Advertisement

ಘನತ್ಯಾಜ್ಯ ನಿರ್ವಹಣೆಗೆ ‘ಸ್ವಚ್ಛಮೇವ ಜಯತೆ’ಅಭಿಯಾನ

11:55 AM May 21, 2019 | Suhan S |

ದಾವಣಗೆರೆ: ಗ್ರಾಮಗಳಲ್ಲಿ ವ್ಯವಸ್ಥಿತವಾಗಿ ಘನತ್ಯಾಜ್ಯ ನಿರ್ವಹಿಸಲು ಸ್ವಚ್ಛಮೇವ ಜಯತೆ ಆಂದೋಲನ ನಡೆಸಲಾಗುವುದು ಎಂದು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಎಚ್. ಬಸವರಾಜೇಂದ್ರ ತಿಳಿಸಿದ್ದಾರೆ.

Advertisement

ಸೋಮವಾರ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ನಡೆದ ಸ್ವಚ್ಛಮೇವ ಜಯತೆ ಆಂದೋಲನ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಧಿಕಾರಿಗಳು ಜನರಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ಮೂಲಕ ಆಂದೋಲನವನ್ನು ಯಶಸ್ವಿಗೊಳಿಸಬೇಕು ಎಂದರು.

ಸ್ವಚ್ಛ ಭಾರತ್‌ ಮಿಷನ್‌ ಅಡಿಯಲ್ಲಿ ಗ್ರಾಮಗಳಲ್ಲಿ ಘನತ್ಯಾಜ್ಯ ಕಾರ್ಯಕ್ರಮದ ಅನುಷ್ಠಾನಕ್ಕಾಗಿ 2019-20 ನೇ ಸಾಲಿನಲ್ಲಿ ಸ್ವಚ್ಛಮೇವ ಜಯತೆ ಆಂದೋಲನಕ್ಕೆ ಚಾಲನೆ ನೀಡಲಾಗುತ್ತಿದೆ. ಜೂ. 6 ರಿಂದ 30 ರವರೆಗೆ ಜಿಲ್ಲೆ, ತಾಲೂಕು ಮತ್ತು ಗ್ರಾಮ ಪಂಚಾಯತಿ ಹಂತದಲ್ಲಿ ವಿವಿಧ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಸ್ವಚ್ಛಮೇವ ಜಯತೆ ಆಂದೋಲನದಡಿ ವೈಯಕ್ತಿಕ ಶೌಚಾಲಯ ನಿರ್ಮಾಣ, ಸ್ವಚ್ಛತಾ ರಥ ಆಯೋಜನೆ, ಸಮುದಾಯ ಶೌಚಾಲಯ ಬಳಕೆ ಅಭಿಯಾನ, ಶಾಲೆ ಮತ್ತು ಅಂಗನವಾಡಿ ಶೌಚಾಲಯ ಬಳಕೆ, ಪ್ರತಿ ಗ್ರಾಮದಲ್ಲಿ ಗೋಡೆ ಬರಹ, ಪ್ರಬಂಧ ಸ್ಪರ್ಧೆ, ಪೋಸ್ಟರ್‌ ಮುದ್ರಣ ಹಂಚಿಕೆ, ಕೈತೊಳೆಯುವ ತರಬೇತಿ ಕಾರ್ಯಕ್ರಮಗಳ ಆಯೋಜನೆ, ಸ್ವಚ್ಛತಾ ಪ್ರತಿಜ್ಞಾವಿಧಿ ಸ್ವೀಕಾರ, ಶಾಲಾ ಮಕ್ಕಳಿಂದ ಜಾಥಾ, ಸ್ವಚ್ಛತೆಗಾಗಿ ಶ್ರಮದಾನ ಮತ್ತು ರೇಡಿಯೋ, ಟಿವಿ, ಪತ್ರಿಕೆ, ಸಾಮಾಜಿಕ ಮಾಧ್ಯಮಗಳ ಮೂಲಕ ಸ್ವಚ್ಛತೆ ಕಾಪಾಡುವ ಕುರಿತು ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.

2019ರ ವರ್ಷವನ್ನು ಜಲವರ್ಷ… ಎಂದು ಘೋಷಿಸಲಾಗಿದೆ. ಜಲಾಮೃತ ಯೋಜನೆಯಡಿ ಜಲಸಂರಕ್ಷಣೆ, ಜಲಸಾಕ್ಷರತೆ, ಜಲಪ್ರಜ್ಞೆ ಹಾಗೂ ಹಸಿರಿಕರಣ ಅಂಶಗಳ ಮೂಲಕ ಜನರಿಗೆ ನೀರಿನ ಬಳಕೆ ಮತ್ತು ಅದರ ಅವಶ್ಯಕತೆ ಕುರಿತು ಜಾಗೃತಿ ಮೂಡಿಸಲಾಗುವುದು. ಹಸೀರಿಕರಣ ಯೋಜನೆಯಡಿ ಜಿಲ್ಲೆಯಾದ್ಯಂತ.3 ಲಕ್ಷ ಸಸಿ ನೆಡಲು ಯೋಜನೆ ರೂಪಿಸಲಾಗಿದೆ. ಅಂಗನವಾಡಿ, ವಸತಿನಿಲಯ ಹಾಗೂ ಸರ್ಕಾರಿ ಇಲಾಖೆಗಳಲ್ಲಿ ಸ್ಥಳಾವಕಾಶ ಇರುವಲ್ಲಿ ಸಸಿ ನೆಡಲಾಗುವುದು ಎಂದು ತಿಳಿಸಿದರು.

Advertisement

ಸರ್ಕಾರಿ ಕಚೇರಿಗಳ ಆವರಣದಲ್ಲಿ ಕಾಂಕ್ರಿಟ್ ಹಾಕಿಸಿದ್ದರೆ ಅದನ್ನು ತೆಗೆಸಿ, ಎಲ್ಲಿ ಸಾಧ್ಯವೋ ಅಲ್ಲಿ ಸಸಿ ನೆಡಲು ಸಕಲ ಸಿದ್ದತೆ ಮಾಡಿಕೊಳ್ಳಬೇಕು. ಜೂ. 5 ರಿಂದ ಜಿಲ್ಲೆಯಲ್ಲಿ ಮುಂಗಾರು ಆರಂಭವಾಗುತ್ತಿದ್ದು, ಗಿಡಗಳ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಾಣವಾಗಲಿದೆ ಎಂದರು.

ಶಾಲಾ ಆವರಣದಲ್ಲಿ ಸಸಿ ನೆಟ್ಟು ಮೂರು ಮಕ್ಕಳಿಗೆ ಒಂದರಂತೆ ಸಸಿ ಬೆಳೆಸುವ ಜವಾಬ್ದಾರಿಯನ್ನು ಅವರಿಗೇ ನೀಡಿದಲ್ಲಿ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಗಿಡಗಳನ್ನು ಬೆಳೆಸುವ ಕುರಿತು ಆಸಕ್ತಿ ಮೂಡುವ ಜೊತೆಗೆ ಭವಿಷ್ಯದಲ್ಲಿ ಗಿಡ-ಮರಗಳ ಪ್ರಯೋಜನಗಳ ಬಗ್ಗೆ ತಿಳಿಯುತ್ತದೆ ಎಂದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಬಿ. ಮುದಗಲ್ ಮಾತನಾಡಿ, ಮಳೆ ನೀರನ್ನು ಹರಿದು ಹೋಗಲು ಬಿಡುವುದರಿಂದ ನೀರಿನ ಜೊತೆ ಮಣ್ಣು ಸಹ ಹರಿದು ಭೂಮಿಯ ಮೇಲ್ಮೈ ಪದರ ಹಾಳಾಗುತ್ತದೆ. ಜಲವರ್ಷ 2019 ಯೋಜನೆಯಡಿಯಲ್ಲಿ ಜಿಲ್ಲೆಯ ಒಟ್ಟು 252 ಕೆರೆಗಳ ಅಭಿವೃದ್ಧಿ, ಕೆರೆಗಳು, ಗೋಕಟ್ಟೆಗಳ ಹೂಳೆತ್ತುವುದು, ಚೆಕ್‌ಡ್ಯಾಂ ನಿರ್ಮಾಣ ಮಾಡಿ ಮಳೆ ನೀರನ್ನು ಸಂಗ್ರಹಿಸಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯ 20 ಸಾವಿರ ಹೆಕ್ಟೇರ್‌ ಭೂಪ್ರದೇಶವನ್ನು ವಿವಿಧ ಕಾರ್ಯಕ್ರಮಗಳ ಅಡಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು. ನರೇಗಾ ಯೋಜನೆಯಡಿ ಜಮೀನುಗಳಿಗೆ ಬದುಗಳನ್ನು ನಿರ್ಮಿಸಿ ಭೂ ಸವಕಳಿ ತಡೆಗಟ್ಟಲಾಗುವುದು. 41 ಹಳ್ಳಿಗಳಲ್ಲಿ 8 ಕಲ್ಯಾಣಿಗಳು, 14 ಕಟ್ಟೆಗಳು ಮತ್ತು 11 ಗೋಕಟ್ಟೆಗಳನ್ನು ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗಿದೆ. ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಗ್ರಾಮಗಳಲ್ಲಿ ಗ್ರಾಮಸಭೆ ನಡೆಸಿ ಜಲ ಮೂಲಗಳನ್ನು ಅಭಿವೃದ್ಧಿ ಪಡಿಸುವ ಯೋಜನೆಗಳ ಕೈಗೊಳ್ಳಲಾಗಿದೆ ಎಂದರು.

ಜಿಲ್ಲಾ ಪಂಚಾಯತ್‌ ಉಪ ಕಾರ್ಯದರ್ಶಿ ಭೀಮಾನಾಯ್ಕ, ಡಿಡಿಪಿಐ ಪರಮೆಶ್ವರ್‌, ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಂ.ಎಸ್‌. ತ್ರಿಪುಲಾಂಭ, ತೋಟಗಾರಿಕೆಯ ಉಪನಿರ್ದೇಶಕ ಲಕ್ಷ್ಮಿಕಾಂತ್‌ ಬೊಮ್ಮನ್ನರ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next