Advertisement

‘ಸ್ವರ ಲಯ’ಪಿಟೀಲು ಶಿಬಿರ

02:24 PM Feb 18, 2018 | |

ಮಹಾನಗರ: ಶಾಸ್ತ್ರೀಯ ಸಂಗೀತ ಕ್ಷೇತ್ರವು ವಿಶಾಲ ವ್ಯಾಪ್ತಿಯನ್ನು ಹೊಂದಿದ್ದು, ನಮ್ಮ ಜೀವನದ ಕಾಲಾವಧಿಯಲ್ಲಿ ಅದನ್ನು ಕಲಿತು ಮುಗಿಸಲು ಸಾಧ್ಯವಾಗದು ಎಂದು ವಿಧಾನ ಪರಿಷತ್‌ನ ವಿಪಕ್ಷ ನಾಯಕ ಕ್ಯಾ| ಗಣೇಶ್‌ ಕಾರ್ಣಿಕ್‌ ಅಭಿಪ್ರಾಯಪಟ್ಟರು. ಅವರು ಕದ್ರಿಕಂಬಳದ ಪ್ರಭಾಚಂದ್ರಾ ಮಯ್ಯ ಅವರ ಮನೆ ವಠಾರದಲ್ಲಿ ಇತ್ತೀಚೆಗೆ ನಡೆದ 5ನೇ ‘ಸ್ವರಾಲಯ’ ಪಿಟೀಲು ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.

Advertisement

ಶಾಸ್ತ್ರೀಯ ಸಂಗೀತಕ್ಕೆ ವೈಜ್ಞಾನಿಕ ಹಿನ್ನೆಲೆ ಇದೆ. ಪೂರ್ವಜರು ಪ್ರಕೃತಿಯಲ್ಲಿದ್ದ ಶಬ್ದಗಳನ್ನು ಗಮನಿಸಿ, ಮನುಷ್ಯನ ಮನಸ್ಸಿನ ಮೇಲೆ ಬೀರುವ ಪ್ರಭಾವವನ್ನು ಸಂಶೋಧನೆ ಮಾಡಿ ಅದಕ್ಕೆ ಒಂದು ಚೌಕ್ಕಟ್ಟನ್ನು ನೀಡುವ ಮೂಲಕ ಶಾಸ್ತ್ರೀಯ ಸಂಗೀತ ಹುಟ್ಟಿಕೊಂಡಿದೆ. ಈ ಸಂಗೀತದ ಹಿಂದೆ ನಮ್ಮ ಪೂರ್ವಜರ ಸಾಧನೆ ಇದೆ. ಶಾಸ್ತ್ರೀಯ ಸಂಗೀತ ದೇವರ ಜತೆಗೆ ನೇರ ಸಂಬಂಧವನ್ನು ಕಲ್ಪಿಸಿಕೊಡುತ್ತದೆ ಎಂದರು.

ಶಾಸ್ತ್ರೀಯ ಸಂಗೀತ ಕಲಿಯುವುದು ಸುಲಭವಲ್ಲ. 10- 15 ವರ್ಷಗಳ ಸತತ ಅಭ್ಯಾಸದ ಬಳಿಕ ಒಬ್ಬ ಕಛೇರಿ ಕೊಡಲು ತಯಾರಾಗುತ್ತಾನೆ. ಆದರೆ ಇಂದಿನ ‘ರಿಯಾಲಿಟಿ ಶೋ’ಗಳಲ್ಲಿ ಕೆಲವರು ಸಣ್ಣ ಅವಧಿಯಲ್ಲೇ ಹೆಸರು ಗಳಿಸುತ್ತಾರೆ. ನಾವು ತಾತ್ಕಾಲಿಕ ಸುಖಕ್ಕಾಗಿ ಶಾಶ್ವತವಾದುದನ್ನು ಮರೆತು ಬಿಡುತ್ತೇವೆ ಎಂದರು.

ಸಂಗೀತ ಆಸಕ್ತಿ ಒಳ್ಳೆಯದು
ವಿದ್ವಾನ್‌ ಉಡುಪಿ ಗೋಪಾಲಕೃಷ್ಣ ಅವರು, ವಿದ್ಯಾರ್ಥಿಗಳು ಈಗಲೂ ಸಂಗೀತದ ಬಗ್ಗೆ ಆಸಕ್ತಿ ತೋರಿಸುತ್ತಿರುವುದು ಖುಷಿಯ ಸಂಗತಿ ಎಂದರು. ಆದರೆ ಸಂಗೀತ ಕಲಿಯುವುದರ ಉದ್ದೇಶ ಹೆಸರು ಪಡೆಯುವುದು ಆಗಬಾರದು ಎಂದರು. ಬ್ಯೂಟಿ ವಾಲ್‌ಸ್ಪಾಟ್‌ ಸಿ.ಇ.ಒ. ವಿಶ್ವಾಸ್‌ ಕೃಷ್ಣ ಮಾತನಾಡಿ, ಈ ಶಿಬಿರವು ವಿದ್ವಾನ್‌ ವಿಟ್ಠಲ ರಾಮಮೂರ್ತಿ ಹಾಗೂ ವಿದ್ವಾನ್‌ ಯತಿರಾಜ್‌ ಆಚಾರ್ಯ ಅವರ ಮಾರ್ಗ ದರ್ಶನದಲ್ಲಿ ನಡೆಯುತ್ತಿದೆ ಎಂದರು.

ಸಂವಾದ
ವಿದ್ವಾನ್‌ ಗೋಪಾಲಕೃಷ್ಣ ಅವರು ಬೇಸಿಕ್‌ ಟ್ರೈನಿಂಗ್‌ ನೀಡಿದರು. ಬಳಿಕ ಅವರೊಡನೆ ಸಂವಾದ ನಡೆಯಿತು. ವಿದ್ವಾನ್‌ ಯತಿರಾಜ್‌ ಆಚಾರ್ಯ ಅವರು ಸಂಗೀತ ಕಛೇರಿ ನಡೆಸಿಕೊಟ್ಟರು. ವಿದ್ವಾನ್‌ ಪನ್ನಗ ಶರ್ಮನ್‌ ಮೃದಂಗದಲ್ಲಿ ಸಾಥ್‌ ನೀಡಿದರು. ವಿಶ್ವಾಸ್‌ ಕೃಷ್ಣ ಪಿಟೀಲಿನಲ್ಲಿ ಸಹಕರಿಸಿದರು. ವಿದ್ವಾನ್‌ ಪ್ರಭಾತ್‌, ಜಯಲಕ್ಷ್ಮೀ ಭಟ್‌, ವೀಣಾ ವಿದ್ವಾನ್‌ ಗೋಪಾಲ್‌ ಮುದ್ಗಲ್‌, ಬ್ಯೂಟಿವಾಲ್‌ ಸ್ಪಾಟ್‌ ಎಂ.ಡಿ. ವೆಂಕಟೇಶ್‌ ಭಟ್‌, ಪ್ರಭಾಚಂದ್ರ ಮಯ್ಯ, ಕೃಷ್ಣರಾಜ್‌ ಮಯ್ಯ ಮತ್ತು ವೆಂಕಟೇಶ್‌ ಮಯ್ಯ ಉಪಸ್ಥಿತರಿದ್ದರು. 

Advertisement

ಮೆದುಳು ಚುರುಕಾಗುವುದು
ಸಂಗೀತ ಕಲಿಯುವವರ ಮೆದುಳಿನ ಗಾತ್ರ ದೊಡ್ಡದಾಗಿರುತ್ತದೆ ಎಂದು ಎಫ್‌ಎಂಆರ್‌ಐ ಸ್ಕ್ಯಾನ್‌ಗಳು ಸಾಬೀತುಗೊಳಿಸಿವೆ. ಸಂಗೀತದಲ್ಲಿರುವ ಭಾವ, ಲಯ ಮತ್ತು ತಾಳಗಳ ವಿಚಾರಗಳು ಮೆದುಳನ್ನು ಚುರುಕುಗೊಳಿಸುತ್ತದೆ ಎಂದು ಹೇಳಿದರು. ಕಲೆ ಮತ್ತು ಸಂಗೀತ ಕಳೆದ 2 ಲಕ್ಷ ವರ್ಷಗಳ ಹಿಂದೆಯೇ ಮನುಷ್ಯನ ಜೀವನದ ಭಾಗವಾಗಿತ್ತು. ಸಂಗೀತವನ್ನು ನಮ್ಮ ಮೆದುಳು ಮತ್ತು ಶಾರೀರಿಕ ಸಮತೋಲನಕ್ಕಾಗಿ ಕಲಿಯಬೇಕು; ತೋರಿಕೆಗೆ ಕಲಿಯುವುದು ಆಗಬಾರದು.
– ಡಾ| ಶ್ರೀನಿವಾಸ್‌ ಕಕ್ಕಿಲ್ಲಾಯ, ಹಿರಿಯ ವೈದ್ಯ

Advertisement

Udayavani is now on Telegram. Click here to join our channel and stay updated with the latest news.

Next