Advertisement

ಸ್ವಚ್ಛ ಮೇವ ಜಯತೆ: ಹಣ ಬಳಕೆಯಲ್ಲಿ ಲೋಪ

01:06 PM Sep 13, 2019 | Suhan S |

ರಾಮನಗರ: ಸ್ವಚ್ಛ ಭಾರತ್‌ ಮಿಷನ್‌ ಯೋಜನೆಯಡಿಯಲ್ಲಿ ಸ್ವಚ್ಛ ಮೇವ ಜಯತೆ ಆಂದೋಲನದ ನಿಮಿತ್ತ ವರ್ಣ ಸಹಿತ ಗೋಡೆ ಬರಹಕ್ಕಾಗಿ ವೆಚ್ಚ ಮಾಡಿರುವ ಅನುದಾನದಲ್ಲಿ ಅವ್ಯವಹಾರ ಕುರಿತು ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳ ಕಚೇರಿಯಿಂದ, ಜಿಲ್ಲಾ ಪಂಚಾಯತ್‌ ಸಿಇಒ ಅವರಿಗೆ ಪತ್ರ ರವಾನೆಯಾಗಿದೆ.

Advertisement

ಗೋಡೆ ಬರಹ ಅನುದಾನದಲ್ಲಿ 95 ಲಕ್ಷ ರೂ. ಅಕ್ರಮವಾಗಿರುವ ಆರೋಪವಿದ್ದು, ನಾಗರಿಕ ವಲಯದಲ್ಲಿ ಈಗಾಗಲೇ ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಅವ್ಯವಹಾರದ ಹಿಂದೆ ಕೆಲವು ರಾಜಕೀಯ ಧುರೀಣರ ಪ್ರಭಾವ ಇರುವುದಾಗಿ ಅನುಮಾನಗಳು ಮೂಡಿವೆ. ವರ್ಣಸಹಿತ ಗೋಡೆ ಚಿತ್ರಗಳನ್ನು ಬರೆಯುವ ವಿಚಾರದಲ್ಲಿ ಕೆಟಿಪಿಪಿ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ದೂರುಗಳು ಕೇಳಿ ಬಂದಿವೆ.

ಏನಿದು ವಿವಾದ?: ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಸ್ವಚ್ಛ ಭಾರತ್‌ ಮಿಷನ್‌ ಅಡಿ ಹಲವಾರು ಕಾರ್ಯಕ್ರಮಗಳನ್ನು ಜಾರಿ ಮಾಡಲಾಗಿದೆ. ಈ ಪೈಕಿ ಸ್ವಚ್ಛ ಮೇವ ಜಯತೆ ಆಂದೋಲನವೂ ಒಂದು ಭಾಗವಾಗಿದ್ದು, ಗೋಡೆಗಳ ಮೇಲೆ ವರ್ಣಸಹಿತ ಚಿತ್ರಗಳನ್ನು ಬರೆದು ಆಮೂಲಕ ಗ್ರಾಮೀಣರಲ್ಲಿ ಸ್ವಚ್ಛತೆ, ನೈರ್ಮಲ್ಯದ ಬಗ್ಗೆ ಅರಿವು ಮೂಡಿಸುವುದು ಸರ್ಕಾರದ ಉದ್ದೇಶವಾಗಿದೆ.

2019ರ ಜುಲೈನಲ್ಲಿ ಜಿಲ್ಲೆಯ 127 ಗ್ರಾಪಂಗಳಿಗೆ ಒಟ್ಟು 95. 17ಲಕ್ಷ ರೂ. ಬಿಡುಗಡೆ ಮಾಡಲಾಗಿತ್ತು. ಈ ಸಂಬಂಧ ಜಿಪಂನಿಂದ ಗ್ರಾಪಂಗಳಿಗೆ ಜಿಪಂ ಸಿಇಒ ಅವರಿಂದ ಬಿಡುಗಡೆಯಾಗಿರುವ ಅಧಿಕೃತ ಜ್ಞಾಪನ (ಡಿಆರ್‌ಡಿಎ/ಎಸ್‌ಬಿಎಂ/ಎಸ್‌ಎಂಜೆ/ಸಿಆರ್‌-01/2019-20)ರಲ್ಲಿ ವರ್ಗ 1ರ ಲೆಕ್ಕಖಾತೆಗೆ ಆರ್‌ಟಿಜಿಎಸ್‌ ಮೂಲಕ ನಿಯಮಾನುಸಾರ ಬಿಡುಗಡೆಗೊಳಿಸಲು ಮುಖ್ಯ ಲೆಕ್ಕಾಧಿಕಾರಿಗಳಿಗೆ ಆದೇಶ ನೀಡಿರುವುದಾಗಿ ತಿಳಿಸಲಾಗಿದೆ. 127 ಗ್ರಾಪಂಗಳ ಪೈಕಿ 28 ಗ್ರಾಪಂಗಳಿಗೆ ಒಂದು ಲಕ್ಷಕ್ಕಿಂತ ಅಧಿಕ ಮೊತ್ತದ ಅನುದಾನ ಜಮೆ ಆಗಿದೆ. ಉದಾಹರಣೆಗೆ ಬಾಚೇನಹಟ್ಟಿ ಗ್ರಾಪಂಗೆ 1.87 ಲಕ್ಷ ರೂ. ಬಾಣವಾಡಿ ಗ್ರಾಪಂಗೆ 1.51 ಲಕ್ಷ ರೂ., ಬೆಳಗುಂಬ ಗ್ರಾಪಂಗೆ 1.63 ಲಕ್ಷ ರೂ., ಬಿಟ್ಟಸಂದ್ರ ಗ್ರಾಪಂಗೆ 1.30 ಲಕ್ಷ, ಚಿಕ್ಕಮುದುಗೆರೆ ಗ್ರಾಮಪಂಚಯ್ತಿ 1.51 ಲಕ್ಷ, ಹಂಚೀಕುಪ್ಪೆ ಗ್ರಾಪಂಗೆ 1.27 ಲಕ್ಷ ರೂ., ಲಕ್ಕೇನಹಳ್ಳಿ ಗ್ರಾಪಂಗೆ 1.39 ಲಕ್ಷ ರೂ., ಮಾಡಬಾಳ್‌ ಗ್ರಾಪಂಗೆ 1.51 ಲಕ್ಷ ರೂ. ಹೀಗೆ 28 ಗ್ರಾಪಂಗಳಿಗೆ 1 ಲಕ್ಷಕ್ಕಿಂತ ಅಧಿಕ ಮೊತ್ತದ ಅನುದಾನ ಬಿಡುಗಡೆಯಾಗಿದೆ.

ಬಿಡುಗಡೆಯಾಗಿರುವ ಅಧಿಕೃತ ಜ್ಞಾಪನದಲ್ಲಿ ಸಿಇಒ ಅವರು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮದಡಿ (ಕೆಟಿಪಿಪಿ) ಹಣ ಬಳಕೆ ಮಾಡಬೇಕು ಮತ್ತು ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹ ಮಾಡಿಟ್ಟುಕೊಳ್ಳುವಂತೆ ಸ್ಪಷ್ಟ ಸೂಚನೆ ನೀಡಿದ್ದಾರೆ.

Advertisement

ಅನುಮಾನಗಳಿಗೆ ಕಾರಣ: ಸ್ವಚ್ಛ ಭಾರತ ಮಿಷನ್‌ ಅಡಿಯಲ್ಲಿ ಸ್ವಚ್ಛ ಮೇವ ಜಯತೆ ಆಂದೋಲನವನ್ನು ಜಿಲ್ಲಾ ಪಂಚಾಯ್ತಿಗಳು ಕೈಗೆತ್ತಿಕೊಳ್ಳಬೇಕು. ಗ್ರಾಪಂಗಳಲ್ಲಿರುವ ಸ್ವಚ್ಛ ಭಾರತ ಮಿಷನ್‌ ಯೋಜನೆಯ ಲೆಕ್ಕ ಖಾತೆಗೆ ಹಣ ವರ್ಗಾವಣೆ ಆಗಬೇಕಿತ್ತು ಎಂಬುದು ಸಾರ್ವಜನಿಕರ ವಾದ. ಆದರೆ ಸಿಇಒ ಅವರು ವರ್ಗ 1ರ ಲೆಕ್ಕ ಖಾತೆಗೆ ಜಮೆ ಮಾಡಿದ್ದು ಏಕೆ ಎಂದು ಪ್ರಶ್ನಿಸಲಾಗಿದ್ದು, ಇದು ಅನುಮಾನಗಳಿಗೆ ಕಾರಣ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next