಮಸ್ಯೆಗೆ ಕಾರಣವಾಗಿದೆ. ನಗರಸಭೆ ಅಧಿಕಾರಿಗಳು ರಾಜಕಾಲುವೆ ನಿರ್ಮಾಣ ಮಾಡುವ ನೆಪದಲ್ಲಿ ಬೃಹತ್ ಕಾಲುವೆ ತೋಡಿ ಕಾಮಗಾರಿ ಅರ್ಧಂಬರ್ಧ ಮಾಡಲಾಗಿದೆ. ಈ ಬಗ್ಗೆ ಹಲವು ಬಾರಿ ನಗರಸಭೆ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಎಚ್. ಮಹಲಿಂಗಪ್ಪ, ವೀರೇಶ್, ಅಜ್ಜಯ್ಯ, ರಂಗಸ್ವಾಮಿ, ತಿಪ್ಪೇಸ್ವಾಮಿ, ವೀರಭದ್ರಪ್ಪ ಮತ್ತಿತರರು ದೂರಿದರು.
ನಗರಸಭೆ ವ್ಯಾಪ್ತಿಯಲ್ಲಿ ರಾಜಕಾಲುವೆಗಳ ನಕ್ಷೆ ತಯಾರಿಸಿ ಕಾಮಗಾರಿ ಪ್ರಾರಂಭಿಸಲಾಗಿದೆ. ನಗರ ವ್ಯಾಪ್ತಿಯಲ್ಲಿ ಇರುವ ರಾಜಕಾಲುವೆಗಳನ್ನು ಗುರುತಿಸಿ ಹೂಳು ತೆಗೆಸುವ ಕಾರ್ಯ ಇನ್ನು ಕೆಲವೇ ದಿನಗಳಲ್ಲಿ ಪ್ರಾರಂಭಿಸಲಾಗುವುದು. ಮಳೆಗಾಲ ಪ್ರಾರಂಭಕ್ಕೂ ಮುನ್ನ ಎಲ್ಲ ಮುನ್ನೆಚ್ಚರಿಕೆ ಕ್ರಮ ವಹಿಸಲಾಗುವುದು.
–ಟಿ.ಲೀಲಾವತಿ, ಪೌರಾಯುಕ್ತೆ.