Advertisement

ಕ್ಲಾಸಿಗೆ ತಕ್ಕ ಕಡ್ಲೆಕಾಯಿ!

03:45 AM May 09, 2017 | |

ಎಸ್ಸೆಸ್ಸೆಲ್ಸಿ, ಪಿಯುಸಿ ಇನ್ನೇನು ಮುಗಿಯುತ್ತೆ. ಕೆಲವರು ಓದನ್ನು ಇಲ್ಲಿಗೇ ಸ್ಟಾಪ್‌ ಮಾಡೋಣ ಎಂಬ ನಿರ್ಧಾರದಲ್ಲಿರುತ್ತಾರೆ. ಅದರ ಪರಿಣಾಮ ಏನು? ಏಕೆ ವಿದ್ಯಾರ್ಥಿಗಳು ಓದನ್ನು ಮುಂದುವರಿಸಬೇಕೆಂಬುದಕ್ಕೆ ಇಲ್ಲೊಂದು ಅನುಭವ ಕಥನವನ್ನು ನಿಮ್ಮ ಮುಂದಿಟ್ಟಿದ್ದೇವೆ…

Advertisement

ನನ್ನ ಬಾಲ್ಯವನ್ನು ವ್ಯರ್ಥ ಮಾಡ್ಕೊಂಡ್ನಲ್ಲ ಎಂದು ನೆನೆದರೆ ಈಗಲೂ “ಛೇ’ ಅಂತನ್ಸುತ್ತೆ. ವಿದ್ಯಾರ್ಥಿ ಜೀವನ ಒಂದು ಅದ್ಭುತ ಘಟ್ಟ. ಆದರೆ, ಬಾಲ್ಯದಲ್ಲಿ ನಾನು ಎಡವಿ ಬಿದ್ದಿದ್ದೆ! ನನ್ನ ಅರಿವಿಗೆ ತೋಚಿದಂತೆ ನಡೆದುಕೊಂಡು ಓದನ್ನು ಅರ್ಧಕ್ಕೇ ಬಿಟ್ಟೆ. ದೊಡ್ಡವರ ಮಾತಿಗೆ ಬೆಲೆ ಕೊಡದೇ, ಚಿಕ್ಕಪುಟ್ಟ ಆಸೆಗಳನ್ನು ತೀರಿಸಿಕೊಳ್ಳಲೆಂದು ಕೆಲಸಕ್ಕೆ ಸೇರಿಕೊಂಡೆ. ಒಂದು ದಿನ 10ನೇ ತರಗತಿಯ ಪರೀಕ್ಷೆಯನ್ನು ಮನಸ್ಸಿಲ್ಲದ ಮನಸ್ಸಿನಿಂದ ಮುಗಿಸಿಕೊಂಡು “ಅಬ್ಟಾ, ನನ್ನ ಪಾಲಿನ ಕರ್ಮ ಮುಗೀತು. ಇನ್ನು ನನ್ನ ದಾರಿಗೆ ಯಾರೂ ಅಡ್ಡ ಬರೋದಿಲ್ಲ’ ಎಂದು ಖುಷಿಯಾಗಿ ಮನೆಯತ್ತ ಹೊರಟೆ. ಮೊದಲಿಗೆ ಅಮ್ಮನ ಬಳಿ ಕುಳಿತು, ನನಗಿನ್ನು ಓದಲು ಇಷ್ಟವಿಲ್ಲ. ಇನ್ನೇನಿದ್ರೂ ಕೆಲಸಕ್ಕೆ ಸೇರಿ ದುಡ್ಡು ಮಾಡಬೇಕು ಅನ್ನೋದಷ್ಟೇ ನನ್ನ ಗುರಿ ಎಂಬ ವಿಷಯವನ್ನು ಮುಟ್ಟಿಸಿದೆ.

ಇದನ್ನು ಕೇಳಿ ಮನೆಯಲ್ಲಿ ನಾಲ್ಕೈದು ದಿನ ಬೇಸರ ಆವರಿಸಿತು. ಕೊನೆಗೆ ಹೆತ್ತವರು, ನನ್ನ ಮಾತಿಗೆ ಒಲ್ಲದ ಮನಸ್ಸಿನಿಂದ ಒಪ್ಪಿಗೆ ಕೊಟ್ಟರು. ಸದ್ಯ, ಮನೇಲಿ ಎಲ್ಲ ಒಪ್ಪಿಕೊಂಡ್ರಲ್ಲ… ಇಷ್ಟು ಸಾಕು ಎಂಬ ಖುಷಿ ನನಗೆ. ಮೊದಲ ಬಾರಿಗೆ ಕೆಲಸಕ್ಕೆಂದು ಹೊರಟೆ. ಆದರೆ, ಆಗ ನನಗೆ ತಿಳಿದಿರಲಿಲ್ಲ; 10ನೇ ತರಗತಿ ಓದಿದವರಿಗೆ ಸಿಗುವ ಕೆಲಸ ಅದಕ್ಕೆ ಸಮನಾಗಿಯೇ ಇರುತ್ತೆ ಎಂದು! ಕೆಲವು ದಿನಗಳ ನಂತರ ಹೋಟೆಲ್‌ನಲ್ಲಿ ಸಪ್ಲೆ„ಯರ್‌ ಆಗಿ ಸೇರಿದೆ. ಅಲ್ಲಿ ಎಲ್ಲ ರೀತಿ ಕನಿಷ್ಠ ಕೆಲಸಗಳನ್ನೂ ಮಾಡಿದ್ದೆ! ಕಷ್ಟವಾಗುತ್ತಿದ್ದರೂ ಮೊದಲ ಸಂಬಳ ಪಡೆಯುವ ಸಲುವಾಗಿ, ಕೆಲಸ ಮುಂದುವರಿಸಿದೆ. ಮೊದಲ ಸಂಬಳವಾಗಿ ಕೈಗೆ ಬಂದಿದ್ದು 2 ಸಾವಿರ ರೂಪಾಯಿ! ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ.

ದಿನಗಳು ಉರುಳಿದವು. ವರ್ಷಗಳು ಕಳೆದಂತೆ ಸ್ವಲ್ಪ ಬುದ್ಧಿಯೂ ಬರತೊಡಗಿತು. ಹೋಟೆಲ್‌ ಕೆಲಸಕ್ಕೆ ಬೇಸತ್ತು ಹೋದೆ. ಹೆತ್ತವರ ಮಾತಿಗೆ ಬೆಲೆಕೊಟ್ಟಿದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಆಗಾಗ್ಗೆ ಮನಸ್ಸು ಹೇಳುತ್ತಿದ್ದಾಗ ಕಣ್ಣಲ್ಲಿ ನೀರು ಚಿಮ್ಮುತ್ತಿತ್ತು. ಸ್ನೇಹಿತರೆಲ್ಲ ಪಿಯುಸಿ ಮುಗಿಸಿ, ಡಿಗ್ರೀ ಕಾಲೇಜಿನ ಮೆಟ್ಟಿಲೇರಿದರು. ರಜೆಯಲ್ಲಿ ಮನೆಗೆ ಹೋದಾಗ್ಲೆಲ್ಲ ನಾನು ಓದ್ಲಿಲ್ವಲ್ಲ ಎಂಬ ಬೇಸರ ನನ್ನ ಹೆಗಲೇರಿ ಹಿಂಸಿಸುತ್ತಿತ್ತು. 

ಕಡೆಗೊಮ್ಮೆ ಒಂದು ನಿರ್ಧಾರಕ್ಕೆ ಬಂದೇಬಿಟ್ಟೆ. ಏನಾದ್ರೂ ಸರಿ, ಪಿಯುಸಿ ಬರೆದು ಪಾಸಾಗ್ಲೆàಬೇಕೆಂದು ನಿರ್ಧರಿಸಿ ನಂತರ ನೇರವಾಗಿ ಪರೀಕ್ಷೆ ಬರೆದು ಪಾಸ್‌ ಆದೆ. ಆದರೂ ವಯಸ್ಸಾದ ಮೇಲೆ ಕಲಿತ ವಿದ್ಯೆ ಬಳಸಿಕೊಂಡು ಜೀವನದಲ್ಲಿ ಏನೂ ಸಾಧಿಸಲು ಸಾಧ್ಯವಿಲ್ಲವೆಂದು ನಿತ್ಯ ಮರುಗುತ್ತಿದ್ದೆ. ಕೆಲಸದ ಕಷ್ಟದ ದಿನಗಳನ್ನು ನೆನೆದು ಕಣ್ಣೀರಿಡುತ್ತಿದ್ದೆ.

Advertisement

ನಂತರ ಕಷ್ಟಪಟ್ಟು ಹೋಟೆಲ್‌ ಮ್ಯಾನೇಜ್‌ಮೆಂಟ್‌ ಕೋರ್ಸ್‌ ಮುಗಿಸಿದೆ. ಈಗ ಉತ್ತಮ ಹೋಟೆಲ್ಲೊಂದರಲ್ಲಿ ಮ್ಯಾನೇಜರ್‌ ಆಗಿರುವೆ. ಒಳ್ಳೆಯ ಸ್ಯಾಲರಿ ಕೈಸೇರುತ್ತಿದೆ. ನಾಲ್ಕು ಜನರ ಮುಂದೆ ನನ್ನ ಹುದ್ದೆ ಬಗ್ಗೆ ಹೇಳಿಕೊಳ್ಳಲು ಹೆಮ್ಮೆ ಆಗುತ್ತೆ. 
ಗೆಳೆಯರೇ, ಇಷ್ಟು ದಿನದ ಅನುಭವವನ್ನೇ ನೆಪ ಮಾಡಿಕೊಂಡು ಹೇಳುತ್ತಿದ್ದೇನೆ: ವಿದ್ಯಾರ್ಥಿ ಜೀವನ ಎನ್ನುವುದು ಒಂದು ಆಟವಲ್ಲ. ಅದು ಭವಿಷ್ಯ ರೂಪಿಸಿಕೊಳ್ಳಲು ಇರುವ ಹೆದ್ದಾರಿ. ಅಪಘಾತ ಆಗದಂತೆ, ಅಲ್ಲಿ ಮುಂದೆ ಸಾಗಬೇಕು!

ಅಭಿಜಿತ್‌ ಎಂ. ತೀರ್ಥಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next