ಮಸ್ಕಿ: ಗುರುವಾರ ರಾತ್ರಿ ಎರಡು ಗುಂಪುಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಗುಂಪು ಘರ್ಷಣೆಯಾಗಿದ್ದು, ಮಸ್ಕಿ ಪಟ್ಟಣದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ಪಟ್ಟಣದ ಖಲೀಲ್ ವೃತ್ತದಲ್ಲಿ ಇಬ್ಬರು ಯುವಕರ ಮಧ್ಯೆ ಉಂಟಾದ ವಾಗ್ವಾದ ವಿಕೋಪಕ್ಕೆ ತಿರುಗಿದೆ. ಮಾತಿಗೆ ಮಾತು ಬೆಳೆದು ಎರಡು ಗುಂಪುಗಳಾಗಿ ಘರ್ಷಣೆಗೆ ತಿರುಗಿದೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಘಟನೆ ನಿಯಂತ್ರಿಸಲು ಯತ್ನಿಸಿದರು.
ಇದನ್ನೂ ಓದಿ:ಭಾರಿ ಮಳೆಗೆ ಕೊಚ್ಚಿಹೋದ ಸೋಗಲಿ-ಮೂಕಿಹಾಳ ಹಳ್ಳದ ಸೇತುವೆ: ಸಂಪರ್ಕ ಕಡಿತ
ಆದರೂ ಎರಡು ಗುಂಪುಗಳ ನಡುವಿನ ಸಂಘರ್ಷ ವಿಕೋಪಕ್ಕೆ ತಿರುಗಿದ್ದರಿಂದ ಘಟನೆ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ರಾತ್ರಿ 11 ಗಂಟೆ ಸುಮಾರಿಗೆ ಪೊಲೀಸ್ ಠಾಣೆ ಮುಂದೆ ನೂರಾರು ಜನ ಸೇರಿದ್ದರು. 3, 4 ನೇ ವಾರ್ಡನಲ್ಲೂ ಇದೇ ವಿಚಾರಕ್ಕೆ ಗಲಾಟೆ ನಡೆದಿದ್ದು, ರಾತ್ರಿಯೇ ಲಿಂಗಸುಗೂರು, ರಾಯಚೂರು, ದೇವದುರ್ಗ ಸೇರಿ ನಾನಾ ಕಡೆಯಿಂದ ಪೊಲೀಸ್ ಅಧಿಕಾರಿಗಳು ಹಾಗು ಕೆಎಸ್ಆರ್ ಪಿ ತುಕಡಿಯ ಸಿಬ್ಬಂದಿಗಳು ಆಗಮಿಸಿ ಘಟನೆ ನಿಯಂತ್ರಿಸಿದರು.
ಬೆಳಗ್ಗೆಯೂ ಪರಿಸರ ಬೂದಿ ಮುಚ್ಚಿದ ಕೆಂಡದಂತಿದ್ದು, ಮುಂಜಾಗೃತ ಕ್ರಮವಾಗಿ ಹಳೆ ಬಸ್ ನಿಲ್ದಾಣ, ಗಚ್ಚಿನಮಠ, ಕನಕವೃತ್ತ ಸೇರಿ ನಾನಾ ಕಡೆಗಳಲ್ಲಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.