Advertisement

ಕ್ಲಾಸ್‌-ಮಾಸ್‌ ಸಂಗಮದ ಮಾಸ್ತಿ

06:00 AM May 18, 2018 | Team Udayavani |

ಸದ್ಯಕ್ಕೆ ಬರಹಗಾರನಾಗಿಯೇ ಇರುತ್ತೇನೆ ಪೇಪರ್‌ ವರ್ಕ್‌ ಚೆನ್ನಾಗಿ ಆದರೆ ಸಿನಿಮಾವೂ ಚೆನ್ನಾಗಿ ಮೂಡಿಬರುತ್ತದೆ ಎಂಬ ಮಾತಿದೆ. ಸಿನಿಮಂದಿಯ ಭಾಷೆಯಲ್ಲಿ ಪೇಪರ್‌ ವರ್ಕ್‌ ಅಂದರೆ ಸಿನಿಮಾದ ಕಥೆ, ಚಿತ್ರಕಥೆ, ಸಂಭಾಷಣೆ. ಯಾವುದೇ ಒಂದು ಸಿನಿಮಾ ಆರಂಭವಾಗುವ ಮುನ್ನ ಹೆಚ್ಚು ತಲೆಕೆಡಿಸಿಕೊಳ್ಳುವ ಕೆಲಸವಿದು. 

Advertisement

ಕಥೆಗೊಂದು ಪೂರ್ಣ ರೂಪ ಬರೋದು ಇಲ್ಲೇ. ಆ ನಂತರ ನೀವು ಚಿತ್ರೀಕರಣದಲ್ಲಿ ಏನು ಬೇಕಾದರೂ ಆಟವಾಡಬಹುದು. ಆದರೆ, ಚಿತ್ರೀಕರಣಕ್ಕೆ ಹೊರಡುವ ಮೊದಲು ಬರವಣಿಗೆ ಚೆನ್ನಾಗಿ ಮೂಡಿಬರಬೇಕು. ಅದೇ ಕಾರಣದಿಂದ ಚಿತ್ರವೊಂದಕ್ಕೆ ಒಳ್ಳೆಯ ಬರಹಗಾರ ಕೂಡಾ ಮುಖ್ಯವಾಗುತ್ತದೆ. ಸದ್ಯ ಕನ್ನಡ ಚಿತ್ರರಂಗದ ಬರಹಗಾರರ ಸಾಲಿನಲ್ಲಿ ಗುರುತಿಸಿಕೊಳ್ಳುತ್ತಿರುವ ಒಂದು ಹೆಸರೆಂದರೆ ಅದು ಮಾಸ್ತಿ. ಇನ್ನು ಮುಂದುವರಿದು ಹೇಳಬೇಕೆಂದರೆ ಮಾಸ್ತಿ ಮಂಜು. ಸದ್ಯ ಶತದಿನದತ್ತ ದಾಪುಗಾಲು ಹಾಕುತ್ತಿರುವ “ಟಗರು’ ಚಿತ್ರದ ಸಂಭಾಷಣೆ ಇದೇ ಮಾಸ್ತಿ ಅವರದ್ದು. ಆ ಸಿನಿಮಾದಲ್ಲಿ ಮಾಸ್ತಿ ಕೇವಲ ಸಂಭಾಷಣೆಕಾರರಾಗಿ ಗುರುತಿಸಿಕೊಂಡಿಲ್ಲ, ಇಡೀ ಸಿನಿಮಾದ ಹಿನ್ನೆಲೆಯಲ್ಲಿ ನಿಂತು ಕೆಲಸ ಮಾಡಿದ್ದಾರೆ. 

“ಟಗರು’ ಚಿತ್ರ ಹಿಟ್‌ ಆಗುವ ಮೂಲಕ ಮಾಸ್ತಿ ಅವರಿಗೂ ಬೇಡಿಕೆ ಬಂದಿದೆ. ಮಾಸ್ತಿ, ಸೂರಿ ಹಾಗೂ ಭಟ್ಟರ ತಂಡದಲ್ಲಿ ಗುರುತಿಸಿಕೊಂಡವರು. ಆರಂಭದಿಂದಲೂ ಅವರ ಜೊತೆಯೇ, ಅವರ ಸಿನಿಮಾಗಳಲ್ಲಿ ಕೆಲಸ ಮಾಡುತ್ತಾ ಬರಹವನ್ನು ಮತ್ತಷ್ಟು ಪಕ್ವ ಮಾಡಿಕೊಂಡರು. “ಭಟ್ರಾ ಮತ್ತು
ಸೂರಿ ಜೊತೆ ಸೇರಿ ಸಾಕಷ್ಟು ಹೊಸ ಹೊಸ ವಿಷಯಗಳನ್ನು ಕಲಿತೆ. ಅವರ ಜೊತೆ ದಿನಕ್ಕೆರಡು ಗಂಟೆ ಸಮಯ ಕಳೆದರೂ ಅಲ್ಲಿ ಹಲವು ಅಂಶಗಳು ಬಂದು ಹೋಗುತ್ತವೆ. ಅವರು ಕಥೆ ಕಟ್ಟುವ ರೀತಿ, ಅವರ ಸಿನಿಮಾ ಶೈಲಿಯನ್ನು ಕಲಿಯಬಹುದು. ಅವರಿಬ್ಬರ ಮತ್ತೂಂದು ವಿಶೇಷತೆ ಎಂದರೆ ಅವರಿಬ್ಬರು ಕಥೆ ಮಾಡಿಕೊಂಡು ಬರಲ್ಲ. ದಿನನಿತ್ಯದ ಅಂಶಗಳನ್ನಿಟ್ಟುಕೊಂಡೇ ಸಿನಿಮಾ ಮಾಡುತ್ತಾರೆ.

ಈ ತರಹ ಆದಾಗ ದೃಶ್ಯಗಳನ್ನು ಕಟ್ಟೋದು ಒಬ್ಬ ಬರಹಗಾರನಿಗೆ ತುಂಬಾ ಸವಾಲಿನ ಕೆಲಸವಾಗಿರುತ್ತದೆ. ಎಲ್ಲೂ ಬಂದಿರದಂತಹ ದೃಶ್ಯಗಳನ್ನು ಬರೆಯಬೇಕಾಗುತ್ತದೆ. ಈ ವಿಚಾರದಲ್ಲಿ ಅವರಿಬ್ಬರ ಜೊತೆ ಸೇರಿ ಸಾಕಷ್ಟು ಪಳಗಿದ್ದೇನೆ. ಅವರಿಬ್ಬರ ಜೊತೆ ಕೆಲಸ ಮಾಡಿರೋದು ನನ್ನ
ಕೆರಿಯರ್‌ಗೆ ದೊಡ್ಡ ಪ್ಲಸ್‌. ಅದಕ್ಕೆ ಕಾರಣ ಭಟ್ರಾ ಕ್ಲಾಸ್‌ ಆದರೆ, ಸೂರಿ ಮಾಸ್‌. ಈ ಎರಡು ಜಾನರ್‌ ನಿರ್ದೇಶಕರೊಂದಿಗೆ ಸೇರಿಕೊಂಡು ಸಾಕಷ್ಟು ಹೊಸ ವಿಷಯ ಕಲಿಸಿದ್ದೇನೆ’ ಎನ್ನುತ್ತಾರೆ ಮಾಸ್ತಿ.

ಬರಹಗಾರರಿಗೆ ಇರುವ ಸವಾಲೆಂದರೆ ಒಬ್ಬೊಬ್ಬ ನಟನ ಮ್ಯಾನರಿಸಂ, ಇಮೇಜ್‌, ಬಿಲ್ಡಪ್‌ಗ್ಳಿಗೆ ತಕ್ಕಂತೆ ಬರೆಯಬೇಕು. ಅದರಲ್ಲೂ ಕೆಲವು ಸ್ಟಾರ್‌ ನಟರು ತಮಗೆ ಈ ತರಹದ ಸನ್ನಿವೇಶ, ಸಂಭಾಷಣೆಯೇ ಬೇಕು ಎನ್ನುತ್ತಾರೆ ಕೂಡಾ. ಆದರೆ, ಮಾಸ್ತಿ ಪ್ರಕಾರ, ಸ್ಟಾರ್‌ಗಳಿಗೆ ಬರೆಯೋದು ಸುಲಭ. “ನಿಜ ಹೇಳಬೇಕೆಂದರೆ ಸ್ಟಾರ್‌ ಗಳಿಗೆ ಬರೆಯೋದು ತುಂಬಾ ಸುಲಭ. ಅವರಿಗೊಂದು ಫಿಕ್ಸ್‌ ಆದ ಇಮೇಜ್‌ ಇರುತ್ತದೆ. ಒಬ್ಬ ಸ್ಟಾರ್‌ 25 ಮಂದಿಯನ್ನು ಹೊಡೆಯುತ್ತಾನೆಂಬುದನ್ನು ಜನ ಕೂಡಾ ಅರಗಿಸಿಕೊಂಡಿರುತ್ತಾರೆ. ಈ ಗ್ಯಾಪಲ್ಲಿ ಎರಡು ಪಂಚ್‌ ಡೈಲಾಗ್‌ ಹೇಳಿಸೋದು ಸುಲಭ. ಆದರೆ, ಹೊಸಬರಿಗೆ ಯಾವುದೇ ಇಮೇಜ್‌ ಇರೋದಿಲ್ಲ. ಅವರಿಗೆ ಬರೆಯೋದು ಕಷ್ಟ ಮತ್ತು ಖುಷಿ ಕೊಡುವ ವಿಚಾರ. ಸ್ಟಾರ್‌ಗಳ ಫೈಟ್‌ ಮುಗಿದ ಕೂಡಲೇ ಜನ ಕೂಡಾ ಅವರ ಡೈಲಾಗ್‌ ಅನ್ನು ಮರೆತುಬಿಡುತ್ತಾರೆ. ಆದರೆ, ಹೊಸಬರ ಸಿನಿಮಾಗಳು ಅದರ ಬರಹದಿಂದಲೂ ಗುರುತಿಸಿಕೊಳ್ಳುತ್ತದೆ’ ಎನ್ನುವುದು ಮಾಸ್ತಿ ಮಾತು.

Advertisement

ಮಾಸ್ತಿಗೆ ಬರವಣಿಗೆಯಲ್ಲೇ ಮುಂದುವರೆಯುವ ಆಸೆ ಇದೆ. ಆರಂಭದಲ್ಲಿ ನಿರ್ದೇಶನ ಮಾಡುವ ಕನಸು ಕಂಡಿದ್ದ ಮಾಸ್ತಿ, ಸದ್ಯ ಆ ಕನಸಿಗೆ ಪರದೆ ಕಟ್ಟಿದ್ದಾರೆ. ಅದಕ್ಕೆ ಕಾರಣ, ರಾಜಿಯಾಗದ ಮನಸ್ಥಿತಿ. “ನಿರ್ದೇಶನ ಮಾಡುವ ಆಸೆ ಇತ್ತು. ಆದರೆ, ಬಹುತೇಕ ನಿರ್ಮಾಪಕ, ನಟರು ಸ್ಕ್ರಿಪ್ಟ್ನಲ್ಲಿ ಸಾಕಷ್ಟು ಬದಲಾವಣೆ ಮಾಡಲು ಹೇಳುತ್ತಾರೆ. ಆರಂಭದಲ್ಲೇ ರಾಜಿಯಾಗುತ್ತಾ ಹೋದರೆ ಇಡೀ ಸಿನಿಮಾದಲ್ಲಿ ರಾಜಿಯಾಗಬೇಕಾಗುತ್ತದೆ. ಆಗ ನಮ್ಮ ಕಲ್ಪನೆಗೆ ಅರ್ಥವೇ ಇರೋದಿಲ್ಲ. ಹಾಗಾಗಿ, ಸದ್ಯಕ್ಕೆ ಬರಹಗಾರನಾಗಿಯೇ ಇರುತ್ತೇನೆ’ ಎನ್ನುತ್ತಾರೆ. 

ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next