ಹುಣಸೂರು: ಗಾಂಧೀಜಿಯವರ ಸ್ವಚ್ಛತೆಯ ಪರಿಕಲ್ಪನೆಗೆ ಪ್ರಧಾನಿ ನರೇಂದ್ರ ಮೋದಿ ಹೊಸರೂಪ ನೀಡಿ, ಸ್ವಚ್ಛ ಸರ್ವೇಕ್ಷಣ್ ಅಭಿಯಾನದಡಿ ಸ್ವಚ್ಛತೆಗೆ ಆದ್ಯತೆ ನೀಡಿರುವುದು ಸ್ವಾಗತಾರ್ಹ ಎಂದು ಶಾಸಕ ಎಚ್.ವಿಶ್ವನಾಥ್ ಹೇಳಿದರು.
ನಗರಸಭೆ ಘನತ್ಯಾಜ್ಯ ನಿರ್ವಹಣೆಯಲ್ಲಿ ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆದಿರುವ ಹಿನ್ನೆಲೆಯಲ್ಲಿ ಪೌರಕಾರ್ಮಿಕರು, ಜನಪ್ರತಿನಿಧಿಗಳಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಶಸ್ತಿಯಿಂದ ನಗರಸಭೆಯ ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ. ನಗರ ಸ್ವಚ್ಛತೆಗೆ ಪ್ರತಿಯೊಬ್ಬ ನಾಗರಿಕರೂ ಕೈಜೋಡಿಸಬೇಕು ಎಂದು ಹೇಳಿದರು.
ತಿಂಗಳಿಗೊಮ್ಮೆ ಸ್ವಚ್ಛತಾ ಕಾರ್ಯ: ಪ್ರಶಸ್ತಿಗಾಗಿ ಸ್ವಚ್ಛತೆ ಮಾಡುವ ಮನೋಭಾವ ಇರಬಾರದು. ನಮ್ಮ ಮನೆ, ನಮ್ಮ ಊರು ಎಂಬ ಭಾವನೆಯಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು. ಇದಕ್ಕಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳು ಹಾಗೂ ನಾಗರಿಕರ ಸಹಕಾರದೊಂದಿಗೆ ಪ್ರತಿ ತಿಂಗಳಿಗೊಮ್ಮೆ ಸ್ವಚ್ಛತಾ ಕಾರ್ಯ ನಡೆಸುವ ಮೂಲಕ ಕ್ಲೀನ್ ಸಿಟಿ ಪರಿಕಲ್ಪನೆಯನ್ನೂ ಸಾಕಾರಗೊಳಿಸಬೇಕು. ಅದರಲ್ಲಿ ತಾವೂ ಭಾಗವಹಿಸುವುದಾಗಿ ವಿಶ್ವನಾಥ್ ಪ್ರಕಟಿಸಿದರು.
ನಗರಸಭೆ ಅಧ್ಯಕ್ಷ ಶಿವಕುಮಾರ್ ಮಾತನಾಡಿ, ಘನತ್ಯಾಜ್ಯ ವಸ್ತುಗಳ ನಿರ್ವಹಣೆಯಲ್ಲಿ ರಾಷ್ಟ್ರ ಪ್ರಶಸ್ತಿ ಜೊತೆಗೆ ಸ್ವಚ್ಛತೆಯಲ್ಲೂ ರಾಜ್ಯ ಮಟ್ಟದಲ್ಲಿ 2ನೇ ಸ್ಥಾನ ಲಭಿಸಿದೆ. ಇದಕ್ಕೆ ಕಾರಣ ಪೌರಕಾರ್ಮಿಕರು, ಸಂಘ-ಸಂಸ್ಥೆಗಳು, ಜನಪ್ರತಿನಿಧಿಗಳು, ನಾಗರಿಕರ ಸಹಕಾರ. ಮುಂದೆ ಪ್ಲಾಸ್ಟಿಕ್ ಮುಕ್ತ ನಗರದತ್ತ ಗಮನಹರಿಸುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಪೌರಾಯುಕ್ತ ಶಿವಪ್ಪನಾಯಕ, ಸಹಾಯಕ ಎಂಜಿನಿಯರ್ ಸದಾಶಿವಪ್ಪ, ಪರಿಸರ ಎಂಜಿನಿಯರ್ ರವಿಕುಮಾರ್, ಆರೋಗ್ಯ ನಿರೀಕ್ಷಕರಾದ ಮೋಹನ್, ಸತೀಶ್, ನಗರಸಭಾ ಸದಸ್ಯರಾದ ಸುನೀತಾ, ವೆಂಕಟೇಶ್, ಎಮಹದೇವ್, ಶಿವರಾಜ್, ನಸ್ರುಲ್ಲಾ, ಫಾಯಿಮುನ್ನೀಸಾ, ಕೃಷ್ಣರಾಜಗುಪ್ತ, ಜಿಪಂ ಸದಸ್ಯ ಸುರೇಂದ್ರ, ಎಇಇ ಪಾರ್ವತಿದೇವಿ ಇತರರಿದ್ದರು.