ಬೆಂಗಳೂರು: “ಬಯಲು ಬಹಿರ್ದೆಸೆ ಮುಕ್ತ’ (ಒಡಿಎಫ್) ಎಂದು ಬೆಂಗಳೂರು ಅಧಿಕೃತವಾಗಿ ಪ್ರಮಾಣೀಕರಿಸಿಕೊಳ್ಳದ ಹಿನ್ನೆಲೆಯಲ್ಲಿ ಈ ಬಾರಿಯೂ ಬಿಬಿಎಂಪಿ ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಹಿನ್ನಡೆ ಸಾಧಿಸುವ ಸಾಧ್ಯತೆ ಇದೆ.
ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಉತ್ತಮ ರ್‍ಯಾಂಕ್ ಬರಬೇಕಾದರೆ ಡಿ.15ರ ಒಳಗಾಗಿ ಬಯಲು ಬಹಿರ್ದೆಸೆ ಮುಕ್ತವಾಗಿದೆ ಎಂದು ಪ್ರಮಾಣೀಕರಿ ಸಿಕೊಳ್ಳಬೇಕಾಗಿದ್ದು, ಇದಕ್ಕೆ ಕೇವಲ ಎರಡು ದಿನಗಳಷ್ಟೇ ಬಾಕಿ ಇದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಇಲ್ಲಿಯವರೆಗೆ ಶೇ.84 ಪ್ರದೇಶಗಳಲ್ಲಿ ಮಾತ್ರ ಪ್ರತ್ಯೇಕ ಶೌಚಾಲಯ ನಿರ್ಮಾಣವಾಗಿದ್ದು, ಒಡಿಎಫ್ ಪ್ರಮಾಣ ಪತ್ರಕ್ಕೆ ಶೇ.90 ಪ್ರದೇಶ ಗಳಲ್ಲಾದರೂ ಪ್ರತ್ಯೇಕ ಶೌಚಾಲಯಗಳು ನಿರ್ಮಾಣವಾಗಿರಬೇಕು. ಹೀಗಾಗಿ, ಪ್ರಮಾಣ ಪತ್ರಕ್ಕೆ ಅರ್ಜಿಸಲ್ಲಿಸಲು ಇರುವ ಅವಕಾಶವನ್ನು ಬಿಬಿಎಂಪಿ ಕಳೆದುಕೊಂಡಿದೆ.
ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಒಟ್ಟು 6 ಸಾವಿರ ಅಂಕಗಳಿದ್ದು, 1,500 ಅಂಕಗಳು ಬಯಲು ಬಹಿರ್ದೆಸೆ ಮುಕ್ತಿಗೆಂದೇ ಮೀಸಲಿಡಲಾಗಿದೆ. ಈಗ ಅಧಿಕೃತವಾಗಿ ಘೋಷಣೆ ಮಾಡಿಕೊಳ್ಳದ ಹಿನ್ನೆಲೆಯಲ್ಲಿ ಬಿಬಿಎಂಪಿ ಉತ್ತಮ ಯಾಂಕ್ ಗಳಿಸುವುದು ಈ ಬಾರಿಯೂ ಕನಸಾಗಲಿದೆ. ಅಗತ್ಯ ಸಿದ್ಧತೆಯಿದ್ದರೂ ವೈಫಲ್ಯ: ಬಿಬಿಎಂಪಿ 2019ರಲ್ಲಿ 194ನೇ ರ್‍ಯಾಂಕ್‌ಗೆ ತೃಪ್ತಿಪಟ್ಟಿತ್ತು. 2020ನೇ ಸಾಲಿನಲ್ಲಿ ಉತ್ತಮ ರ್‍ಯಾಂಕ್ ಗಳಿಸುವ ನಿಟ್ಟಿನಲ್ಲಿ ಈ ಬಾರಿ ಮಾರ್ಷಲ್‌ಗಳ ನೇಮಕ, ಬಯಲು ಪ್ರದೇಶದಲ್ಲಿ ಮೂತ್ರ ಮಾಡುವವರಿಗೆ, ತ್ಯಾಜ್ಯ ಎಸೆಯುವವರಿಗೆ ಹಾಗೂ ಸ್ವತ್ಛತೆ ಕಾಪಾಡದವರ ಮೇಲೆ ದಂಡ ವಿಧಿಸಲಾಗುತ್ತಿದೆ. ಬಿಬಿಎಂಪಿಯ ಸಹಾಯ ಆ್ಯಪ್‌ಗೆ ಸರ್ವೀಸ್ ಲೆವೆಲ್ ಅಗ್ರಿಮೆಂಟ್ ಅಳವಡಿಸಿಕೊಳ್ಳುವುದಕ್ಕೆ ಬೇಕಾದ ಸಿದ್ಧತೆಗಳನ್ನು ಬಿಬಿಎಂಪಿ ಮಾಡಿಕೊಂಡಿದೆ. ಆದರೆ, ಬಯಲು ಬಹಿರ್ದೆಸೆ ಮುಕ್ತ ಮಾಡುವಲ್ಲಿ ಯಶಸ್ವಿಯಾಗಿಲ್ಲ. ಇಲ್ಲಿಯವರೆಗೆ 2,643 ಪ್ರತ್ಯೇಕ ಶೌಚಾಲಯ ಗಳನ್ನು ನಿರ್ಮಾಣವಾಗಿದೆ. ಶೇ.90 ಗುರಿ ಸಾಧಿಸಬೇಕಾದರೆ, ಇನ್ನು ಅಂದಾಜು 175ರಿಂದ 180 ಶೌಚಾಲಯಗಳು ನಿಮಾರ್ಣವಾಗ ಬೇಕಾಗಿದೆ. ಒಡಿಎಫ್ ಪ್ರಮಾಣೀಕರಿಸುವುದಕ್ಕೆ ಇನ್ನು ಕೆಲವೇ ದಿನಗಳು ಇರುವಂತೆ ಅರ್ಜಿ ಸಲ್ಲಿಸಲು ಬಿಬಿಎಂಪಿ ಅಧಿಕಾರಿಗಳು ಕೈಚೆಲ್ಲಿದ್ದಾರೆ.
ಹಣ ನೀಡಿದರೂ ಶೌಚಾಲಯ ಕಟ್ಟಿಸಿಕೊಳ್ಳಲಿಲ್ಲ: ಪ್ರತ್ಯೇಕ ಶೌಚಾಲಯ ನಿರ್ಮಾಣಕ್ಕೆ ಕೇಂದ್ರ, ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಆರ್ಥಿಕವಾಗಿ ನೆರವು ನೀಡುತ್ತಿವೆ. ಕೇಂದ್ರ ಸರ್ಕಾರ ಶೇ.60 ಹಾಗೂ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಶೇ.40ರಂತೆ ಒಟ್ಟು 15 ಸಾವಿರ ರೂ. ನೀಡಲಾಗುತ್ತಿದ್ದು, ಮೊದಲ ಕಂತಿನಲ್ಲಿ 2ಸಾವಿರ ರೂ. ನೀಡಲಾಗುತ್ತಿದೆ. ಸಾರ್ವಜನಿಕರಿಗೆ ಹಣ ನೀಡಿವುದರ ಜತೆಗೆ ಜಾಗೃತಿ ಮೂಡಿಸಿದರೂ ಪ್ರತ್ಯೇಕ ಶೌಚಾಲಯ ಗಳನ್ನು ನಿರ್ಮಿಸಿಕೊಳ್ಳುವಲ್ಲಿ ಜನ ಹಿಂದೇಟು ಹಾಕುತ್ತಿದ್ದಾರೆ. ಬಿಬಿಎಂಪಿಯ ಎಂಜಿನಿಯರ್‌ಗಳ ಅಸಹಕಾರವೂ ಕಾರಣ ಎನ್ನಲಾಗಿದೆ. ಇದೆಲ್ಲದರ ಪರಿಣಾಮ ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಅಂಕ ಕಳೆದುಕೊಳ್ಳುವುದಕ್ಕೆ ಕಾರಣವಾಗಿದೆ.
ಎದ್ದೇಳಿ ಅಧಿಕಾರಿಗಳೇ!: ಬಿಬಿಎಂಪಿ ವ್ಯಾಪ್ತಿಯ ಎಂಟೂ ವಲಯದ ವಿವಿಧ ವಿಭಾಗದ ಅಧಿಕಾರಿಗಳು ಕಡ್ಡಾಯವಾಗಿ ಬೆಳಗ್ಗೆ 6 ಗಂಟೆಯಿಂದ 9ಗಂಟೆಯವರೆಗೆ ಹೆಚ್ಚುವರಿ ಕೆಲಸ ಮಾಡಬೇಕು ಎಂದು ನ.18ರಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್ ಸುತ್ತೋಲೆ ಹೊರಡಿಸಿದ್ದರು. ಈ ಸುತ್ತೋಲೆ ಹೊರಡಿಸಿ 15 ದಿನಗಳೇ ಕಳೆದರೂ ಬಿಬಿಎಂಪಿಯ ಬಹುತೇಕ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುತ್ತಿಲ್ಲ.
ಬೆರಳೆಣಿಕೆಯ ಸಿಬ್ಬಂದಿಗಳು ಮಾತ್ರ ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ವಲಯವಾರು ಜಂಟಿ ಆಯುಕ್ತರು ದಿಢೀರ್ ಸ್ಥಳ ಪರಿಶೀಲನೆ ಮಾಡುವ ಮೂಲಕ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಪ್ರಯತ್ನ ಮಾಡುತ್ತಿದ್ದರಾದರೂ, ಇದು ಯಶಸ್ವಿಯಾಗುತ್ತಿಲ್ಲ. ಹೀಗಾಗಿ, ನಗರದ ಪ್ರಾಥಮಿಕ ಹಂತದ ಸಮಸ್ಯೆಗಳು ಪರಿಹಾರವಾಗುತ್ತಿಲ್ಲ. ವಾರ್ಡ್ ಮಟ್ಟದ ಎಲ್ಲ ಅಧಿಕಾರಿಗಳು ತಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಬೆಳಗ್ಗೆ 6 ಗಂಟೆಗೆ ಕೆಲಸಕ್ಕೆ ಹಾಜರಾಗಬೇಕು. ಬ್ಲಾಕ್‌ಸ್ಪಾಟ್ ಗಳ ತೆರವು, ತ್ಯಾಜ್ಯ ಕಡ್ಡಾಯ ವಿಂಗಡಣೆ, ಗುತ್ತಿಗೆದಾರರು ಸರ್ಮಪಕವಾಗಿ ತ್ಯಾಜ್ಯ ನಿರ್ವಹಣೆ ಮಾಡುತ್ತಿದ್ದಾರೆಯೇ ಎನ್ನುವುದನ್ನು ಪರಿಶೀಲಿಸ ಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿತ್ತು.
-ಹಿತೇಶ್ ವೈ