Advertisement

ಸಂಪತ್ತಿನ ಆಧಾರದ ಮೇಲೆ ಮಠಗಳನ್ನು ವರ್ಗೀಕರಿಸಿ

12:37 PM Feb 10, 2018 | Team Udayavani |

ಮೈಸೂರು: ಶ್ರೀಮಂತ ಮಠಗಳಲ್ಲಿ ಸಂಗ್ರಹವಾಗುತ್ತಿರುವ ಕಪ್ಪು ಹಣದ ಪ್ರಭಾವ ತಡೆಗಟ್ಟಲು, ಮುಜರಾಯಿ ದೇವಸ್ಥಾನಗಳಂತೆ ಮಠಗಳನ್ನೂ ಅವುಗಳ ಆದಾಯದ ಮೇಲೆ ವರ್ಗೀಕರಿಸಬೇಕು ಎಂದು ನಿಡುಮಾಮಿಡಿ ಮಹಾ ಸಂಸ್ಥಾನ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಆಗ್ರಹಿಸಿದರು.

Advertisement

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರ್ಮಿಕ-ಶಿಕ್ಷಣ ಕ್ಷೇತ್ರ ಒಂದಾಗಿ ವ್ಯವಸ್ಥೆ ಭ್ರಷ್ಠಾಚಾರ ಮುಖೀಯಾಗಿದೆ. ಇದರಿಂದ ಧಾರ್ಮಿಕ ಕ್ಷೇತ್ರವೂ ಹೊರತಾಗಿಲ್ಲ. ವೃತ್ತಿಪರ ಶಿಕ್ಷಣ ಸಂಸ್ಥೆ ನಡೆಸುವ ಕೆಲ ಮಠಗಳು, ರಾಜಕಾರಣಿಗಳು, ಅಧಿಕಾರಿಗಳಲ್ಲಿ ಡೊನೇಷನ್‌ ಮಾಫಿಯಾದಿಂದ ಕಪ್ಪು ಹಣ ಸಂಗ್ರಹವಾಗುತ್ತಿದೆ.

ಹೀಗಾಗಿ ಮುಜರಾಯಿ ದೇವಸ್ಥಾನಗಳನ್ನು ಅವುಗಳ ಆದಾಯದ ಮೇಲೆ ಎ,ಬಿ,ಸಿ ಎಂದು ವರ್ಗೀಕರಿಸಿರುವಂತೆ ಮಠಗಳನ್ನೂ ಅವುಗಳ ಆದಾಯದ ಮೇಲೆ ವರ್ಗೀಕರಿಸಬೇಕು. ಕೆಲ ಮಠಗಳಲ್ಲಿ ಸಂಪತ್ತಿನ ದುರುಪಯೋಗ ಆಗುತ್ತಿದೆ. ಇದನ್ನು ತಡೆಗಟ್ಟಬೇಕು. ಜತೆಗೆ ಕೆಲ ಮಠಾಧೀಶರು ವಂಶಪಾರಂಪರ್ಯಕ್ಕೆ ಮನ್ನಣೆ ನೀಡುತ್ತಾ,

ತಮ್ಮ ನಂತರ ಅಣ್ಣನ ಮಕ್ಕಳು, ತಮ್ಮನ ಮಕ್ಕಳನ್ನು ಉತ್ತರಾಧಿಕಾರಿಗಳನ್ನಾಗಿ ಮಾಡಿ ತಮ್ಮ ಕುಟುಂಬದ ಹಿಡಿತದಲ್ಲೇ ಮಠಗಳನ್ನು ಹಿಡಿದಿಟ್ಟುಕೊಳ್ಳುವ ಕೆಲಸಗಳಾಗುತ್ತಿದೆ. ಸಮಾಜದ ಸ್ವತ್ತು, ಯಾವುದೇ ಒಂದು ಕುಟುಂಬದ ಸ್ವತ್ತಾಗದಂತೆ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಅನುಗುಣವಾಗಿ ಮಾರ್ಪಾಡಾಗಬೇಕು ಎಂದು ಹೇಳಿದರು.

ತಪ್ಪು ಕಲ್ಪನೆ: ಮಠಗಳನ್ನು ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡಿಸುವುದು ಎಂದರೆ, ಸರ್ಕಾರ ಮಠಗಳನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವುದು, ಇಲ್ಲವೇ ಮಠಗಳ ಮೇಲೆ ನಿಯಂತ್ರಣ ಸಾಧಿಸುವುದು ಎಂದು ಅರ್ಥವಲ್ಲ. ಮಠಗಳಲ್ಲಿ ಸಾರ್ವಜನಿಕ ಹಣ ದುರ್ಬಳಕೆ ಆಗುತ್ತಿದ್ದರೆ, ಸರ್ಕಾರ ಮಧ್ಯಪ್ರವೇಶಿಸಿ ನ್ಯಾಯ ಒದಗಿಸಲೇಬೇಕು.

Advertisement

ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಮಠಗಳನ್ನು ರಾಷ್ಟ್ರೀಕರಣ ಮಾಡುತ್ತಾರೆ ಎಂದು ಅಪಪ್ರಚಾರವಾಗಿತ್ತು. ಚುನಾವಣೆ ಸಂದರ್ಭದಲ್ಲಿ ಸಮಾಜಕ್ಕೆ ತಪ್ಪು ಮಾಹಿತಿ ಹೋಗುತ್ತೆ ಎಂಬ ಕಾರಣಕ್ಕೆ ಮುಖ್ಯಮಂತ್ರಿಯವರು ತಾತ್ಕಾಲಿಕವಾಗಿ ಸುತ್ತೋಲೆಯನ್ನು ಹಿಂದಕ್ಕೆ ಪಡೆದಿದ್ದಾರೆ.

ಈ ವಿಷಯದಲ್ಲಿ ನ್ಯಾಯಾಲಯದ ಆದೇಶ ಇರುವುದರಿಂದ ಈ ಸರ್ಕಾರ ಅಲ್ಲದಿದ್ದರೂ ಮುಂದೆ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬಂದರೂ ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡಲೇಬೇಕು. ಕಾನೂನಿಗೆ ಯಾರೂ ಅತೀತರಲ್ಲ. ಆದರೆ, ಹಿರಿಯ ಯತಿಗಳಾದ ಪೇಜಾವರರು ಭಾವುಕರಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಪೇಜಾವರರು ಮಠಬಿಟ್ಟು ಹೊರಬರುವ ಸ್ಥಿತಿ ನಿರ್ಮಾಣವಾಗುವುದಿಲ್ಲ ಎಂದರು.

ಅಪಪ್ರಚಾರದಿಂದ ತಪ್ಪು ಮಾಹಿತಿ: ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರೂ ಸಹ ಈ ವಿಷಯದಲ್ಲಿ ಕೋಪ ವ್ಯಕ್ತಪಡಿಸಿದ್ದಾರೆ. ಅನೇಕ ಮಠಾಧೀಶರೂ ಸರ್ಕಾರದ ಈ ನಡೆಯನ್ನು ವಿರೋಧಿಸಿರುವುದು ತಪ್ಪುಗ್ರಹಿಕೆಯಿಂದ.

ಪ್ರತಿಪಕ್ಷಗಳ ಅಪಪ್ರಚಾರದಿಂದ ಸಮಾಜಕ್ಕೆ ತಪ್ಪು ಮಾಹಿತಿ ಹೋಗಿದೆ. ಮಠಾಧೀಶರು ಬೀದಿಗಿಳಿಯುವ ಪ್ರಶ್ನೆ ಬರಲ್ಲ. ಮಠಗಳನ್ನು ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡಿಬೇಕೇ? ಬೇಡವೇ? ಎಂಬುದನ್ನು ಮಠಾಧೀಶರುಗಳು ವೈಯಕ್ತಿಕವಾಗಿ ಇಲಾಖೆಗೆ ಗುಪ್ತವಾಗಿ ಪತ್ರ ಬರೆದು ತಮ್ಮ ಅಭಿಪ್ರಾಯ ತಿಳಿಸಲಿ ಎಂದು ಆಗ್ರಹಿಸಿದರು.

ಏಕಮುಖ ಸುತ್ತೋಲೆ ಹೊರಡಿಸಿ: ಸರ್ಕಾರದ ಅನುದಾನ ಬೇಕು, ಸರ್ಕಾರದ ಜಮೀನು ಬೇಕು ಎನ್ನುವ ಮಠಗಳು, ಸರ್ಕಾರದ ನಿಯಮಾವಳಿಗೆ ಒಳಪಡುವುದಿಲ್ಲ ಎನ್ನುವುದು ಸರಿಯಲ್ಲ. ಮಠ, ಮಂದಿರ ಮಾತ್ರವಲ್ಲ, ಚರ್ಚ್‌, ಮಸೀದಿ, ಗುರುದ್ವಾರಗಳೂ ಸರ್ಕಾರದ ವ್ಯಾಪ್ತಿಗೆ ಬರಬೇಕು.

ಆದರೆ, ಹಿಂದೂ ಧಾರ್ಮಿಕ ದತ್ತಿ ಕಾಯ್ದೆಯಡಿ ಚರ್ಚ್‌, ಮಸೀದಿಗಳನ್ನು ತರಲಾಗಲ್ಲ. ಹೀಗಾಗಿ ಸರ್ಕಾರ ಏಕಮುಖವಾಗಿ ಸುತ್ತೋಲೆ ಹೊರಡಿಸದೆ, ಸಮಗ್ರವಾಗಿ ಮಠ, ಮಂದಿರ, ಚರ್ಚ್‌, ಮಸೀದಿ, ಗುರುದ್ವಾರ ಎಲ್ಲವನ್ನೂ ಸೇರಿಸಿ ಸುತ್ತೋಲೆ ಹೊರಡಿಸಬೇಕು. ಇದಕ್ಕೆ ಯಾವ ಮಠಾಧೀಶರೂ ಆತಂಕಪಡಬೇಕಿಲ್ಲ.

ಜತೆಗೆ ಮಠಾಧೀಶರುಗಳು ಪ್ರತಿಪಕ್ಷಗಳ ಅಪಪ್ರಚಾರಕ್ಕೂ ಕಿವಿಗೊಡಬೇಡಿ ಎಂದು ಹೇಳಿದರು. ಪ್ರಗತಿಪರ ಮಠಾಧೀಶರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಜಾnನಪ್ರಕಾಶ ಸ್ವಾಮೀಜಿ, ಬಸವಲಿಂಗಮೂರ್ತಿ ಶರಣರು, ಬಸವನಾಗಿದೇವರು ಸುದ್ದಿಗೋಷ್ಠಿಯಲ್ಲಿದ್ದರು.

ಧರ್ಮ ಸಂಸದ್‌ ಒಪ್ಪಲ್ಲ
ಧರ್ಮ ಸಂಸದ್‌ ಅನ್ನುವುದೇ ತಪ್ಪು. ಹಾಗೆನ್ನುವುದು ಸಂಸತ್ತನ್ನೇ ನಿರ್ಲಕ್ಷ್ಯ ಮಾಡಿದಂತೆ. 60ರ ದಶಕದಿಂದ ಧರ್ಮಸಂಸದ್‌ ಇದೆ. ಯಾವುದೋ ಒಂದು ಗುಂಪಿಗೆ, ಪಕ್ಷಕ್ಕೆ ಸೀಮಿತವಾಗಿರುವ ಧರ್ಮಸಂಸದ್‌ ಅನ್ನು ಇಡೀ ಭಾರತೀಯರು ಒಪ್ಪಬೇಕಿಲ್ಲ.
-ವೀರಭದ್ರ ಚನ್ನಮಲ್ಲ ಸ್ವಾಮೀಜಿ 

Advertisement

Udayavani is now on Telegram. Click here to join our channel and stay updated with the latest news.

Next