Advertisement

ರಾಮಕೃಷ್ಣ ಮಿಷನ್‌ ನೇತೃತ್ವದಲ್ಲಿ ‘ಸ್ವಚ್ಛ  ಮಂಗಳೂರು’ಅಭಿಯಾನ 

11:07 AM Dec 25, 2017 | Team Udayavani |

ಮಹಾನಗರ: ರಾಮಕೃಷ್ಣ ಮಿಷನ್‌ ‘ಸ್ವಚ್ಛ ಮಂಗಳೂರು’ ಅಭಿಯಾನದ 4ನೇ ಹಂತದ 8ನೇ ಶ್ರಮದಾನ ಕಾರ್ಯಕ್ರಮ ರವಿವಾರ ಬೆಳಗ್ಗೆ 7ರಿಂದ 10 ಗಂಟೆಯ ತನಕ ಹಂಪನಕಟ್ಟೆ ಪರಿಸರದಲ್ಲಿ ಜರಗಿತು. 

Advertisement

ಮಂಗಳೂರು ನಗರ ಪೊಲೀಸ್‌ ಆಯುಕ್ತ ಸುರೇಶ್‌ ಟಿ.ಆರ್‌. ಹಾಗೂ ಸ್ವಾಮಿ ದಯದೀಪಾನಂದಜಿ ರಾಮಕೃಷ್ಣ ಮಿಷನ್‌ ಹರಿದ್ವಾರ್‌ ಅವರು ಸ್ವಾಮಿ ಜಿತಕಾಮಾನಂದಜಿ ಉಪಸ್ಥಿತಿಯಲ್ಲಿ ಜಂಟಿಯಾಗಿ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ವಿಧಾನ್‌ ಪರಿಷತ್‌ ವಿಪಕ್ಷದ ಮುಖ್ಯ ಸಚೇತಕ ಕ್ಯಾ| ಗಣೇಶ್‌ ಕಾರ್ಣಿಕ್‌, ಡಾ| ಸತೀಶ್‌ ರಾವ್‌ ಉಪಸ್ಥಿತರಿದ್ದರು.

ಆಯುಕ್ತರಾದ ಸುರೇಶ್‌ ಟಿ.ಆರ್‌. ಮಾತನಾಡಿ, ‘ರಾಮಕೃಷ್ಣ ಮಿಷನ್‌ ಸ್ವಚ್ಛತಾ ಅಭಿಯಾನವನ್ನು ವಿಶಿಷ್ಟವಾಗಿ ಮಾಡಿ
ಮಾದರಿ ಕಾರ್ಯಕ್ರಮವನ್ನಾಗಿಸಿದೆ. ಸ್ವಚ್ಛತೆಯೊಂದಿಗೆ ಸ್ವಚ್ಛ ಮನಸ್ಸು ಎಂಬ ಕಾರ್ಯಕ್ರಮದ ಕಲ್ಪನೆ ಹಾಗೂ ಗ್ರಾಮಗಳ ಜನರನ್ನೂ ಈ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದು ಅಭಿನಂದನಾರ್ಹ. ಪೊರಕೆ ಹಿಡಿದು ಕಸ ಗುಡಿಸುವುದರಿಂದ ಹಿಡಿದು ಅನೇಕ ಜನೋಪಯೋಗಿ ಕಾರ್ಯಗಳನ್ನು ಅನುಷ್ಠಾನಗೊಳಿಸಿ ನಗರದ ಎಲ್ಲ ವರ್ಗಗಳ ಜನ ಈ ಅಭಿಯಾನದಲ್ಲಿ ಭಾಗವಹಿಸಿರುವುದು ಶ್ಲಾಘನೀಯ ಎಂದರು. ಸ್ವಾಮೀಜಿಯವರು ಹಾಗೂ ಗಣ್ಯರು ಪೊರಕೆ ಹಿಡಿದು ಹಂಪನಕಟ್ಟೆ ಮುಖ್ಯ ರಸ್ತೆಯನ್ನು ಸ್ವಚ್ಛಗೊಳಿಸಿದರು.

ತ್ಯಾಜ್ಯ ತೆರವು
ಪುರಭವನದ ಬದಿಯ ಕೇಂದ್ರ ರೈಲು ನಿಲ್ದಾಣಕ್ಕೆ ಸಾಗುವ ಮಾರ್ಗದಲ್ಲಿಯೂ ಸ್ವಚ್ಛತಾ ಅಭಿಯಾನ ನಡೆಯಿತು. ಅದೇ
ರಸ್ತೆಯ ಮೂಲೆಯೊಂದರಲ್ಲಿ ಬಿಸಾಡಿದ್ದ ಕಟ್ಟಡ ತ್ಯಾಜ್ಯ ಹಾಗೂ ಅಪಾಯಕಾರಿ ಗಾಜುಗಳನ್ನು ತೆಗೆದುಹಾಕಿದರು. ರಸ್ತೆಯ ಪಕ್ಕದಲ್ಲಿ ಬೆಳೆದಿದ್ದ ಹುಲ್ಲು ತೆಗೆದು ತೋಡುಗಳನ್ನು ಶುಚಿಗೊಳಿಸಲಾಯಿತು.

ಪಾದಚಾರಿ ಮೆಟ್ಟಿಲು ನಿರ್ಮಾಣ
ಸಾರ್ವಜನಿಕರು ನಡೆದು ಹೋಗುವ ಕಾಲುದಾರಿ ಅರ್ಧಕ್ಕೆ ನಿಂತುಹೋಗಿ ಕೃತಕ ಹೊಂಡ ನಿರ್ಮಾಣವಾಗಿ ಅಪಾಯಕಾರಿಯಾಗಿತ್ತು. ಅಲ್ಲಿ ಗಾರೆ ಕೆಲಸದವರ ಸಹಾಯದಿಂದ ಮೆಟ್ಟಿಲು ಮಾಡಲಾಗಿದೆ. ಮತ್ತೂಂದೆಡೆ ಕಲ್ಲು ಕಟ್ಟಿ ಪಾದಚಾರಿಗಳಿಗೆ ಅಪಾಯಕಾರಿಯಾಗಬಹುದಾದ ಸ್ಥಳದ ಗುರುತು ಸಿಗುವಂತೆ ಮಾಡಲಾಗಿದೆ.

Advertisement

ರೈಲು ನಿಲ್ದಾಣ ಸ್ವಚ್ಛತೆ
ಶ್ರೀ ಗಣಪತಿ ಹೈಸ್ಕೂಲ್‌ ಹಾಗೂ ಪದವಿ ಪೂರ್ವ ಕಾಲೇಜಿನ ಸುಮಾರು 250 ಕ್ಕೂ ಅಧಿಕ ವಿದ್ಯಾರ್ಥಿಗಳು ರಾಮಕೃಷ್ಣ
ಮಿಷನ್‌ ಮಾರ್ಗದರ್ಶನದಲ್ಲಿ ಕೇಂದ್ರ ರೈಲು ನಿಲ್ದಾಣದ ಸುತ್ತಮುತ್ತ ಸ್ವಚ್ಛತಾ ಅಭಿಯಾನ ಕೈಗೊಂಡರು. ಸಾರಸ್ವತ ಶಿಕ್ಷಣ ಸಂಸ್ಥೆಯ ರಾಮಚಂದ್ರ ರಾವ್‌ ಹಾಗೂ ಮಹೇಶ್‌ ಬೊಂಡಾಲ್‌ ಅಭಿಯಾನದ ನೇತೃತ್ವ ವಹಿಸಿದ್ದರು.

ಸುಮಾರು ಎರಡು ಟಿಪ್ಪರ್‌ಗಳಷ್ಟು ಕಸವನ್ನು ಗುಡಿಸಿ ತೆಗೆದು ರೈಲು ನಿಲ್ದಾಣದತ್ತ ಸಾಗುವ ಎಲ್ಲ ಮಾರ್ಗಗಳನ್ನು ಶುಚಿಗೊಳಿಸಿದರು. ಸುರೇಶ್‌ ಶೆಟ್ಟಿ ಹಾಗೂ ಕೊಡಂಗೆ ಬಾಲಕೃಷ್ಣ ನಾಯಕ್‌ ವಿದ್ಯಾರ್ಥಿಗಳನ್ನು ಮಾರ್ಗದರ್ಶಿಸಿದರು.
ಜಪಾನಿ ಪ್ರಜೆ ಮಸಾಹಿರೋ ಮೊನೊ, ಮಹ್ಮದ್‌ ಶಮೀಮ್‌ ಸ್ವಯಂ ಪ್ರೇರಣೆಯಿಂದ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ರಾಮಕೃಷ್ಣ ಮಠದಲ್ಲಿ ನಡೆಯುತಿರುವ ‘ಪ್ರೇರಣಾ’ ಶಿಬಿರಕ್ಕೆ 17 ಊರುಗಳಿಂದ ಬಂದಿದ್ದ 90 ಯುವಕರು ರಂಜನ್‌ ಬಿ. ಯು. ನೇತೃತ್ವದಲ್ಲಿ ಅಭಿಯಾನದಲ್ಲಿ ಭಾಗವಹಿಸಿದರು. ಎಂಆರ್‌ಪಿಎಲ್‌ ಈ ಅಭಿಯಾನಕ್ಕೆ ಪ್ರಾಯೋಜಕತ್ವ ನೀಡಿ ಪ್ರೋತ್ಸಾಹಿಸುತ್ತಿದೆ.

ಸುಗಮ ಸಂಚಾರಕ್ಕೆ ಅನುವು 
ಪೋಸ್ಟರ್‌ ಬ್ಯಾನರ್‌ ನಗರದ ಸೌಂದರ್ಯ ಹಾಳು ಮಾಡುತ್ತಿದೆ. ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಪಾಯಕಾರಿಯಾಗುತ್ತಿದೆ ಎಂದು ಕಳೆದ ಕೆಲವು ವಾರಗಳಿಂದ ಮಂಗಳೂರಿನ ವಿವಿಧೆಡೆಗಳಲ್ಲಿ ಬ್ಯಾನರ್‌ ತೆರವು ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ಇಂದೂ ಸಹಿತ ಸ್ವತ್ಛ ಮಂಗಳೂರು ಕಾರ್ಯಕರ್ತರು ಪಾಂಡೇಶ್ವರ, ಹಂಪನಕಟ್ಟೆ ಸಹಿತ ಅನೇಕ ಸ್ಥಳಗಳಲ್ಲಿ ತೂಗು ಹಾಕಿದ್ದ ಬ್ಯಾನರ್‌ ಗಳನ್ನು ತೆಗೆದು ಹಾಕಿದರು.

ಪೋಸ್ಟರ್‌ಗಳ ತೆರವು
ಸುಮಾರು ಐವತ್ತು ಜನ ಕಾರ್ಯಕರ್ತರು ತಾ. ಪಂ. ಆವರಣ ಗೋಡೆಯಿಂದ ಪ್ರಾರಂಭಿಸಿ ಎಬಿ ಶೆಟ್ಟಿ ವೃತ್ತದವರೆಗಿನ ಸರಕಾರಿ ಕಟ್ಟಡಗಳ ಆವರಣ ಗೋಡೆಗಳ ಮೇಲೆ ಅಂಟಿಸಿದ್ದ ಪೋಸ್ಟರ್‌ ಗಳನ್ನು ತೆಗೆದು ಶುಚಿಗೊಳಿಸಿದರು. ಅನಂತರ ಗೋಡೆಗಳಿಗೆ ಬಣ್ಣ ಹಚ್ಚಿ ಅಂದಗೊಳಿಸಿದರು. ಜತೆಗೆ ಕ್ಲಾಕ್‌ ಟವರ್‌ನಿಂದ ಆರ್‌ಟಿಓ ತನಕದ ಎರಡೂ ಬದಿ ರಸ್ತೆಯನ್ನು, ಮಾರ್ಗ ವಿಭಜಕಗಳನ್ನು ಸ್ವಚ್ಛ  ಮಾಡಿದರು. 

Advertisement

Udayavani is now on Telegram. Click here to join our channel and stay updated with the latest news.

Next