ಹೊಸದಿಲ್ಲಿ: 8 ನೇ ತರಗತಿಯ ವಿದ್ಯಾರ್ಥಿಯೊಬ್ಬನಿಗೆ ಆತನ ಸಹಪಾಠಿಗಳು ಅಮಾನುಷ ಹಲ್ಲೆ ನಡೆಸಿದ್ದು,ಈ ವೇಳೆ ಒಬ್ಬಾತ ಖಾಸಗಿ ಭಾಗಗಳಿಗೆ ಮರದ ಕೋಲನ್ನು ತೂರಿಸಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಬಾಲಾಪರಾಧಿಯನ್ನು ಬಂಧಿಸಲಾಗಿದೆ.
14 ವರ್ಷದ ವಿದ್ಯಾರ್ಥಿಯು ತನ್ನ ಶಾಲಾ ಸಹಪಾಠಿಗಳೊಂದಿಗೆ ಜಗಳವಾಡಿದ್ದು, ನಾಲ್ವರು ಅವರನ್ನು ಗುಂಪುಗೂಡಿ ಅಮಾನುಷವಾಗಿ ಥಳಿಸಿದ್ದಾರೆ. ಎಫ್‌ಐಆರ್ ಪ್ರಕಾರ, ಘಟನೆ ಮಾರ್ಚ್ 18 ರಂದು ನಡೆದಿದೆ.
ಪೊಲೀಸರು ಮತ್ತು ಶಾಲಾ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ವಿದ್ಯಾರ್ಥಿಯ ಕುಟುಂಬದವರು ಆರೋಪಿಸಿದ್ದು, ಸಹಕಾರದ ಕೊರತೆ ಇದೆ ಎಂದು ಆರೋಪಿಸಿದ್ದಾರೆ. ಶಾಲೆಯ ಪ್ರಾಂಶುಪಾಲರು ಪ್ರವೇಶ ನಿರಾಕರಿಸಿದ್ದಾರೆ ಎಂದು ಅವರು ದೂರಿದ್ದಾರೆ.
ದೂರಿನ ಪ್ರಕಾರ, ವಿದ್ಯಾರ್ಥಿ ಮಾರ್ಚ್ 13 ರಂದು ತನ್ನ ಸಹಪಾಠಿಯೊಂದಿಗೆ ಜಗಳವಾಡಿದ್ದು, ಮಾರ್ಚ್ 18 ರಂದು ಸೇಡಿನಿಂದ ಹಲ್ಲೆ ನಡೆಸಲಾಗಿದೆ. ಪ್ರತೀಕಾರದ ಭಯದಿಂದ ಸಂತ್ರಸ್ತ ಮೊದಲು ಘಟನೆಯ ಬಗ್ಗೆ ಯಾರಿಗೂ ಹೇಳಲಿಲ್ಲ. ಘಟನೆಯನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಿ, ಅದೇ ಶಾಲೆಯಲ್ಲಿ ಓದುತ್ತಿರುವ ಸಹೋದರಿ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಬೆದರಿಸಿದ್ದರು ಎಂದು ವಿದ್ಯಾರ್ಥಿ ಹೇಳಿದ್ದಾನೆ.
ಮಾರ್ಚ್ 20 ರಂದು ತೀವ್ರ ಹೊಟ್ಟೆ ನೋವು ಎಂದು ಹೇಳಿದ ಬಳಿಕ ಹತ್ತಿರದ ವೈದ್ಯರಲ್ಲಿಗೆ ಕರೆದೊಯ್ಯಲಾಗಿದ್ದು, ಪರಿಸ್ಥಿತಿ ಸುಧಾರಿಸದ ಕಾರಣ ಮಾರ್ಚ್ 28 ರಂದು ಮೇಲ್ದರ್ಜೆಯ ಆಸ್ಪತ್ರೆಗೆ ಕರೆದೊಯ್ದು ಆಪರೇಷನ್ ಮಾಡಬೇಕಾಯಿತು. ಏಪ್ರಿಲ್ 2 ರಂದು ಹುಡುಗನಿಗೆ ಪ್ರಜ್ಞೆ ಬಂದಾಗ, ಘಟನೆಯನ್ನು ವಿವರಿಸಿದ್ದು, ನಂತರ ಪೊಲೀಸ್ ದೂರು ದಾಖಲಿಸಲಾಗಿದೆ.
ಗುದದ್ವಾರದ ಪ್ರದೇಶದಲ್ಲಿ ನಿರ್ದಿಷ್ಟವಾಗಿ ಮರದ ಕೋಲನ್ನು ತೂರಿಸುವ ಮೂಲಕ ತೀವ್ರವಾದ ಗಾಯವನ್ನು ಮಾಡಲಾಗಿದೆ ಎಂದು ವೈದ್ಯಕೀಯ ವರದಿಯು ಬಹಿರಂಗಪಡಿಸಿದೆ.