Advertisement

ಘನತ್ಯಾಜ್ಯ ನಿರ್ವಹಣೆ: ಸ್ವಚ್ಛ  ಬಂಟ್ವಾಳ –ಸ್ವಸ್ಥ ಬಂಟ್ವಾಳ ಯೋಜನೆ

09:00 AM May 18, 2018 | Team Udayavani |

ಬಂಟ್ವಾಳ: ಸುಂದರ ಬಂಟ್ವಾಳವನ್ನು ರೂಪಿಸಲು ಬಂಟ್ವಾಳ ಪುರಸಭೆಯಿಂದ ಸ್ವಚ್ಛ ಬಂಟ್ವಾಳ – ಸ್ವಸ್ಥ ಬಂಟ್ವಾಳ ಯೋಜನೆಯನ್ನು ಅನುಷ್ಠಾನಕ್ಕೆ ಯೋಜಿಸಲಾಗಿದೆ. ನಾಗರಿಕರು, ಸಂಘ ಸಂಸ್ಥೆಯವರು ಕೆಲವೊಂದು ಕ್ರಮಗಳನ್ನು ಅನುಸರಿಸಬೇಕು ಎಂದು ಮುಖ್ಯಾಧಿಕಾರಿ ರಾಯಪ್ಪ ಅವರು ತಿಳಿಸಿದ್ದಾರೆ.

Advertisement

ತಮ್ಮ ಮನೆಗಳಲ್ಲಿ ಉತ್ಪತ್ತಿಯಾಗುತ್ತಿರುವ ಕಸವನ್ನು ಮೂಲದಲ್ಲಿಯೇ ವಿಂಗಡಿಸಿ, ಸಂಗ್ರಹಿಸಿ, ಸುರಕ್ಷಿತವಾಗಿಟ್ಟು ಪುರಸಭಾ ವಾಹನಕ್ಕೆ ನೀಡಬೇಕು. ಮನೆ ಸುತ್ತಲೂ ಸ್ವಚ್ಛವಾಗಿಡುವುದು, ಮನೆ ಸುತ್ತಲೂ ಖಾಲಿ ಸ್ಥಳದಲ್ಲಿ ಹಸಿರು ಗಿಡಗಳನ್ನು ನೆಡಲು ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ. ಅಂಗಡಿಗೆ ಹೋಗುವಾಗ ಮನೆಯಿಂದಲೇ  ಕೈಚೀಲ, ಸ್ಟೀಲ್‌ ಬಾಕ್ಸ್‌ಗಳನ್ನು ತೆಗೆದುಕೊಂಡು ಹೋಗಿ  ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್‌ ಚೀಲಗಳ ಬಳಕೆ ನಿಲ್ಲಿಸಿ ಪರಿಸರ ಉಳಿಸುವುದಕ್ಕೆ ಸಹಕಾರ ನೀಡಬೇಕು. ಅಡುಗೆ ಮನೆಯಿಂದ ಉತ್ಪತ್ತಿಯಾಗುವ ಹಸಿ ಕಸದಿಂದ ಮನೆಯಲ್ಲಿ ಸಾವಯವ ಗೊಬ್ಬರ ತಯಾರಿಸಿ ಮನೆಯಲ್ಲಿಯೇ ತರಕಾರಿ, ಸೊಪ್ಪು ಕಾಯಿ ಪಲ್ಯ ಗಿಡಗಳನ್ನು ಬೆಳೆಸಿ ಸೇವಿಸುವುದರಿಂದ ಆರೋಗ್ಯವಂತರಾಗಿ ಬಾಳಬಹುದು ಎಂದು ತಿಳಿಸಿದ್ದಾರೆ.

ಕಡ್ಡಾಯ ಶೌಚಾಲಯ ಬಳಕೆ
ಕಡ್ಡಾಯ ಶೌಚಾಲಯ ಬಳಕೆಯಿಂದ ರೋಗರುಜಿನಗಳಿಂದ ದೂರವಿರಬಹುದು. ಬಂಟ್ವಾಳ ಬಯಲು ಮಲಮೂತ್ರ ಮಾಡುವುದನ್ನು ಪುರ ಸಭೆ ಕಡ್ಡಾಯ ನಿಷೇಧಿಸಿದೆ. ಕಂಡುಬಂದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳುವುದು. ನಗರ ಪ್ರದೇಶ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಂಗಡಿ, ಗೂಡಂಗಡಿ, ವಾಣಿಜ್ಯ ಕಟ್ಟಡ, ಹೊಟೇಲ್‌ಗ‌ಳ ಮುಂದೆ ಕಸವನ್ನು ಹಾಕಲು ಪ್ಲಾಸ್ಟಿಕ್‌ ಬಕೆಟ್‌ಗಳನ್ನು ಕಡ್ಡಾಯವಾಗಿ ಇಟ್ಟು ಸ್ವಚ್ಛತೆಗೆ ಅದ್ಯತೆ ನೀಡಬೇಕು ಎಂದು ಅವರು ತಿಳಿಸಿದ್ದಾರೆ.

ಪುರಸಭಾ ವಾಹನಕ್ಕೆ ನೀಡಿ
ಮದುವೆ, ಹಬ್ಬ ಹರಿದಿನಗಳಲ್ಲಿ ಉತ್ಪತ್ತಿಯಾಗುವಂತಹ ತ್ಯಾಜ್ಯ ವಸ್ತು, ಮತ್ತಿತರ ಕಸಗಳನ್ನು ಮೂಲದಲ್ಲಿಯೇ ವಿಂಗಡಿಸಿ ಪ್ರತ್ಯೇಕವಾಗಿ ಸಂಗ್ರಹಿಸಿಟ್ಟು ಪುರಸಭಾ ವಾಹನಕ್ಕೆ ನೀಡಬೇಕು. ಸಮಾರಂಭ ಪೂರ್ವದಲ್ಲಿ ಪುರಸಭೆಗೆ ತಿಳಿಸಿದರೆ ವಿಂಗಡಿಸಿದ ತ್ಯಾಜ್ಯ ವಸ್ತುಗಳನ್ನು  ಪುರಸಭಾ ವತಿಯಿಂದ ವಿಲೇವಾರಿ ಮಾಡಿಕೊಡಲಾಗುತ್ತದೆ ಎಂದವರು ತಿಳಿಸಿದ್ದಾರೆ.

ಸಮಾರಂಭಗಳಲ್ಲಿ ಪ್ಲಾಸ್ಟಿಕ್‌ ವಸ್ತುಗಳಾದ ಲೋಟ, ಪ್ಲೇಟ್‌, ಥರ್ಮೊಕೋಲ್‌ ಪ್ಲೇಟ್‌, ಪ್ಲಾಸ್ಟಿಕ್‌ ಹಾಸು ಉಪಯೋಗಿಸಬಾರದು. ಪರಿಸರ ಪೂರಕ ವಸ್ತುಗಳಾದ ಅಡಿಕೆ ಹಾಳೆ, ಬಾಳೆಎಲೆ ಉಪಯೋಗಿಸಿ ಅನಂತರ ವಿಂಗಡಿಸಿ ಪುರಸಭಾ ವಾಹನಕ್ಕೆ ನೀಡಬೇಕು.ಬಂಟ್ವಾಳ ಪುರಸಭಾ ವ್ಯಾಪ್ತಿಯ ಎಲ್ಲ ಪ್ರದೇಶಗಳಿಗೆ ವಾಹನಗಳನ್ನು ಕಳುಹಿಸಿಕೊಡಲಾಗುವುದು ಎಂದವರು ತಿಳಿಸಿದ್ದಾರೆ.

Advertisement

ಸಾವಯವ ಗೊಬ್ಬರ ತಯಾರಿ
ಸ್ವಂತ ಸ್ಥಳ ಇರುವಂತಹ ನಾಗರಿಕರು ಹಸಿ ಕಸವನ್ನು ತಮ್ಮ ಮನೆ ಅಂಗಳದಲ್ಲಿ ಪಿಟ್‌ ಕಾಂಪೋಸ್ಟ್‌ ಮಾಡುವುದರಿಂದ ಕಸ ಸಮಸ್ಯೆ ಪರಿಹರಿಸಿ ಕೊಳ್ಳಬಹುದಾಗಿದೆ ಹಾಗೂ ಸಾವಯವ ಗೊಬ್ಬರ ತಯಾರಿಸಬಹುದಾಗಿದೆ. ಗ್ರಾಮಸ್ಥರು ಕಸವನ್ನು ರಸ್ತೆ ಬದಿ ಹಾಕುವುದನ್ನು ಗಂಭೀರವಾಗಿ ಪರಿಗಣಿಸಿ ಕಾನೂನಿನ ಕ್ರಮ ತೆಗೆದುಕೊಳ್ಳಲಾಗುವುದು.

ಕಸವನ್ನು ವಿಂಗಡಿಸಿ ನೀಡಿ
ಮನೆ ಮತ್ತು ವಾಣಿಜ್ಯ ಕಟ್ಟಡಗಳಿಂದ ಕಸವನ್ನು ಮೂಲದಲ್ಲೇ ಹಸಿ ಕಸ, ಒಣ ಕಸ ಮತ್ತು ಅಪಾಯಕಾರಿ ಕಸವನ್ನಾಗಿ ಬೇರ್ಪಡಿಸಿ ಸಂಗ್ರಹಿಸಿ ಪ್ರತ್ಯೇಕವಾಗಿ ನೀಡಬೇಕು. ಹಸಿ ಕಸವನ್ನು ಕಾಂಪೋಸ್ಟ್‌ ಮೂಲಕ ಗೊಬ್ಬರ ತಯಾರಿಸಲು ಬಳಸಲಾಗುತ್ತದೆ. ಒಣ ಕಸದಲ್ಲಿ ಬರುವ ವಸ್ತುಗಳನ್ನು ಮರುಬಳಕೆ ಮಾಡಬಹುದಾದ ಲೋಹ, ಬಾಟಲ್‌, ರೊಟ್ಟುಗಳು, ರಬ್ಬರ್‌, ಪತ್ರಿಕೆಗಳನ್ನು ಬೇರ್ಪಡಿಸಿ ಮಾರಾಟ ಮಾಡಿ ಪುರಸಭೆಗೆ ಆದಾಯ ಬರುವಂತೆ ಕ್ರಮ ಕೈಗೊಳ್ಳಲಾಗಿದೆ.

ಅಪಾಯಕಾರಿ ತ್ಯಾಜ್ಯಗಳಾದ ಬ್ಯಾಟರಿ ಸೆಲ್‌, ಮೊಬೈಲ್‌ ಬಿಡಿ ಭಾಗ, ಕಂಪ್ಯೂಟರ್‌ ಬಿಡಿ ಭಾಗಗಳು ಮತ್ತು ಔಷಧ ಬಾಟಲ್‌ಗ‌ಳನ್ನು ಕೆರೆ, ಬಾವಿ, ಮಳೆ ನೀರು ಹರಿಯುವ ಚರಂಡಿಗೆ ಮತ್ತು ನೀರಿನ ಮೂಲಕ್ಕೆ ಹಾಕಿದಲ್ಲಿ ಮಾರಕ ರೋಗಗಳು ಉಂಟಾಗುವ ಸಂಭವ ಇರುವುದರಿಂದ ಅವುಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ವಿಲೇವಾರಿ ಮಾಡುವಂತಹ ಸಂಸ್ಥೆಗಳಿಗೆ ನೀಡುವುದು ಅಗತ್ಯ ಎಂದವರು ತಿಳಿಸಿದ್ದಾರೆ. ತ್ಯಾಜ್ಯ ವಸ್ತುಗಳನ್ನು ವಿಗಂಡಿಸಿದರೆ ಸಂಗ್ರಹಣೆ ಮತ್ತು ವಿಲೇವಾರಿಗೆ ಮತ್ತು ಪೌರ ಕಾರ್ಮಿಕರಿಗೆ ಸಹಕಾರಿಯಾಗುತ್ತದೆ.

ಪ್ಲಾಸ್ಟಿಕ್‌ ನಿಯಂತ್ರಣ
ಪ್ಲಾಸ್ಟಿಕ್‌ ವಸ್ತುಗಳು ಭೂಮಿಯಲ್ಲಿ ಕೊಳೆಯುವುದಿಲ್ಲ. ಪ್ಲಾಸ್ಟಿಕ್‌ ವಸ್ತುಗಳನ್ನು ಸುಡುವುದರಿಂದ ಉಂಟಾಗುವ ಅನಿಲದಿಂದ ಮಾರಕ ರೋಗಗಳು ಉಂಟಾಗುತ್ತವೆ. ಆದ್ದರಿಂದ ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಸ್ವಚ್ಛಗೊಳಿಸಿ ಪ್ರತ್ಯೇಕವಾಗಿ ಸಂಗ್ರಹಿಸಿ ಮರು ಬಳಕೆಗೆ ನೀಡುವುದು ಉತ್ತಮ.

ಜನರು ಎಲ್ಲೆಂದರಲ್ಲಿ ಕಸವನ್ನು ಬಿಸಾಡುವ ಪದ್ಧತಿಯನ್ನು ಕೈಬಿಟ್ಟು, ಕಸವನ್ನು ಮೂಲದಲ್ಲೇ ಹಸಿ ಕಸ- ಒಣ ಕಸವನ್ನಾಗಿ ಬೇರ್ಪಡಿಸಿ ಪುರಸಭೆ ವಾಹನಕ್ಕೆ ನೀಡುವುದರಿಂದ ಪರಿಸರ ಸ್ವಚ್ಛವಾಗಿರುತ್ತದೆ. ಸಾಂಕ್ರಾಮಿಕ ರೋಗ ಕಡಿಮೆಯಾಗಿ ನಾಗರಿಕರು ಆರೋಗ್ಯವಂತರಾಗಿ ಜೀವನ ನಡೆಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ಮರು ಬಳಕೆ ಮಾಡಿ
ಚಾಕಲೇಟ್‌, ಬಿಸ್ಕೆಟ್‌ ಕವರ್‌ಗಳನ್ನು ಹಾಗೂ ನೀರು ಹಾಗೂ ತಂಪು ಪಾನೀಯ ಕುಡಿದು ಬಾಟಲ್‌ ಗ‌ಳನ್ನು ಎಲ್ಲೆಂದರಲ್ಲಿ ಬಿಸಾಡದೆ ಶೇಖರಿಸಿಟ್ಟು ಮರು ಬಳಕೆಗೆ ಉಪಯೋಗಿಸಿ  ಸ್ವಲ್ಪ ಮಟ್ಟಿನ ಆದಾಯ ಗಳಿಸಬಹುದಾಗಿದೆ. ಯಾವುದೇ ಕಾರಣಕ್ಕೂ ಕಸವನ್ನು ಖಾಲಿ ಸ್ಥಳದಲ್ಲಿ, ರಸ್ತೆ ಬದಿ ಚರಂಡಿಯಲ್ಲಿ ಬಿಸಾಡುವ ಅಭ್ಯಾಸವನ್ನು ಬಿಡಬೇಕು ಎಂದಿದ್ದಾರೆ.

5 ಅಡಿ ಉದ್ದ, ಎರಡು ಅಡಿ ಅಗಲ,  ಒಂದೂವರೆ ಅಡಿ ಆಳದ ಗುಂಡಿಯಲ್ಲಿ ಪ್ರತಿನಿತ್ಯ ಸಂಗ್ರಹಿಸಿದ ಹಸಿ ಕಸ, ಕೊಳೆತ ತರಕಾರಿ, ಬಾಳೆಹಣ್ಣಿನ ಸಿಪ್ಪೆ, ಬಸಿದ ಅನ್ನ  ಇತ್ಯಾದಿ ಅಡುಗೆ ಮನೆ ತ್ಯಾಜ್ಯಗಳನ್ನು ಹಾಕಿ ತೆಳುವಾಗಿ ಮಣ್ಣು  ಹರಡಿ ಮುಚ್ಚಿದರೆ  45 ದಿವಸಗಳಲ್ಲಿ ಗೊಬ್ಬರವಾಗಿ ಪರಿವರ್ತನೆಯಾಗುತ್ತದೆ ಎಂದು ಬಂಟ್ವಾಳ ಪುರಸಭೆ ಮುಖ್ಯಾಧಿಕಾರಿ ತಿಳಿಸಿದ್ದಾರೆ.

ನಾಗರಿಕರ ಸಹಕಾರ ಅಗತ್ಯ
ಭೂಮಿ, ಜಲ, ವಾಯು ಇವುಗಳ ಸಂರಕ್ಷಣೆ ಮಾನವನ ಆದ್ಯ ಕರ್ತವ್ಯ, ಜವಾಬ್ದಾರಿ.ಬಂಟ್ವಾಳ ಪುರಸಭೆ ಸ್ವತ್ಛ ಹಾಗೂ ಸುಂದರ ನಗರವಾಗುವ ಕಡೆ ದಾಪುಗಾಲು ಹಾಕಲು ನಾಗರಿಕರ ಸಹಕಾರ ಅಗತ್ಯವಾಗಿದೆ. ಜನರಲ್ಲಿ ಸ್ವಚ್ಛತೆ ಹಾಗೂ ತ್ಯಾಜ್ಯ ವಿಲೇವಾರಿ ಬಗ್ಗೆ ಜಾಗೃತಿ ಮೂಡಬೇಕಾಗಿದೆ. 
– ರಾಯಪ್ಪ, ಮುಖ್ಯಾಧಿಕಾರಿ, ಬಂಟ್ವಾಳ ಪುರಸಭೆ

Advertisement

Udayavani is now on Telegram. Click here to join our channel and stay updated with the latest news.

Next