ಕೊರಟಗೆರೆ: ತಾಲ್ಲೂಕಿನಲ್ಲಿ ಚನ್ನರಾಯನದುರ್ಗ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ ವರ್ಷಗಳೇ ಕಳೆದರೂ ಇನ್ನೂ ರಿಪೇರಿಯಾಗದೇ ಹಾಗೆಯೇ ಉಳಿದಿದ್ದು, ಜನಾಕ್ರೋಶಕ್ಕೆ ಕಾರಣವಾಗಿದೆ.
ಚನ್ನರಾಯನದುರ್ಗ ಗ್ರಾಮದಲ್ಲಿ ಮೂಲಸೌಕರ್ಯಗಳ ಕೊರತೆ ಹೆಚ್ಚಾಗಿ ಕಂಡು ಬರುತ್ತಿದೆ ಅದರಲ್ಲೂ ಶುದ್ಧಕುಡಿಯುವ ನೀರಿನ ಕೊರತೆಯು ಸಹ ಹೆಚ್ಚಾಗಿ ಕಂಡು ಬರುತ್ತಿದೆ ಸ್ಥಳೀಯ ಜನನಾಯಕರ ಹಾಗೂ ಅಧಿಕಾರಿಗಳ ವಿರುದ್ಧ ಚನ್ನರಾಯನದುರ್ಗ ಗ್ರಾಮದ ಗ್ರಾಮಸ್ಥರು ಹಿಡಿಶಾಪ ವನ್ನು ಹಾಕುತ್ತಿದ್ದಾರೆ.
ಸುಮಾರು 4 ವರ್ಷಗಳ ಹಿಂದೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ತೆರೆಯಲು ಅಂದಾಜು 10 ಲಕ್ಷ ರೂಪಾಯಿಗಳನ್ನು ಸರ್ಕಾರ ಮಂಜೂರು ಮಾಡಿತ್ತು ಅದರಂತೆ ಶಾಸಕರ ಮಾರ್ಗದರ್ಶನದಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪನೆಯಾಗಿ ಕಾರ್ಯನಿರ್ವಹಿಸುತ್ತಿತ್ತು ಆದರೆ ಕಳೆದ ಒಂದೂವರೆ ವರ್ಷಗಳಿಂದ ಈ ಶುದ್ಧ ಕುಡಿಯುವ ನೀರಿನ ಘಟಕ ಹಾಳಾಗಿದ್ದು ಇಲ್ಲಿಯವರೆಗೂ ಕೂಡ ಇದನ್ನು ರಿಪೇರಿ ಮಾಡಿಸಿ ಗ್ರಾಮದ ಜನತೆಗೆ ಶುದ್ಧ ಕುಡಿಯುವ ನೀರನ್ನು ಪೂರೈಸಲು ಅಧಿಕಾರಿಗಳು ಮುಂದೆಬಾರದೇ ಕಾರಣಗಳನ್ನು ಹೇಳಿಕೊಂಡು ಹೋರಾಡುತ್ತಿದ್ದಾರೆ.
ಡಿವೈ ಎಪ್ಐ ಸಂಘಟನೆಯ ಯುವ ಮುಖಂಡ ರಾಘವೇಂದ್ರ ಮಾತನಾಡಿ ಸುಮಾರು ಒಂದುವರೆ ವರ್ಷಗಳಿಂದ ಶುದ್ಧ ಕುಡಿಯುವ ನೀರಿನ ಘಟಕ ಹಾಳಾಗಿದ್ದು ಇದರ ಬಗ್ಗೆ ಸಂಬಂಧಪಟ್ಟ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ನಾವು ಈ ಹಿಂದೆ ತಂದಿದ್ದೆವು ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೂ ಸಹ ತಂದಿದ್ದರೂ ಕೂಡ ಅಧಿಕಾರಿಗಳು ಈ ಘಟಕವನ್ನು ರಿಪೇರಿ ಮಾಡಿಸದೆ ನಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವ ರೀತಿ ವರ್ತಿಸುತ್ತಿದ್ದಾರೆ ನಮ್ಮ ಊರಿನಲ್ಲಿ ಈಗಾಗಲೇ ಸುಮಾರು ಜನರಿಗೆ ಕಿಡ್ನಿ ಸ್ಟೋನ್ ಕಾಯಿಲೆಯಿಂದ ನರಳುತ್ತಿದ್ದಾರೆ ಇನ್ನಾದರೂ ಅಧಿಕಾರಿಗಳು ಹಾಗೂ ಶಾಸಕರು ಇದನ್ನು ಸೂಕ್ಷ್ಮವಾಗಿ ಗಮನಿಸಿ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡುತ್ತೇನೆ ಎಂದು ತಿಳಿಸಿದರು.
ನಂತರ ಮಾತನಾಡಿದ ಸ್ಥಳೀಯ ಇತಿಹಾಸವುಳ್ಳ ಚೆನ್ನರಾಯನದುರ್ಗ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು ಸಾರ್ವಜನಿಕ ಬೋರ್ವೆಲ್ ಇಂದ ಬರುವ ನೀರನ್ನು ಕುಡಿಯುವ ಸ್ಥಿತಿ ನಮಗೆ ಬಂದಿದೆ ಹಾಗಾಗಿ ನಿರ್ವಹಣೆಯಾಗದ ಶುದ್ಧಕುಡಿಯುವ ನೀರಿನ ಘಟಕವನ್ನು ರಿಪೇರಿ ಮಾಡಿಸಿ ಊರಿನ ಗ್ರಾಮಸ್ಥರಿಗೆ ಹಾಗೂ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಬೇಕೆಂದು ತಿಳಿಸಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಂಜಿನಿಯರ್ ಚಿಕ್ಕರಾಜು ಮಾತನಾಡಿ ತಾಲ್ಲೂಕಿನಲ್ಲಿ ಒಟ್ಟು 152 ಕ್ಕೂ ಹೆಚ್ಚು ಶುದ್ಧ ಕುಡಿಯುವ ನೀರಿನ ಘಟಕಗಳು ಅಂಕಿ ಅಂಶದಲ್ಲಿ ಇವೆ ಅದರಲ್ಲಿ 72-78 ಶುದ್ಧ ಕುಡಿಯುವ ನೀರಿನ ಘಟಕಗಳು ತನ್ನ ಕಾರ್ಯನಿರ್ವಹಣೆ ಮಾಡದೆ ಹಾಳಾಗಿವೆ. ಈ ಸಲುವಾಗಿ ನಮ್ಮ ಮೇಲಾಧಿಕಾರಿಗಳ ಗಮನಕ್ಕೆ ಈ ಹಿಂದಿನಿಂದಲೂ ತರಲಾಗಿದೆ. ಸುಮಾರು ಐದು ವರ್ಷಗಳನ್ನು ಪೂರೈಸಿದ 72 ಶುದ್ಧ ಕುಡಿಯುವ ನೀರಿನ ಘಟಕಗಳು ರಿಪೇರಿಗೆ ಬಂದಿವೆ. ಇದಕ್ಕೆ ನೇರ ಹೊಣೆ ಏಜೆನ್ಸಿದಾರರು ಎಂದು ತಿಳಿಸಿದ್ದಾರೆ.
ಇನ್ನಾದರೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮೇಲಧಿಕಾರಿಗಳು ಕೊರಟಗೆರೆ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸದೆ ಹಾಳಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ರಿಪೇರಿಯನ್ನು ಮಾಡಿಸಲು ಸಾರ್ವಜನಿಕರ ಒತ್ತಾಯವಾಗಿದೆ.