Advertisement
ನಾಲ್ಕು ವರ್ಷಗಳ ಹಿಂದೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನೈರ್ಮಲ್ಯ ಭಾರತದ ತಮ್ಮ ಪರಿಕಲ್ಪನೆಯನ್ನು ಸಾಕಾರಗೊಳಿಸುವುದಕ್ಕಾಗಿ “ಸ್ವಚ್ಛ ಭಾರತ’ ಎಂಬ ಅಭಿಯಾನವನ್ನು ಆರಂಭಿಸಿದ್ದರು. ಈ ಸಂದರ್ಭ ಹೇಗಿದೆ ಎಂದರೆ, ಇದೇ ವೇಳೆಯಲ್ಲೇ ಜಗತ್ತು, ಸ್ವಚ್ಛತೆಯನ್ನೇ ರಾಷ್ಟ್ರೀಯ ಆದ್ಯತೆಯನ್ನಾಗಿಸಿದ ಮಹಾತ್ಮ ಗಾಂಧಿಯವರ 150ನೇ ಜಯಂತಿಯನ್ನು ಆಚರಿಸಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಭಾರತವು 8 ಕೋಟಿ 60 ಲಕ್ಷ ಮನೆಗಳಲ್ಲಿ ಶೌಚಾಲಯ ನಿರ್ಮಾಣ ಮಾಡಿದೆ ಮತ್ತು 5 ಲಕ್ಷ ಹಳ್ಳಿಗಳನ್ನು(ನಾಲ್ಕು ಲಕ್ಷ ಎಪ್ಪತ್ತು ಸಾವಿರ) ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳೆಂದು ಘೋಷಿಸಿದೆ. ಇಲ್ಲಿ ಉಲ್ಲೇಖೀಸಲೇಬೇಕಾದ ಸಂಗತಿಯೆಂದರೆ ನಮ್ಮ ಸಿಂಗಾಪುರವೂ ಕೂಡ ಇಂಥದ್ದೇ ಹಾದಿಯಲ್ಲಿ ಸಾಗಿ ಬಂದಿದೆ ಎನ್ನುವುದು.
Related Articles
Advertisement
ಸಿಂಗಾಪುರವನ್ನು ತಕ್ಷಣಕ್ಕೆ ಭಾರತಕ್ಕೆ ಹೋಲಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಏಕೆಂದರೆ ಭೌಗೋಳಿಕ ವಿಸ್ತಾರದ ಹಿನ್ನೆಲೆಯಿಂದ ನೋಡುವುದಾದರೆ ಭಾರತವು ಸಿಂಗಾಪುರಕ್ಕಿಂತ ಬಹಳ ದೊಡ್ಡ ದೇಶ. ಭಾರತದ ಗಂಗಾ ನದಿ ಸಿಂಗಾಪುರದ ನದಿಗಿಂತ ಸುಮಾರು ಸಾವಿರ ಪಟ್ಟು ದೊಡ್ಡದು! ಇದರ ಹೊರತಾಗಿಯೂ ಭಾರತ ಮತ್ತು ಸಿಂಗಾಪುರದ ಸ್ವಚ್ಛತಾ ಅಭಿಯಾನಗಳಲ್ಲಿ ಹಲವಾರು ಸಮಾನ ಅಂಶಗಳಿವೆ ಎನ್ನುವುದನ್ನು ಗಮನಿಸಬೇಕು.
ಮೊದಲನೆಯದಾಗಿ, ನಾಯಕತ್ವ ಮತ್ತು ದೂರದರ್ಶಿತ್ವದ ಮಹತ್ವವನ್ನು ಎರಡೂ ದೇಶಗಳ ಅನುಭವವು ಸಾರುತ್ತವೆ. ಸಿಂಗಾಪುರದ ದಿವಂಗತ ಪ್ರಧಾನಮಂತ್ರಿ ಲೀ ಕ್ವಾನ್ ಹೂ ಹೇಗೆ ಸಿಂಗಾಪುರವನ್ನು ಸ್ವತ್ಛವಾಗಿಡುವುದಕ್ಕೆ ಆದ್ಯತೆ ನೀಡಿದರೋ, ಅದೇ ರೀತಿಯೇ ನರೇಂದ್ರ ಮೋದಿಯವರೂ ಕೂಡ ಭಾರತವನ್ನು ಸ್ವತ್ಛವಾಗಿಸುವುದನ್ನೇ ಆದ್ಯತೆಯಾಗಿಸಿಕೊಂಡಿದ್ದಾರೆ. ಲೀ ಕ್ವಾನ್‌ರಂತೆಯೇ ಮೋದಿಯವರೂ ಸ್ವತ್ಛತಾ ಅಭಿಯಾನವನ್ನು ಜನಸಾಮಾನ್ಯರೊಂದಿಗೆ ಬೆಸೆಯುವುದಕ್ಕಾಗಿ ಮತ್ತು ಜಾಗೃತಿ ಮೂಡಿಸುವುದಕ್ಕಾಗಿ ತಾವೇ ಈ ಜನಾಂದೋಲನದ ನೇತೃತ್ವ ವಹಿಸಿದ್ದಾರೆ. ಇಬ್ಬರೂ ಕೂಡ ತಾವೇ ಕಸಪೊರಕೆ ಕೈಗೆತ್ತಿಕೊಂಡರು ಮತ್ತು ರಸ್ತೆ ಸ್ವಚ್ಛ ಮಾಡಲು ಜನರೊಂದಿಗೆ ಮುಂದಾಗಿಬಿಟ್ಟರು ಎನ್ನುವುದು ವಿಶೇಷ. ಅಲ್ಲದೇ “ನಾವು ಬದಲಾಗುವುದರೊಂದಿಗೆ ದೇಶ ಬದಲಾಗುತ್ತದೆ’ ಎನ್ನುತ್ತಿದ್ದ ಸಿಂಗಾಪುರದ ಪಿತಾಮಹ ಲೀ ಕ್ವಾನ್ ಅವರ ಮಾತೇ ತಮಗೆ ಪ್ರೇರಣೆ ಎಂದು ಖುದ್ದು ನರೇಂದ್ರ ಮೋದಿಯವರೇ ಹೇಳಿದ್ದಾರೆ.
ಎರಡನೆಯದಾಗಿ, ಯಾವುದೇ ಯಶಸ್ಸಿಗೂ ದೀರ್ಘಾವಧಿ ರಾಷ್ಟ್ರೀಯ ಬದ್ಧತೆ ಮುಖ್ಯವಾಗುತ್ತದೆ. ಸಿಂಗಾಪುರವು ಸೀವೇಜ್ ಮತ್ತು ಡ್ರೈನೇಜ್ ಜಾಲಗಳನ್ನು ಪ್ರತ್ಯೇಕವಾಗಿಡುವುದಕ್ಕಾಗಿ “ಸೀವರೇಜ್ ಮಾಸ್ಟರ್ ಪ್ಲ್ರಾನ್’ ಅನ್ನು ಅನುಷ್ಠಾನಕ್ಕೆ ತಂದಿತ್ತು. (ಈ ಪ್ಲ್ರಾನ್‌ನ ಪ್ರಮುಖ ಗುರಿ ಕುಡಿಯುವ ನೀರಿನ ಸಮಸ್ಯೆ ತಪ್ಪಿಸಲು ಮಳೆ ನೀರು ಕಲುಷಿತವಾಗದಂತೆ ತಡೆಯುವುದಾಗಿತ್ತು). ಇದೆಲ್ಲದರ ಜೊತೆಗೆ ಈಗ ಸಿಂಗಾಪುರ ನೀರಿನ ಪುನರ್ಬಳಕೆಯನ್ನೂ ಆದ್ಯತೆಯಾಗಿಸಿಕೊಂಡಿದೆ. ಬಳಸಿದ ನೀರು ವೇಸ್ಟ್ ಆಗದಂತೆ ನೋಡಿಕೊಳ್ಳಲಾಗುತ್ತದೆ. ಬಳಸಿದ ನೀರು ರಿವರ್ಸ್ ಆಸ್ಮಾಸಿಸ್‌ನ ಮೂಲಕ “ಎನ್‌ಇ ವಾಟರ್’ ಎಂಬ ಅತ್ಯಂತ ಸ್ವಚ್ಛ ಕುಡಿಯುವ ನೀರಾಗಿ ಬದಲಾಗುತ್ತದೆ!
ಇಲ್ಲಿ, ನಮ್ಮ ದೇಶದೆದುರು ಯಾವ ರೀತಿಯ ಸಮಸ್ಯೆ ಬಂತು, ಅದನ್ನು ನಾವು ಹೇಗೆ ಲಾಭವಾಗಿ ಬಳಸಿಕೊಂಡೆವು ಎನ್ನುವುದನ್ನು ಹೇಳುವುದು ನನ್ನ ಉದ್ದೇಶ. “ಬಳಸಿದ ನೀರನ್ನು ಏನು ಮಾಡುವುದು?’ ಎಂಬ ಸಮಸ್ಯೆ ಎದುರಾದಾಗ, ಆ ಸಮಸ್ಯೆಯನ್ನು ಕೈಗೆತ್ತಿಕೊಂಡ ನಾವು ಅದರಿಂದ ಇನ್ನೊಂದು ಸಮಸ್ಯೆಗೆ ಪರಿಹಾರ ಕಂಡುಕೊಂಡೆವು. “ಬಳಸಿದ ನೀರನ್ನು ಸಂಸ್ಕರಿಸಿ’ ನೀರಿನ ಅಭಾವವನ್ನು ತಡೆದೆವು.
ಒಂದು ಉಲ್ಲೇಖನೀಯ ಸಂಗತಿಯೆಂದರೆ, ಸ್ವಚ್ಛತಾ ಅಭಿಯಾನದಲ್ಲಿ ಭಾರತವು ಎಲ್ಲಾ ವಲಯದ ಜನರನ್ನೂ ಮತ್ತು ಶಿಕ್ಷಣ ಕ್ಷೇತ್ರವನ್ನು ಭಾಗಿಯಾಗಿಸಿರುವುದು. 2006ಕ್ಕೆ ಹೋಲಿಸಿದರೆ ಭಾರತದ ಬಹುತೇಕ ವಿದ್ಯಾಲಯಗಳಲ್ಲಿ ಕುಡಿಯುವ ನೀರು, ಸ್ವಚ್ಛತೆ, ಮೂಲಸೌಕರ್ಯಾಭಿವೃದ್ಧಿಯಲ್ಲಿ ಈಗ ಗಮನಾರ್ಹ ಸುಧಾರಣೆಯಾಗಿದೆ ಎಂದು ಯೂನಿಸೆಫ್ನ ವರದಿ ಹೇಳಿದೆ.
ಮೂರನೆಯದಾಗಿ, ನಮ್ಮಲ್ಲಿ ನಡೆದ ಪ್ರಯೋಗವೇ ಭಾರತದಲ್ಲೂ ಕೆಲಸ ಮಾಡುತ್ತದೆ ಎನ್ನುವಂತೇನೂ ಇಲ್ಲ. ಆದರೂ ಸಿಂಗಾಪುರ ಮತ್ತು ಭಾರತ ಅಂತಾರಾಷ್ಟ್ರೀಯ ಸಹಭಾಗಿತ್ವಕ್ಕೆ ಮಹತ್ವ ಕೊಡುವ ದೇಶಗಳಾಗಿರುವುದರಿಂದ, ಎರಡೂ ದೇಶಗಳು ಪರಸ್ಪರ ಅನುಭವಗಳನ್ನು ಹಂಚಿಕೊಂಡು ಪಾಠ ಕಲಿಯಬಹುದು.
ಸಿಂಗಾಪುರದ ಮನವಿಗೆ ಓಗೊಟ್ಟು 2013ರಲ್ಲಿ ವಿಶ್ವಸಂಸ್ಥೆಯು ವಿಶ್ವ ಶೌಚಾಲಯ ದಿನದ ಧ್ಯೇಯವಾಕ್ಯವನ್ನಾಗಿ “ಎಲ್ಲರಿಗೂ ನೈಮ್ಯಲ್ಯ’ ಎಂಬ ಘೋಷಣೆಯನ್ನು ಒಪ್ಪಿಕೊಂಡಿತು. ಇತ್ತ ಭಾರತವು, “ಸ್ಮಾರ್ಟ್ ಸಿಟಿ’ ಹೆಸರಿನಲ್ಲಿ ಹೆಚ್ಚು ವಾಸಯೋಗ್ಯ ನಗರಗಳನ್ನು ನಿರ್ಮಿಸುತ್ತಿರುವ ಹೊತ್ತಿನಲ್ಲಿಯೇ ಸಿಂಗಾಪುರ ನೈರ್ಮಲ್ಯದ ವಿಚಾರದಲ್ಲಿ ಭಾರತದೊಂದಿಗೆ ತನ್ನ ಅನುಭವಗಳನ್ನು ಹಂಚಿಕೊಳ್ಳಲು ಸಂತೋಷಪಡುತ್ತದೆ. ನಗರ ಯೋಜನೆ, ಜಲ ನಿರ್ವಹಣೆ ವಿಚಾರದಲ್ಲಿ ಭಾರತದ “ಟೌನ್ ಆ್ಯಂಡ್ ಕಂಟ್ರಿ ಪ್ಲಾನಿಂಗ್ ಸಂಸ್ಥೆ’ಯ ಸಹಯೋಗದಲ್ಲಿ ಸಿಂಗಾಪುರ ಈಗಾಗಲೇ 100 ಅಧಿಕಾರಿಗಳಿಗೆ ತರಬೇತಿ ನೀಡಿದೆ.
ಇದಷ್ಟೇ ಅಲ್ಲದೆ ಹೊಸ ನಗರಗಳ ನಿರ್ಮಾಣದಲ್ಲಿ ತೊಡಗಿರುವ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೂ ಸಹಕಾರ ನೀಡುವ ನಿಟ್ಟಿನಲ್ಲಿ ಸಿಂಗಾಪುರ ಸಿದ್ಧವಿದೆ. ಒಟ್ಟಾರೆಯಾಗಿ, ಸ್ವಚ್ಛ ಭಾರತ ಅಭಿಯಾನ ಯಶಸ್ವಿಯಾಗಲೆಂದು ನಾನು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮತ್ತು ಸಕಲ ಭಾರತೀಯರಿಗೆ ಹಾರೈಸುತ್ತೇನೆ.
ಲೀ ಶೇನ್ ಲೂಂಗ್ಸಿಂಗಾಪುರ ಪ್ರಧಾನಿ