ದಾಂಡೇಲಿ: ಸ್ವಚ್ಚ ಭಾರತ ನಿರ್ಮಾಣದ ಕನಸನ್ನಿಟ್ಟು ಸ್ವಚ್ಚತೆಯೆಡೆಗೆ ಸಾಗುವ ಅಚಲವಾದ ಗುರಿಯೊಂದಿಗೆ ಸ್ವಚ್ಚತಾ ಜಾಗೃತಿ ಮೂಡಿಸುವ ಕಾರ್ಯವನ್ನು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ನಿತ್ಯನಿರಂತರವಾಗಿ ಮಾಡಿದ್ದರು. ಸ್ವಚ್ಚತೆಯಿದ್ದಲ್ಲಿ ಆರೋಗ್ಯ, ಆರೋಗ್ಯವಿದ್ದಲ್ಲಿ ಸಮೃದ್ದ ಮತ್ತು ಸಶಕ್ತ ರಾಷ್ಟ್ರ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ಸ್ವಚ್ಚತೆಗೆ ಹೆಚ್ಚಿನ ಒತ್ತನ್ನು ನೀಡಲಾಗಿ ಸ್ವಚ್ಚತಾ ಅಭಿಯಾನವನ್ನು ಕೈಗೆತ್ತಿಕೊಳ್ಳಲಾಗಿದೆ. ಸ್ವಚ್ಚ ಭಾರತ್ ಅಭಿಯಾನ ಒಂದು ಬೃಹತ್ ಸಮೂಹ ಚಳುವಳಿಯಾಗಿದೆ ಎಂದು ನಗರ ಸಭೆಯ ಪೌರಾಯುಕ್ತರಾದ ಆರ್.ಎಸ್.ಪವಾರ್ ಅವರು ಹೇಳಿದರು.
ಅವರು ಬುಧವಾರ ನಗರದ ಬಂಗೂರನಗರ ಪದವಿ ಮಹಾವಿದ್ಯಾಲಯದಲ್ಲಿ ಕ್ಷೇತ್ರ ಜನಸಂಪರ್ಕ ಕಾರ್ಯಾಲಯ ಶಿವಮೊಗ್ಗ ಹಾಗೂ ಕಾಲೇಜಿನ ಎನ್.ಎಸ್.ಎಸ್ ಘಟಕದ ಆಶ್ರಯದಲ್ಲಿ ಗಾಂಧೀ ಜಯಂತಿ ಅಂಗವಾಗಿ ನಡೆದ ಸ್ವಚ್ಚ ಭಾರತ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಶಿವಮೊಗ್ಗದ ಕ್ಷೇತ್ರ ಜನಸಂಪರ್ಕ ಕಾರ್ಯಾಲಯದ ಕ್ಷೇತ್ರ ಪ್ರಚಾರಾಧಿಕಾರಿಗಳಾದ ಜಿ.ತುಕಾರಾಮ ಗೌಡ ಅವರು ಸ್ವಚ್ಚ ಭಾರತ ನಿರ್ಮಾಣದ ಬಹುದೊಡ್ಡ ಕನಸು ಹೊಂದಿದ್ದ ಗಾಂಧೀಜಿಯವರ ಜನ್ಮದಿನಾಚರಣೆಯಂದೆ ಸ್ವಚ್ಚ ಭಾರತ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಸ್ವಚ್ಚತೆಯ ಬಗ್ಗೆ ಜನಮಾನಸಕ್ಕೆ ಅರಿವು ಮೂಡಿಸಿ, ಆ ಮೂಲಕ ಸ್ವಚ್ಚತೆಯೆಡೆಗೆ ಸಮಾಜವನ್ನು ಕೊಂಡೊಯ್ಯಬೇಕಾದ ಗುರುತರವಾದ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ಸಮಾಜವನ್ನು ಜಾಗೃತಗೊಳಿಸುವ ಶಕ್ತಿಗಳಾಗಿರುವ ವಿದ್ಯಾರ್ಥಿಗಳಿಗೆ ಸ್ವಚ್ಚತೆಯ ಸಮಗ್ರವಾದ ಅರಿವನ್ನು ಮೂಡಿಸಿ ಸ್ವಚ್ಚ ಭಾರತ ನಿರ್ಮಾಣಕ್ಕೆ ವಿದ್ಯಾರ್ಥಿಗಳನ್ನು ಅಣಿಗೊಳಿಸುವ ಪ್ರಯತ್ನ ಈ ಕಾರ್ಯಕ್ರಮದ ಮೂಲ ಆಶಯವಾಗಿದೆ. ಎಲ್ಲವು ಇದ್ದು ಆರೋಗ್ಯ ಸರಿಯಿಲ್ಲದಿದ್ದಾಗ ಎಲ್ಲವನ್ನು ಕಳೆದುಕೊಳ್ಳಬಹುದು. ಆದರೆ ಆರೋಗ್ಯವನ್ನು ಕಾಪಾಡಿಕೊಂಡಿದ್ದೇಯಾದಲ್ಲಿ ಮಿಕ್ಕುಳಿದವುಗಳನ್ನು ಗಳಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಎಲ್ಲ ಗಳಿಕೆಗಳಿಗೆ ಮೂಲ ಆಸರೆಯೆ ಆರೋಗ್ಯ, ಸದೃಢ ಆರೋಗ್ಯ ನಿರ್ಮಾಣಕ್ಕೆ ಸ್ವಚ್ಚತೆ ಬಹುಮುಖ್ಯವಾಗಿದೆ ಎನ್ನುವುದನ್ನು ವಿದ್ಯಾರ್ಥಿಗಳು ಅರಿತು ಸಮಾಜಕ್ಕೂ ಅರಿವಿನ ದೀಪವನ್ನು ಹಚ್ಚಬೇಕೆಂದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯೆ ಡಾ.ಶೋಭಾ ಶರ್ಮಾ ಅವರು ವಹಿಸಿ ಮಾತನಾಡಿ ಕಾಲೇಜಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿ, ಸ್ವಚ್ಚ ಭಾರತ ನಿರ್ಮಾಣಕ್ಕೆ ವಿದ್ಯಾರ್ಥಿಗಳನ್ನು ಅಣಿಗೊಳಿಸಲು ಈ ಕಾರ್ಯಕ್ರಮ ಸಹಕಾರಿ ಎಂದು ಹೇಳಿ ಕ್ಷೇತ್ರ ಜನಸಂಪರ್ಕ ಕಾರ್ಯಾಲಯದ ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಕಾಲೇಜಿನ ಉಪ ಪ್ರಾಚಾರ್ಯ ಡಾ.ಆರ್.ಜಿ.ಹೆಗಡೆಯವರು ಭಾಗವಹಿಸಿ ಮಾತನಾಡುತ್ತಾ, ಹಿರಿಯರು ಸ್ವಚ್ಚತೆಗೆ ಹೆಚ್ಚಿನ ಪ್ರಾದಾನ್ಯತೆಯನ್ನು ನೀಡುತ್ತಿದ್ದರು. ಹಿರಿಯರು ಹಾಕಿ ಕೊಟ್ಟ ಸಂಸ್ಕೃತಿ, ಜೀವನಸಂಸ್ಕಾರಗಳನ್ನು ಮೈಗೂಡಿಸಿ ಬಾಳಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಈ ನಿಟ್ಟಿನಲ್ಲಿ ಸ್ವಚ್ಚತೆಯ ಪ್ರಾಮುಖ್ಯತೆಯನ್ನು ಜಗತ್ತಿಗೆ ಕೊರೊನಾ ಕಲಿಸಿಕೊಟ್ಟಿದೆ. ಸಚ್ಚ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಕಂಕಣಬದ್ದರಾಗಬೇಕೆಂದು ಕರೆ ನೀಡಿದರು.