ಕೊಳದಂತೆ ಸುತ್ತುವರಿದು ಅಟ್ಟಮುಟ್ಟ ಚಕ್ಕರ್ಮುಟ್ಟೆ ಕುಳಿತ ಪುಟ್ಟಿಯರ ಬಟ್ಟಕಂಗಳ ಮಿಟುಕುವ ಎವೆಯೊಳಗೆ ಮೀನುಗಳಂತೆ ಗಾಳಕ್ಕೆ ಸಿಗದೆ ನುಣುಚಿಕೊಳ್ಳುತ್ತ ಫಳಫಳನೆ ಹೊಳೆಯುತ್ತಿದೆ ಕನಸು. ಅವರು ತೊಟ್ಟ ಮಿಟಾಯಿ ಹೂಫ್ರಾಕಿನ ಎದೆಯಲ್ಲಿ ಬಿಡದೆ ಕುಣಿಯುವ ಬಣ್ಣದ ಚಿಟ್ಟೆ.ಅವರ ಸುತ್ತಲೇ “ಹೋ’ ಎಂದು ನಗುತ ಕೈಬೀಸುತ್ತ ಸುಳಿದು ಸೂಸುವ ತಂಗಾಳಿ. ಮುಚ್ಚಿದ ಕತ್ತಲ ಎವೆಮೀರಿ ಧೋಯೆಂದು ಮಳೆಗರೆದು ಮೌನವಾದ ಮುಗಿಲು ಹೆಣ್ಣ ತೊಳೆದ ಕಂಗಳ ಬೆಳಕಿಗೆ ಹೊಳೆಯುತಿದೆ ಕೈಬಳೆ ಕಾಮನಬಿಲ್ಲು.
ಕಾಮನಬಿಲ್ಲನ್ನೇ ಮುರಿದು ಮುಚ್ಚಿಟ್ಟರೋ ಎಂಬಂತೆ ಅವರ ಮಡಿಲಲ್ಲಿವೆ ಬಣ್ಣಬಣ್ಣದ ಬಳೆಚೂರುಗಳು. ಮಡಿಲಲ್ಲಿದ್ದ ಚಿಕ್ಕ ಬಳೆ ತುಂಡೊಂದನ್ನು ನೆಲದಲ್ಲಿಟ್ಟು, ನೆಲದಲ್ಲಿದ್ದ ದೊಡ್ಡ ಬಳೆಚೂರನ್ನು ಮಡಿಲಲ್ಲಿಟ್ಟು ಆಟ ಆರಂಭಿಸಿದ್ದಾಳೆ ಹುಡುಗಿ. ಸರದಿ ಸುತ್ತಿನಾಟದಲ್ಲಿ ಮಡಿಲ ಬಣ್ಣಬಣ್ಣದ ಬಳೆಗಳ ಮಳೆಬಿಲ್ಲು ಕರಗಿ ಒಂದೇ ಬಣ್ಣದ ಬಳೆಚೂರು ಸಂಗ್ರಹವಾದೊಡನೆ “ಸೆಟ್’ಎಂದು ಕಿರುಚಿ ಕುಣಿಯುತ್ತಾಳೆ ಗೆದ್ದ ಹುಡುಗಿ. ಆಟದಲ್ಲಿ ಸೋತ ಹುಡುಗಿಯರು ಹ್ಯಾಪ್‌ಮೋರೆ ಹಾಕಿಕೊಂಡು ತಮ್ಮಲ್ಲಿದ್ದ ಬಳೆಚೂರುಗಳನ್ನು ಗೆದ್ದವಳ ಮಡಿಲಿಗೇ ಸುರಿದರೆ, ಅವಳ್ಳೋ ಕಣ್ಮುಚ್ಚಿಕೊಂಡು ಜಯವು ತಲೆಗೇರಿದ ಮತ್ತಲ್ಲಿ ಜಂಭದಕೋಳಿಯಂತೆ ಒಂದೊಂದೇ ಚೂರನ್ನು ಹೆಕ್ಕಿ ಸಾಲಲ್ಲಿ ಸಮಪಾಲು ಹಂಚುತ್ತಾಳೆ. ಮತ್ತೆ ಆಟ ಮೊದಲಿಂದಲೇ ಶುರು. ಇದು ನಾವು ಹುಡುಗಿಯರು ಆಡುತಿದ್ದ “ಬಳೆಯಾಟ’.
ಮಗುವಿಗೆ ನಾಯಿಕಣ್ಣು, ನರಿಕಣ್ಣು, ಕಾಗೆಕಣ್ಣು, ಕೋಳಿಕಣ್ಣು, ಗೂಬೆಗಣ್ಣು ಬೀಳಬಾರದೆಂದು ಅದರ ಕೇದಗೆ ಬಣ್ಣದ ಹೂಪಕಳೆಯಂತಹ ಮುಂಗೈಗಳಲ್ಲಿ ಕಪ್ಪು ಬಳೆಯನ್ನೋ, ಪಂಚಲೋಹದ ಬಳೆಯನ್ನೋ, ಆನೆಚೌರಿಯ ನೇಯ್ಗೆಯ ಬಳೆಯನ್ನೋ , ಬೆಳ್ಳಿಯ ಕೈಕಡಗವನ್ನೋ ತೊಡಿಸುವ ವಾಡಿಕೆ. ಆದರೆ ಇದರಿಂದಲೇ ಚಿಳ್ಳೆಗೂಸಿನ ಮುದ್ದು ಹೆಚ್ಚಾಗಿ ಕೊಂಡಾಟ ಸ್ವಲ್ಪ$ ಹೆಚ್ಚೇ ಮಾಡೋಣ ಅನಿಸುತ್ತದಲ್ಲ, ಇದಕ್ಕೆ ಏನೆನ್ನಬೇಕು! ಹೆಣ್ಣುಮಕ್ಕಳ ಬಾಲ್ಯದ ತುಂಬ ನೀಲಿಯಾಗಸವು ಬಳೆಗಳ ಮಳೆಗರೆಯುತ್ತವೆ. ತೇರು, ಉತ್ಸವ, ಜಾತ್ರೆ, ಪೇಟೆ ಎಲ್ಲೇ ಹೋಗಿ, ಎಲ್ಲೆಂದರಲ್ಲಿ ಬಾಯಿ “ಆ’ಯೆಂದು ತೆರೆದುಕೊಂಡು ಹೆಣ್ಣುಮಕ್ಕಳ ಕೈಗಳನ್ನೇ ನುಂಗುವಂತೆ ನೋಡುವ ಬಳೆಗಳದ್ದೇ ಸಂತೆ. ಕುಪ್ಪಿ ಬಳೆ, ಚುಕ್ಕಿಬಳೆ, ಕಚ್ಚುಬಳೆ, ಮಣ್ಣುಬಳೆ, ಗಾಜುಬಳೆ, ಮರದಬಳೆ, ಪ್ಲಾಸ್ಟಿಕ್‌ಬಳೆ, ಲೋಹಬಳೆ, ಕೈಯಲ್ಲಿ ಮುಟ್ಟಿದರೆ ಸಾಕು ಜಿಗಿಬಿಗಿ ಬೇಗಡೆ ಚೂರುಗಳ ಪುಡಿಯನ್ನು ಮೈತುಂಬ ಉದುರಿಸುವ ಫ್ಯಾನ್ಸಿಬಳೆ, ಎಲ್ಲದಕ್ಕಿಂತಲೂ ಹೆಚ್ಚಾಗಿ ಮುಟ್ಟಿದರೆ ಸಾಕು ಲಟಕ್ಕೆಂದು ಮುರಿಯುವುದಾದರೂ “ಅದೇ ಬೇಕು’ ಎಂದು ರಚ್ಚೆ ಹಿಡಿದು ಕೊಡಿಸದಿದ್ದರೆ ನೆಲದಲ್ಲಿ ಬಿದ್ದು ಚೇರಂಟೆಯಂತೆ ಉರುಳಾಡಿ ಹೊರಳಾಡಿ, ಕೊನೆಗೆ ಎರೆಹುಳದಂತೆ ಹೆಡೆಬಿಚ್ಚಿ ಗಿಟ್ಟಿಸಿಕೊಂಡೇ ಕುಣಿವ ಹೆಜ್ಜೆಯಲಿ ಮನೆಗೆ ತಿರುಗುವಂತೆ ಮಾಡುತಿದ್ದ ಸ್ಪ್ರಿಂಗ್ ಬಳೆ! ಅದನ್ನು ಪಡೆದ ಪುಟ್ಟಜೀವಕ್ಕೆ ಇಡೀ ಲೋಕವೇ ಒಂದು ಬಳೆ! ಮನೆಮುಟ್ಟುವ ಹೊತ್ತಿಗೆ ಯಾವ ಮಾಯಕದಲ್ಲೋ ಮುರಿದು ಎರಡಾಗಿ, ಬೆನ್ನಿಗೆರೆಡು ದಿಮಿಸ್ಕಾಯಿ.
ಕೂಸು ಅಳತೊಡಗಿ ತೋಬಣ್ಣದ ಬಳೆಯೇ ಗರಗರನೆ ತಿರುಗುತ ಬಣ್ಣದ ಬುಗರಿಯಾಗುತಿತ್ತು. ಅಮ್ಮನ ಬಳೆಗಳೊಳಗೆ ಕೈತೂರುತ ತೆಗೆಯುತ್ತ ಮೈಮರೆಯುತಿದ್ದ ಮಗುವಿಗೆ ಆಟಕೆ ಮೊಬೈಲ್ ಬೇಕಿರಲಿಲ್ಲ. ಬೆಸುಗೆಬಿಟ್ಟ ಬಳೆಗಳು ಒಂದಕ್ಕೊಂದು ಬೆಸೆದು ದೇವರ ಫೋಟೋಗೆ ಮಾಲೆಯಾಗಿ ಕೃತಾರ್ಥವಾಗುತ್ತಿದ್ದವು. ಒಡೆದ ಚೂರುಗಳು ಕಸೂತಿಗಂಟಿಕೊಂಡು ಪುನರ್ಜಿàವ ಪಡೆದ ಹುಮ್ಮಸ್ಸಲ್ಲಿ ಹಮ್ಮುಬಿಮ್ಮಲಿ ಹೊಸಬಟ್ಟೆ ಧರಿಸುತ್ತಿದ್ದವು.ಬಳೆಯೆಂದರೆ ಲಕ್ಷ್ಮೀ ಎಂಬ ನಂಬಿಕೆ, ಮುತ್ತೆ„ದೆತನದ ಸಂಕೇತ. ಊರ ಹೆಣ್ಣುದೇವರಿಗೂ ಸೀರೆಯೊಂದಿಗೆ ಹಸಿರು ಅಥವಾ ಕಪ್ಪು ಬಳೆ ಒಪ್ಪಿಸುವ ಕ್ರಮವಿದೆ.ಬಳೆಗಳ ಝಣಝಣ ಸದ್ದಿಲ್ಲದಿದ್ದರೆ ಮನೆಯೇ ಬಣಬಣ.
“ಹುಡುಗಿಯ ಕರ್ಕೊಂಡು ಹುಡುಗ ಜಾತ್ರೆಗೋದಾ ಹುಡುಗಿ ಕೈಲೊಂದೂ ಬಳೆಯಿಲ್ಲ’, “ಬಂಗಾರಶೆಟ್ಟಿ ಕೈನೋಡಿ ಬಳೆಯ ಇಡು ಬಾರೋ’ ಎಂದು ಜನಪದ ಪ್ರೇಮಿಯು ಪ್ರೇಮ ತ್ರಿಪದಿ ಹಾಡಿದರೆ ಪ್ರೇಯಸಿಯ ಕೈತುಂಬ ಹೂಬಳೆ, ಕಣ್ಣಲ್ಲಿ ಕೋಲಿ¾ಂಚ ಸೆಳೆ. “ಭಾಗ್ಯದ ಬಳೆಗಾರ ಹೋಗಿ ಬಾ ನನ್‌ತವರಿಗೆ’ ಜನಪದಗೀತೆಯ ಹಾಗೂ ಮೈಸೂರುಮಲ್ಲಿಗೆಯ ಕೆಎಸ್‌ನ ಅವರ “ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು ಒಳಗೆ ಬರಲಪ್ಪಣೆಯೆದೊರೆಯೆ?’ ಎನ್ನುತ್ತ ಮಣ್ಣಿನ ಬಳೆಯ ಮಲಾರ ಹೊತ್ತು ಬರುವ ಬಳೆಗಾರ ಮನೆ ಮನೆಗಳ ಮನವ ಹೊಕ್ಕವ. ದುಡಿದು ಒರಟಾದ ಕೈಗಳಿಗೂ ಬಳೆ ತೊಡಿಸಬಲ್ಲ ಚತುರ. ಟಿ. ವಿ. ರೇಡಿಯೋಗಳಿಲ್ಲದ ಕಾಲದಲ್ಲಿ ಊರಿಂದೂರಿಗೆ ವಾರ್ತೆಯ ಗಂಟು ಹೊತ್ತು ಅಲೆಯುವ ಈ ಬಳೆಗಾರನೇ ಸುದ್ದಿ ಸಂದೇಶವಾಹಕ. ಬೆಲ್ಲಕ್ಕೆ ಇರುವೆ ಮುತ್ತಿದಂತೆ ತನ್ನನ್ನು ಸುತ್ತುಗಟ್ಟುವ ಹೆಣ್ಣುಮಕ್ಕಳ ಮುಂದೆ ಬಟ್ಟೆಗಂಟಿನಿಂದ ಬದುಕಿನ ಬಣ್ಣಗಳನ್ನು ಬಿಚ್ಚಿಡುವ ಗಾರುಡಿ. ಕಚಕಚಕಚ ನೀರುಳ್ಳಿ ಕೊಚ್ಚಿದಂತೆ ಮಾತಾಡುವ ಆಸೆಯ ಪಟ್ಟಾಂಗದ ಕಟ್ಟೆಗಳಿಗೆ ಅವ ಬಂದನೆಂದರೆ ಸಂಭ್ರಮವೋ ಸಂಭ್ರಮ. ಮದುವಣಗಿತ್ತಿಗೆ ಬಳೆತೊಡಿಸುವ ಶಾಸ್ತ್ರಕ್ಕೆ ಬಳೆಗಾರ ಬೇಕೇಬೇಕು ಎಂದಿದ್ದ ಕಾಲವೊಂದು ಬಹಳಷ್ಟು ಮುನ್ನಡೆದರೂ ತಿರುತಿರುಗಿ ಹೆಣ್ಣುಮಕ್ಕಳಿರುವ ಮನೆಗಳನ್ನು ನೋಡುತ್ತಲೇ ಇದೆಯಲ್ಲ!
ಬಳೆ ತೊಡುವ ಕೈಗಳು
“ಬಂಗಾರದ ಬಳೆ ತೊಟ್ಟು ಬೈಬ್ಯಾಡ ಬಡವರನ ಬಂಗಾರ’ ಎಂಬುದು ಸ್ಥಿರವಲ್ಲ ಮಧ್ಯಾಹ್ನದ ಬಿಸಿಲು ಹೊಳ್ಳೋದು ತಡವಲ್ಲ. ಬಾನಲ್ಲಿ ಚಿನ್ನದಬಳೆಯಂತೆ ಹೊಳೆಯುವ ಸೂರ್ಯ ಮುಳುಗುವುದಿಲ್ಲವೆ? ಭೂಮಿ ತಿರುಗಲೇಬೇಕು. ಒಂದು ಕಡೆ ಕತ್ತಲಾದಾಗ ಇನ್ನೊಂದುಕಡೆ ಬೆಳಕಾಗಲೇಬೇಕು ಬಡತನವೆಂಬುದು ಹೇಳದೆಕೇಳದೆ ಯಾರಿಗೂ ಯಾವ ಹೊತ್ತೂ ಬರಬಹುದು. ಅತ್ತೆಗೊಂದು ಕಾಲ ಸೊಸೆಗೊಂದು ಕಾಲ. ಗುಣವೆಂಬುದು ಬೆಣಬೆಟ್ಟೆಯಲ್ಲ, ಘನಗಟ್ಟಿ ಬಂಗಾರ.
ಅರಸರು ಕವಿಗಳಿಗೆ, ಸಂಗೀತಗಾರರಿಗೆ, ವಿದ್ವಾಂಸರಿಗೆ, ಯುದ್ಧಮಲ್ಲರಿಗೆ ರತ್ನದ ಕೈಕಡಗವನ್ನೋ ಕಾಲ್ಕಡಗವನ್ನೋ ಕಾಣಿಕೆ ನೀಡುತ್ತಿದ್ದರಂತೆ. ಇವು ಪ್ರತಿಭೆಗೆ ದೊರೆಯುತ್ತಿದ್ದ ಮನ್ನಣೆ. ಆದರೆ ಹೆಣ್ಣುಮಕ್ಕಳ ಬಾಳು ಬಳೆಯ ಸೀಮಿತ ವರ್ತುಲದೊಳಗೇ ಸುತ್ತುತ್ತದಲ್ಲ? ಸಂಸ್ಕೃತಿಯ ಹೆಸರಲ್ಲಿ ಚೆಲುವಾದ ಬಳೆಗಳೇ ಬಾಲ್ಯ-ಯವ್ವನ-ಮುಪ್ಪನ್ನು ಆಳುತ್ತವಲ್ಲ? ಕೈಗಳನ್ನೇ ಕಟ್ಟಿಹಾಕುವ ಚಿನ್ನದ ಸಂಕೋಲೆಯಾಗುವುದಲ್ಲ? “ಕೈಗೆ ಬಳೆತೊಟ್ಟುಕೋ ಹೋಗೋ!’ ಎಂದು ಗಂಡಸರನ್ನು ಬೈಯುವುದನ್ನು ಕೇಳಿಲ್ಲವೇ? ಇದರರ್ಥ ಹೆಣ್ಣು ಅಬಲೆ, ಬಂಧನದಲ್ಲಿ ಹೆದರುತ್ತಲೇ ಬಾಳಬೇಕಾದವಳು, ತನ್ನನ್ನು ತಾನು ರಕ್ಷಿಸಿಕೊಳ್ಳಲು ಬಳೆತೊಡದ ಗಂಡುಕೈಗಳನ್ನೇ ಕಾಯಬೇಕಾದವಳು, ಅವಳ ಕೈಗಳು ಬಳೆತೊಟ್ಟುಕೊಂಡು ನಾಗರಿಕತೆಯ ತೊಟ್ಟಿಲನ್ನು ತೂಗಲೆಂದೇ ಇರುವಂಥವು, ದೇಶವನ್ನಾಳಲು ಅಲ್ಲ, ಮನೆಗೆಲಸ ಮಾಡಿಕೊಂಡು ಮಕ್ಕಳನ್ನು ನೋಡಿಕೊಂಡು ಕುಟುಂಬದ ವರ್ತುಲದೊಳಗೇ ಇರಬೇಕಾದದ್ದು ಎಂದಲ್ಲವೇ? ಆದರೆ ಬಳೆಮೀರುವ ರಿಂಗ್‌ಡ್ಯಾನ್ಸೊಂದೇ ಸಾಕಲ್ಲವೇ ಇದು ಸುಳ್ಳೆನ್ನಲು?
ಸಾಂಪ್ರದಾಯಿಕ ಕುಟುಂಬಗಳಲ್ಲಿ ಗಂಡ ಸತ್ತೂಡನೆ ಬಳೆಯೊಡೆದು, ಕುಂಕುಮವಳಿಸಿ, ತಲೆಬೋಳಿಸಿ , ಕೆಂಪುಬಟ್ಟೆ ತೊಡಿಸಿ, ವಿರೂಪಗೊಳಿಸಿ, ಆಹಾರ-ವಿಹಾರ ಮರುವಿವಾಹಕ್ಕೆ ನಿಷೇಧ ಹೇರಿ ಇದುವರೆಗೂ ಎಷ್ಟೋ ಹೆಣ್ಣುಜೀವಗಳ ಬಾಳಬಣ್ಣವನ್ನೇ ಕಸಿದುಕೊಂಡಿವೆ ಗಂಡುಕೈಗಳು. ಎಂ.ಕೆ. ಇಂದಿರಾ ಅವರ ಫಣಿಯಮ್ಮ ಕಾದಂಬರಿಯೊಂದೇ ಸಾಕು ವಿಧವಾ ಪದ್ಧತಿಯ ನೋವಿನ ಒಳಗನ್ನು ಓದಿ ನಿಟ್ಟುಸಿರಿಡಲು. ಇಂದಿಗೂ ಆಕೆ ಎದುರಾದರೆ ಸಾಕು ವಿಘ್ನವೆನ್ನುವವರಿದ್ದಾರಲ್ಲ! ಅವಳನ್ನು ಬಿಟ್ಟು ಉಳಿದವರಿಗೆ ಮಾತ್ರ ಹೂಬಳೆ ಕೊಡುವ ಮುತ್ತೆ„ದೆಯರಿದ್ದಾರಲ್ಲ! ಅವಳ ಎದೆಯಾಳದ ನೋವನ್ನವರು ಅರಿಯಬೇಕಿದೆ. ಅವಳ ಬಾಲ್ಯದೊಂದಿಗೇ ಭಾವನಾತ್ಮಕವಾಗಿ ಬೆಸೆದಿರುವ ಮಣ್ಣಿನ ಬಳೆಗಳನ್ನು ಕಸಿಯುವ ಕ್ರೂರ ಕೈಗಳನ್ನು ತಡೆಯಲೇಬೇಕಿದೆ. ಆಗ ಮಾತ್ರ ಭೂಮಿಯ ನೋವುಗಳಿಗೆ ಮುಲಾಮು ಹಚ್ಚುವ ಬಳೆಗೈಯಂತೆ ಆಗಸದಲ್ಲಿ ಅರ್ಧಚಂದ್ರ ನಗುತ್ತಾನೆ.
ಕಾತ್ಯಾಯಿನಿ ಕುಂಜಿಬೆಟ್ಟು