ಸುರತ್ಕಲ್ : ನಾಗರಿಕ ಸಲಹಾ ಸಮಿತಿ ಸುರತ್ಕಲ್, ರಾಮಕೃಷ್ಣಮಿಷನ್ ಸ್ವಚ್ಛ ಸುರತ್ಕಲ್ ಅಭಿಯಾನದ ಅಂಗವಾಗಿ ಕುಳಾಯಿ ಮಸೀದಿ ಮುಂಭಾಗ ಕಸ ಹಾಗೂ ಕೊಳೆಯಿಂದ ತುಂಬಿಕೊಂಡಿದ್ದ ಜಾಗವನ್ನು ಸ್ವಚ್ಛಗೊಳಿಸಿ ಹೊಸರೂಪ ನೀಡಿ ಹೂ ತೋಟ ನಿರ್ಮಿಸಲಾಯಿತು.
ಮನಪಾ ಸದಸ್ಯರಾದ ಗಣೇಶ್ ಹೊಸಬೆಟ್ಟು ಮಾತನಾಡಿ, ಸಾರ್ವಜನಿಕ ಸ್ಥಳಗಳಲ್ಲಿ ಕಸವನ್ನ ಎಸೆದು ನಮ್ಮೂರಿನ ಅಂದಗೆಡಿಸುವ ಜನರಿಗೆ ಸ್ವಚ್ಛ ಸುರತ್ಕಲ್ ಅಭಿಯಾನದ ಕಾರ್ಯವು ಪ್ರೇರಣೆಯಾಗಬೇಕು. ಸಂಘ-ಸಂಸ್ಥೆಗಳು ಕಸ ತುಂಬಿರುವ ಸಾರ್ವಜನಿಕ ಸ್ಥಳಗಳನ್ನು ಗುರುತಿಸಿ, ಅಭಿವೃದ್ಧಿಪಡಿಸಿ ಸ್ವಚ್ಛ ಸುಂದರ ದೇಶ ಕಟ್ಟುವಲ್ಲಿ ಶ್ರಮಿಸಬೇಕೆಂದರು.
ಹೂತೋಟದ ನಿರ್ಮಾಣದಲ್ಲಿ ಸಹಕಾರ ನೀಡಿದ ನಾಗರಿಕ ಸಮಿತಿ ಕುಳಾಯಿ, ವರುಣ್ ಚೌಟ, ಮನಪಾ ಸದಸ್ಯ ಗಣೇಶ್ ಹೊಸಬೆಟ್ಟು, ಹರಿಣಿ ಮತ್ತು ಹೂತೋಟದ ನಿರ್ವಹಣೆ ಮಾಡಲು ಮುಂದೆ ಬಂದ ಮೀನಾಕ್ಷಿ ಮತ್ತು ಮನೆಯವರನ್ನು ಶ್ಲಾಘಿಸಲಾಯಿತು.
ನಾಗರಿಕ ಸಲಹಾ ಸಮಿತಿ ಅಧ್ಯಕ್ಷ ಜೆ.ಡಿ. ವೀರಪ್ಪ , ರಾಮಕೃಷ್ಣಮಿಷನ್ ಸ್ವತ್ಛ ಸುರತ್ಕಲ್ ಅಭಿಯಾನದ ಸಂಯೋಜಕ ಸತೀಶ್ ಸದಾನಂದ್, ಗೋವಿಂದ ದಾಸ ಕಾಲೇಜು ಉಪ ಪ್ರಾಂಶುಪಾಲ ಕೃಷ್ಣಮೂರ್ತಿ, ನಾಗರಿಕ ಸಮಿತಿ ಕುಳಾಯಿ ಅಧ್ಯಕ್ಷ ಭರತ್ ಶೆಟ್ಟಿ, ಗಂಗಾಧರ ಬಂಜನ್, ಸಚ್ಚಿದಾನಂದ , ಶ್ರೀನಿವಾಸ ರಾವ್, ಸಾರ್ವಜನಿಕ ಗಣೇಶೋತ್ಸವ ಸಮಿತಿ ಕುಳಾಯಿ ಅಧ್ಯಕ್ಷ ಕೆ.ಪಿ. ಚಂದ್ರಶೇಖರ್, ನಾರಾಯಣ ಗುರು ಮಂದಿರದ ಪ್ರಭಾಕರ್, ಸ್ಪಂದನ ಫ್ರೆಂಡ್ಸ್‌ನ ಸುನಿಲ್ ಕುಳಾಯಿ, ಅಂಕುಶ್ ಶೆಟ್ಟಿ, ನಾಗೇಶ್ ಕುಳಾಳ್, ಎಂ.ಟಿ. ಸಾಲ್ಯಾನ್, ರಮೇಶ್ ಅಳಪೆ, ಗಂಗಾಧರ ಕೆ., ಗಣೇಶ್, ಮುಸ್ತಫಾ, ಶುಭಾ ಭಟ್ ಉಪಸ್ಥಿತರಿದ್ದರು.
ಆತ್ಮಾವಲೋಕನ ಅಗತ್ಯ
ನಾಗರಿಕ ಸಲಹಾ ಸಮಿತಿ ಸುರತ್ಕಲ್ ಇದರ ಸಂಚಾಲಕ ಡಾ| ರಾಜಮೋಹನ್ ರಾವ್ ಮಾತನಾಡಿ, ವಿದ್ಯಾವಂತ ಜನರು ತಮ್ಮ ಮನೆ, ಪರಿಸರವನ್ನು ಸ್ವಚ್ಛ ಮಾಡಿ ರಸ್ತೆಯ ಮೇಲೆ ಎಸೆದ ಕಸವನ್ನು, ಅವಿದ್ಯಾವಂತರು, ಅನಿವಾರ್ಯ ಕಾರಣಗಳಿಂದ ಸ್ವಚ್ಛತಾ ಕೆಲಸದಲ್ಲಿ ತೊಡಗಿಸಿಕೊಂಡ ಪೌರ ಕಾರ್ಮಿಕರು ಶುಚಿಗೊಳಿಸುವುದಾದರೆ ತಮ್ಮ ವಿದ್ಯೆಯಿಂದ ಸಮಾಜ, ದೇಶಕ್ಕೆ ಆಗುವ ಪ್ರಯೋಜನವಾದರು ಏನು ಎಂದು ಆತ್ಮಾವಲೋಕನ ಮಾಡುವ ಸಮಯ ಬಂದಿದೆ ಎಂದರು.