ಶಿವಮೊಗ್ಗ: ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ನಡುವೆ ಉಂಟಾಗಿರುವ ಬಿಕ್ಕಟ್ಟು ಅವರಿಬ್ಬರ ತವರೂರು ಶಿವಮೊಗ್ಗಕ್ಕೂ ವ್ಯಾಪಿಸಿ ಬೆಂಬಲಿಗರ ನಡುವೆ ಮಾರಾಮಾರಿಯಾಗುವ ಮಟ್ಟಕ್ಕೆ ಬಂದು ತಲುಪಿದೆ.
ಶಿವಮೊಗ್ಗದ ಬಿಜೆಪಿ ಕಚೇರಿಯಲ್ಲಿ ಉಭಯ ನಾಯಕರ ಬೆಂಬಲಿಗರ ನಡುವೆ ತಳ್ಳಾಟ -ನೂಕಾಟ ನಡೆದು ಭಾರೀ ವಾಗ್ವಾದ ನಡೆದಿದೆ. ಘಟನೆಯ ಬಳಿಕ ಕಚೇರಿಯ ಬಳಿ ಪೊಲೀಸರನ್ನು ನಿಯೋಜಿಸಲಾಗಿದೆ.
ಸೋಮವಾರ ಪಕ್ಷದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿಯಲ್ಲಿ ಉಭಯ ನಾಯಕರ ಪರ ವಿರೋಧದ ಎರಡು ಬಣಗಳು ಇರುವುದು ಅಕ್ಷರಶಃ ಜಗಜ್ಜಾಹೀರಗೊಂಡಿತ್ತು. ಪಕ್ಷದ ಜಿಲ್ಲಾಧ್ಯಕ್ಷ ಎಸ್.ರುದ್ರೇಗೌಡ ಮತ್ತು ಮಾಜಿ ಸಂಸದ ಹಾಗೂ ಬಿಜೆಪಿ ವಿಭಾಗೀಯ ಪ್ರಭಾರಿ ಆಯನೂರು ಮಂಜುನಾಥ್ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಬಿಎಸ್‌ವೈ ಮತ್ತು ಈಶ್ವರಪ್ಪ ಪರ ಮತ್ತು ವಿರುದ್ಧವಾಗಿ ಜಿಲ್ಲಾಮಟ್ಟದ ನಾಯಕರ ನಡುವೆಯೇ ಪರಸ್ಪರ ವಾಗ್ವಾದ ನಡೆದಿತ್ತು.
ಈಶ್ವರಪ್ಪ ಬೆಂಬಲಿಗರು ಗೂಂಡಾಗಿರಿ ನಡೆಸಿದ್ದಾರೆ ಎಂದು ಬಿಎಸ್‌ವೈ ಬೆಂಬಲಿಗರು ಆರೋಪಿಸಿದ್ದು ಆ ಬಳಿಕ ಪರಸ್ಪರ ಜಗಳ ತಾರಕಕ್ಕೇರಿದೆ.
ಶಿವಮೊಗ್ಗದಲ್ಲಿ ಎರಡು ಬಣಗಳ ಮುಖಂಡರು ಇದೀಗ ಪರಸ್ಪರ ಆರೋಪ -ಪ್ರತ್ಯಾರೋಪ, ವಾಕ್ಸಮರಕ್ಕಿಳಿದಿದ್ದು, ಇದರಿಂದ ಜಿಲ್ಲಾ ಬಿಜೆಪಿ ಪಾಳಯದಲ್ಲಿ ದೊಡ್ಡ ಪ್ರಮಾಣದಲ್ಲಿಯೇ ಭಿನ್ನಮತ ಸ್ಫೋಟಗೊಳ್ಳುವ ಸಾಧ್ಯತೆ ದಟ್ಟವಾಗಿದೆ.