Advertisement

ಸಂವೇದನಾತ್ಮಕ ಮೃಣ್ಕಲೆ ಶಿಬಿರ

06:04 PM Nov 07, 2019 | mahesh |

ಡಿಜಿಟಲ್‌ ಯುಗದಲ್ಲಿ ಮಕ್ಕಳ ಮನಸ್ಸನ್ನು ಆಕರ್ಷಿಸಿ ಅವರ ಸೃಜನಶೀಲತೆ ಬೆಳೆಸಲು ಸೂಕ್ತ ತರಬೇತಿಯನ್ನು ನೀಡುವುದೆಂದರೆ ಸುಲಭದ ಕೆಲಸವಲ್ಲ. ಉತ್ಸಾಹಿ ಸಂಪನ್ಮೂಲ ವ್ಯಕ್ತಿಗಳಿಂದ ಆಕರ್ಷಕ ಶಿಬಿರಗಳು ನಡೆದಾಗ ಮಾತ್ರ ಅದು ಸಾಧ್ಯ. ಚಿಣ್ಣರ ಪ್ರತಿಭೆಗಳನ್ನು ಒರೆಗೆ ಹಚ್ಚಿ ಮಾರ್ಗದರ್ಶನ ನೀಡುವಂತಹ ಕೆಲಸ ಅನೇಕ ಕಲಾಶಿಬಿರಗಳಲ್ಲಿ ನಡೆಯುತ್ತದೆ. ಆದರೆ ಅನುಕರಣೆ ಕಡಿಮೆಯಾಗಿ ಸೃಜನಶೀಲತೆಯ ಅನಾವರಣವೇ ಶಿಬಿರಗಳ ಉದ್ದೇಶವಾಗಬೇಕು. ಆಗ ಮಕ್ಕಳು ಬಹುಮುಖವಾಗಿ ಬೆಳೆಯುತ್ತಾರೆ. ಅಂತಹ ವಿಶಿಷ್ಟ ಕಾರ್ಯಕ್ರಮವೊಂದು ಮಣಿಪಾಲದ ತ್ರಿವರ್ಣ ಆರ್ಟ್‌ ಸೆಂಟರ್‌ನಲ್ಲಿ ಕಲಾವಿದ ಹರೀಶ್‌ ಸಾಗಾ ನೇತೃತ್ವದಲ್ಲಿ ನಡೆಯಿತು. ಮಕ್ಕಳಲ್ಲಿ ಸೃಜನಾತ್ಮಕ ಕ್ರೀಯಾಶೀಲತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಮತ್ತು ಮಣ್ಣಿನೊಂದಿಗಿನ ಸಂವೇದನಾತ್ಮಕವಾದ ಸಂಬಂಧವನ್ನು ಬೆಸೆಯುವ ದೃಷ್ಟಿಯಿಂದ ಈ ಶಿಬಿರವು ಸಂಪನ್ನಗೊಂಡಿತ್ತು.

Advertisement

ಕಲಾವಲಯದಲ್ಲಿ ಸದಾ ಒಂದಿಲ್ಲೊಂದು ಹೊಸತನದ ಚಿಂತನೆಯೊಂದಿಗೆ ಕಲಾಶಿಬಿರ ನಡೆಸುತ್ತಿರುವ ಹರೀಶ್‌ ಸಾಗಾ ಮಕ್ಕಳೊಂದಿಗೆ ಅವರ ಹೆತ್ತವರನ್ನೂ ಕ್ರಿಯಾಶೀಲಗೊಳಿಸಿ ಅವರಿಂದಲೂ ಕಲಾಕೃತಿ ಮೂಡಿಬರುವಂತೆ ಮಾಡುತ್ತಿರುವುದು ವಿಶೇಷವೆನಿಸುತ್ತದೆ. ಅವರು ಹೇಳುವಂತೆ ಮಕ್ಕಳ ಹೆತ್ತವರಲ್ಲಿ ಕಲಾತ್ಮಕತೆ ಹೆಚ್ಚಿದಂತೆ ಅದು ಮಕ್ಕಳ ಕಲಿಕೆಗೆ ಹೆಚ್ಚು ಪೂರಕವಾಗುತ್ತದೆ. ಹಾಗಾಗಿ ಇವರ ಕಲಾಶಿಬಿರದಲ್ಲಿ 18 ವರ್ಷದಿಂದ 75 ವರ್ಷ ವಯಸ್ಸಿನ ಎಲ್ಲರೂ ಇರುತ್ತಾರೆ. ಈ ಬಾರಿ 23 ಮಂದಿ ಭಾಗವಹಿಸಿ 110ಕ್ಕೂ ಮೀರಿ ವೈವಿಧ್ಯಮಯ ಮಣ್ಣಿನ ಕಲಾಕೃತಿಗಳನ್ನು ರಚಿಸಿದ್ದರು. ಹರೀಶ್‌ ಸಾಗಾ ಅವರವರ ವಯಸ್ಸಿಗೆ ಅನುಗುಣವಾಗಿ ಮಾರ್ಗದರ್ಶನ ನೀಡಿ ಸೃಜನಾತ್ಮಕ ಕಲಾಕೃತಿಗಳು ಮೂಡುವಂತೆ ನೋಡಿಕೊಂಡರು.

ಶಿಬಿರಾರ್ಥಿಗಳು ಮಣ್ಣಿನಲ್ಲಿ ಆಡುತ್ತಾ ತಮ್ಮ ಚಿಂತನೆಗಳನ್ನು ಭಟ್ಟಿಯಿಳಿಸುತ್ತಾ ಸಂವೇದನಾತ್ಮಕ ಮೃಣ್ಕಲೆ ಕಲಾಕೃತಿಗಳನ್ನು ಹೊರಹೊಮ್ಮಿಸಿದರು. ಯಕ್ಷಗಾನ ಮತ್ತು ಭೂತದ ಮುಖವಾಡಗಳು, ಗಿಡುಗ, ಗಿಳಿ, ಮೊಸಳೆ ರೂಪದೊಂದಿಗೆ ಮೂಡಿರುವ ಹೂದಾನಿ, ಗಣಪತಿ, ಮೇಣದ ಬತ್ತಿ, ಮರದ ದಿಮ್ಮಿ, ಹೂಜಿ, ಗಿಳಿ, ಮರ, ಗುಲಾಬಿ, ಸೂರ್ಯಕಾಂತಿ, ದೋಣಿ, ಗುಡಿಸಲು, ಕೋಟೆ, ಬಾವಿ, ಭಾವನಾತ್ಮಕವಾಗಿ ಕುಳಿತ ವ್ಯಕ್ತಿ, ಹಣತೆ, ನೊಗ, ಪೆನ್ನಿನ ಸ್ಟಾಂಡ್‌, ಬಾಲಕ, ಬಾವಿ, ಹಂಸ, ಹದ್ದು, ದ್ರಾಕ್ಷಿ ಬಳ್ಳಿ, ಬುದ್ಧ, ಆಮೆ, ಶಂಖ, ಮೀನು, ಪ್ರಕೃತಿ, ಮಾವಿನಹಣ್ಣು ಇತ್ಯಾದಿ ಅವರವರ ಭಾವನೆಗೆ ಸಿಕ್ಕ ಕಲಾಕೃತಿಗಳು ನವರಸಭರಿತವಾಗಿ ರಚನೆಯಾದವು. ತರಬೇತುದಾರರಾಗಿ ಯಶೋದಾ ಬಿ. ಸನಿಲ್‌ ಮತ್ತು ಪವಿತ್ರಾ ಸಿ. ಭಾಗವಹಿಸಿದ್ದರು. ಶಿಬಿರದ ಕೊನೆಯಲ್ಲಿ ರಚನೆಗೊಂಡ ಕಲಾಕೃತಿಗಳನ್ನು ಪ್ರದರ್ಶಿಸಲಾಯಿತು.

ಉಪಾಧ್ಯಾಯ ಮೂಡುಬೆಳ್ಳೆ

Advertisement

Udayavani is now on Telegram. Click here to join our channel and stay updated with the latest news.

Next