Advertisement

ಕುಂದಾಪುರ: ಬೃಹತ್‌ ಸ್ವಚ್ಛತಾ ಆಂದೋಲನ

01:15 AM Oct 03, 2018 | Team Udayavani |

ಕುಂದಾಪುರ: ಗಾಂಧಿ ಜಯಂತಿ ಪ್ರಯುಕ್ತ ಭಂಡಾರ್‌ಕಾರ್ ಕಾಲೇಜು ಹಾಗೂ ಕುಂದಾಪುರ ಪುರಸಭೆಯ ನೇತೃತ್ವದಲ್ಲಿ ಇಲ್ಲಿನ ವಿವಿಧ ಸಂಘ -ಸಂಸ್ಥೆಗಳ ಸಹಯೋಗದಲ್ಲಿ ಮಂಗಳವಾರ ಪುರಸಭೆಯ ಎಲ್ಲ 23 ವಾರ್ಡ್‌ಗಳಲ್ಲಿಯೂ ಏಕಕಾಲದಲ್ಲಿ ಸುಮಾರು 2,700 ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯಲ್ಲಿ ಬೃಹತ್‌ ಸ್ವಚ್ಛತಾ ಆಂದೋಲನ ನಡೆಯಿತು.

Advertisement

ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ 150ನೇ ಜನ್ಮ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಕುಂದಾಪುರ ಪುರಸಭೆಯ ಜನರಿಗೆ ಸ್ವತ್ಛತೆಯ ಕುರಿತ ಜಾಗೃತಿ ಮೂಡಿಸುವ ಸಲುವಾಗಿ ಭಂಡಾರ್‌ಕಾರ್ ಕಾಲೇಜು, ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಈ ಬೃಹತ್‌ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿತು. ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ಟಿ. ಭೂಬಾಲನ್‌ ಅವರು ಕೂಡ ಈ ಸ್ವತ್ಛತಾ ಕಾರ್ಯದಲ್ಲಿ ಪಾಲ್ಗೊಂಡು, ಹುರಿದುಂಬಿಸಿದ್ದಲ್ಲದೆ, ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ| ಜಿ.ಎಂ. ಗೊಂಡ, ಕಾಲೇಜಿನ ಐಕ್ಯೂಎಸಿ ಸಂಚಾಲಕ ಶಶಿಕಾಂತ್‌ ಹತ್ವಾರ್‌, ಪುರಸಭೆಯ ಎಲ್ಲ 23 ಸದಸ್ಯರು, ಕಚೇರಿ ಸಿಬಂದಿ, ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷ, ಪದಾಧಿಕಾರಿಗಳು, ವಿವಿಧ ಪಕ್ಷಗಳ ಮುಖಂಡರು, ಸಾರ್ವಜನಿಕರು ಪಾಲ್ಗೊಂಡರು. 

2,700 ವಿದ್ಯಾರ್ಥಿಗಳು ಭಾಗಿ


ಈ ಸ್ವಚ್ಛತಾ ಆಂದೋಲನದ ವಿಶೇಷತೆಯೆಂದರೆ ಭಂಡಾರ್‌ಕಾರ್ ಪದವಿ ಹಾಗೂ ಪ.ಪೂ. ಕಾಲೇಜಿನ ಎಲ್ಲ 2,700 ವಿದ್ಯಾರ್ಥಿಗಳು ಈ ಸ್ವಚ್ಛತಾ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಇವರೊಂದಿಗೆ ಪ್ರತಿ ವಾರ್ಡಿಗೆ ತಲಾ 3 ಮಂದಿಯಂತೆ 120 ಬೋಧಕ, ಬೋಧಕೇತರ ಸಿಬಂದಿ, ಆಯಾಯ ವಾರ್ಡಿನ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬೆಳಗ್ಗೆ 9.30 ರಿಂದ ಆರಂಭಗೊಂಡ ಸ್ವಚ್ಛತಾ ಕಾರ್ಯಕ್ರಮದಡಿ ಮೊದಲ 1 ಗಂಟೆ ಮನೆ- ಮನೆಗಳಿಗೆ ತೆರಳಿ ಕರಪತ್ರ ಹಂಚಿ ಅರಿವು ಮೂಡಿಸಲಾಯಿತು. ಬಳಿಕ ಮಧ್ಯಾಹ್ನ 12.30ರವರೆಗೆ ಎಲ್ಲ ವಾರ್ಡ್‌ಗಳಲ್ಲಿಯೂ ಸ್ವಚ್ಛತಾ ಕಾರ್ಯ ನಡೆಯಿತು. 

ಇದು ಪ್ರಚಾರಕ್ಕಲ್ಲ
ಇದು ಕೇವಲ ಪ್ರಚಾರಕ್ಕಾಗಿ ಮಾಡಿದ ಕಾರ್ಯಕ್ರಮವಲ್ಲ. ಗಾಂಧೀಜಿ ಅವರ 150 ನೇ ಜನ್ಮ ದಿನದ ಪ್ರಯುಕ್ತ ಅವರ ತತ್ವಗಳಿಗೆ ಅನುಸಾರವಾಗಿಯೇ ಈ ಸ್ವಚ್ಛತಾ ಕಾರ್ಯ ನಡೆದಿದೆ. ಕಾಲೇಜಿನ ಎಲ್ಲ ವಿದ್ಯಾರ್ಥಿಗಳು, ಉಪನ್ಯಾಸಕರು, ಬೋಧಕೇತರ ಸಿಬಂದಿ ಸಕ್ರೀಯರಾಗಿ ಪಾಲ್ಗೊಂಡಿರುವುದು ವಿಶೇಷ. ಪುರಸಭಾ ವ್ಯಾಪ್ತಿಯ ಜನರು ಮಾತ್ರವಲ್ಲದೆ, ವಿದ್ಯಾರ್ಥಿಗಳಲ್ಲೂ ಸ್ವಚ್ಛತೆಯ ಅರಿವು ಮೂಡಿದರೆ ಸಾರ್ಥಕವಾಗುತ್ತದೆ. 
– ಡಾ| ಎನ್‌.ಪಿ. ನಾರಾಯಣ ಶೆಟ್ಟಿ, ಪ್ರಾಂಶುಪಾಲರು, ಭಂಡಾರ್‌ಕಾರ್ ಪದವಿ ಕಾಲೇಜು

Advertisement

ವಿದ್ಯಾರ್ಥಿಗಳ ಉತ್ಸಾಹ ಶ್ಲಾಘನೀಯ
ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ನಡೆದ ಈ ಸ್ವಚ್ಛತಾ ಕಾರ್ಯದಲ್ಲಿ ವಿದ್ಯಾರ್ಥಿಗಳು, ಉಪನ್ಯಾಸಕರು ಅತ್ಯುತ್ಸಾಹದಿಂದ ಪಾಲ್ಗೊಂಡಿರುವುದು ಶ್ಲಾಘನೀಯ. ಗಾಂಧೀಜಿಯವರ ಸಂದೇಶದಂತೆ ನಮ್ಮ ಮನೆ, ನಾವಿರುವ ಪ್ರದೇಶ ಸ್ವತ್ಛವಾದರೆ, ದೇಶವೇ ಸ್ವಚ್ಛವಾದಂತೆ ಎನ್ನುವ ಕಲ್ಪನೆಯನ್ನು ಈ ಮೂಲಕ ಸಾಕಾರಗೋಳಿಸೋಣ. 
– ಕೆ. ಗೋಪಾಲಕೃಷ್ಣ ಶೆಟ್ಟಿ, ಪುರಸಭೆಯ ಮುಖ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next