ಮೈಸೂರು: ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆಯಿದ್ದು ಶೀಘ್ರವೇ ಉಪನ್ಯಾಸಕರ ನೇಮಕ ಮಾಡುವಂತೆ ಹಾಗೂ ಮೂಲ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿ ಯುವರಾಜ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಬುಧವಾರ ತರಗತಿ ಬಹಿಷ್ಕರಿಸಿ ಕಾಲೇಜು ಆವರಣದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ಕಾಲೇಜು ಆಡಳಿತ ಮಂಡಳಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಾಲೇಜು ಆರಂಭವಾಗಿ ಒಂದು ತಿಂಗಳಾದರೂ ಉಪನ್ಯಾಸಕರ ಕೊರತೆಯಿಂದ ತರಗತಿಗಳು ಸರಿಯಾಗಿ ನಡೆಯುತ್ತಿಲ್ಲ. ಪಠ್ಯಕ್ರಮ ಮುಗಿಯದೆ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಪ್ರತಿದಿನ ಕಾಲೇಜಿಗೆ ಬಂದು ತರಗತಿಗಳಿಲ್ಲದೆ ವಾಪಸ್ ತೆರಳುವಂತಾಗಿದೆ. ಅಲ್ಲದೆ ಅತಿಥಿ ಉಪನ್ಯಾಸಕರನ್ನು ನೇಮಿಸಿ ಸಿಲಬಸ್ ಮುಗಿಸುವ ಕೆಲಸವನ್ನೂ ಮಾಡುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ.
ಉಪನ್ಯಾಸಕರ ನೇಮಕಾತಿ ವಿಳಂಬ ಮಾಡಿದರೆ ಗುಣಮಟ್ಟದ ಶಿಕ್ಷಣ ದೊರೆಯುವುದಿಲ್ಲ. ಕೂಡಲೇ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು. ತರಗತಿಗಳು ಆರಂಭವಾಗಿ ಒಂದು ತಿಂಗಳ ಮೇಲಾಗಿದ್ದು, ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ಇನ್ನೂ ಆರಂಭವೇ ಆಗಿಲ್ಲ. ಕೇವಲ ತಾತ್ಕಾಲಿಕ ವೇಳಾಪಟ್ಟಿಯಂತೆ ತರಗತಿಗಳು ಜರುಗುತ್ತಿವೆ. ಅಲ್ಲದೇ ಶೌಚಾಲಯ ವ್ಯವಸ್ಥೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಸರಿಯಾಗಿಲ್ಲ.
ಈ ಬಗ್ಗೆ ಪ್ರಾಂಶುಪಾಲರ ಬಳಿ ಮನವಿ ಮಾಡಿದ್ದೇವೆ. ಆದರೆ, ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ಮೈಸೂರು ವಿವಿಗೆ ಸಂಬಂಧಿಸಿದ್ದು, ನಮ್ಮ ಕೈಯಲಿಲ್ಲ ಎಂದಿದ್ದಾರೆ. ಹೀಗಾಗಿ ನಮ್ಮ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ವಿದ್ಯಾರ್ಥಿಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಆಲಿಸಿದ ಪ್ರಾಂಶುಪಾಲ ರುದ್ರಯ್ಯ, ಶೀಘ್ರವೇ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಸದ್ಯ 15 ವಿಭಾಗಗಳಿಗೆ ಆದೇಶ ಪ್ರತಿ ತಂದಿದ್ದೇನೆ. ಕುಲಪತಿಗಳನ್ನು ಭೇಟಿ ಮಾಡಿ ಈ ಸಂಬಂಧ ಮಾತುಕತೆ ನಡೆಸುತ್ತೇನೆ. ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಾವು ಶ್ರಮಿಸುತ್ತಿದ್ದೇವೆ. ಶೀಘ್ರವೇ ಎಲ್ಲಾ ವಿಭಾಗಗಳಿಗೂ ಉಪನ್ಯಾಸಕರ ನೇಮಕ ಪತ್ರ ತರಲಾಗುವುದು. ಕಾಯಂ ಉಪನ್ಯಾಸಕರು ನೇಮಕವಾದರೆ ಈ ಸಮಸ್ಯೆ ಉದ್ಭವಿಸುವುದಿಲ್ಲ ಎಂದರು. ಪ್ರತಿಭಟನೆಯಲ್ಲಿ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.