ಮೂಲತಃ “ಮಾತು’ ಎಂದರೆ “ಶಬ್ದೋಚ್ಚಾರ’, ಸ್ಮತಿಯಾಧಾರಿತ ಧ್ವನಿ-ಸಂಕೇತಗಳ ಪ್ರಕಟ.
Advertisement
ಯಾವುದೇ ಭಾಷೆಯಾದರೂ “ವ್ಯವಸ್ಥಿತ ಮಾತು’ ಮಾತುಗಾರಿಕೆ ಅನಿಸಿಕೊಳ್ಳುತ್ತದೆ. ಉಚ್ಚಾರದ ವ್ಯವಸ್ಥೆಯಲ್ಲಿ ನಮ್ಮ ಅಂತರ್ ಇಂದ್ರಿಯಗಳಾದ ಮನೋಬುದ್ಧಿಗಳ ಹಾಗೂ ಧ್ವನ್ಯಂಗಗಳ ಕಾರ್ಯ ಮಹತ್ವದ್ದು. ಮಾತಿನ ಪೂರ್ವಸಿದ್ಧತೆಯಲ್ಲಿ ಮತ್ತು ಪ್ರಯೋಗದಲ್ಲಿ ಮೆದುಳಿನ ಪಾತ್ರವಿದೆ. ಮಾನಸಿಕ-ದೈಹಿಕ ಪೂರ್ವ ಸಿದ್ಧತೆಯೂ ಇದೆ. ಬಾಹ್ಯ ಮತ್ತು ಆಂತರಿಕ ಒತ್ತಡಗಳಿಂದ ಅಂತರಂಗದಿಂದೆದ್ದ ಭಾವವು ಧ್ವನಿ- ಶಬ್ದಗಳ ಮೂಲಕ ಬಹಿರಂಗಗೊಳ್ಳುವುದು. ಬಹುಶ್ರುತ ವಿದ್ವಾಂಸ ಶತಾವಧಾನಿ ಡಾ| ಆರ್. ಗಣೇಶ್ ಒಂದೆಡೆ ಹೀಗೆ ಹೇಳಿದ್ದಾರೆ: “ಪರಮತಾ ತ್ಪರ್ಯದಿಂದ ಭಾಷೆಯು ವಾಕ್ಯ ಸ್ಫೋಟ. ಇದನ್ನೇ ಅಖಂಡಸ್ಫೋಟವೆಂದು ವೈಯಾ ಕರಣರು ಹೇಳುತ್ತಾರೆ.’
Related Articles
Advertisement
ಮಂತ್ರವು ವೈದಿಕ ಸಾಹಿತ್ಯದ ಶ್ರೇಷ್ಠ ಕೊಡುಗೆ. ಮಂತ್ರವು “ಮನನ’ ಮಾಡುವುದಕ್ಕಾಗಿಯೇ ಇರುವಂಥದ್ದು. “ಮನನಾತ್‌ತ್ರಾಯತೇ ಇತಿ ಮಂತ್ರಃ’-ಎಂಬುದಾಗಿ “ಮಂತ್ರ’ ಶಬ್ದದ ವುತ್ಪತ್ತಿಯನ್ನು ಹೇಳಲಾಗಿದ್ದು, ಮಂತ್ರವು ಮನಬಂದಂತೆಲ್ಲ ಉಚ್ಚರಿಸುವಂಥದ್ದಲ್ಲ ಎಂಬ ಮಾತು ರೂಢಿಯಲ್ಲೇ ಬಂದಿದೆ. ಅಂದರೆ, ಮಂತ್ರವಿರುವುದು ಮನಸ್ಸಿನಲ್ಲಿ ಚಿಂತನ ಮಾಡುವುದಕ್ಕೆ, ಬೊಬ್ಬೆ ಹೊಡೆಯು ವುದಕ್ಕಲ್ಲ ಎಂಬುದು ಸಂದೇಶ. ಆದರೆ ಯಜ್ಞದ ಸಂದರ್ಭದಲ್ಲಿ, ವಿವಿಧ ಉಪಾ ಸನೆ-ಆರಾಧನೆ-ಸಂಸ್ಕಾರಗಳ ಸಂದರ್ಭ ದಲ್ಲಿ ಮಂತ್ರಗಳನ್ನು ಗಟ್ಟಿಯಾಗಿ ಉಚ್ಚರಿಸುವ ಪರಿಪಾಠವಿದೆ.
ಅದು ಹೇಗೆ? ಅಲ್ಲೂ ಶಾಸ್ತ್ರವಿದೆ! ಅನುದಾತ್ತ, ಉದಾತ್ತ, ಸ್ವರಿತಗಳೆಂಬ ಸ್ವರಗಳನ್ನು ಹೇಳಲಾಗಿದೆ. ಸುಶಿಕ್ಷಿತ ವೈದಿಕರ ಮಂತ್ರೋಚ್ಚಾರಣೆಯಲ್ಲಿ ಇದನ್ನು ಎಲ್ಲರೂ ಗಮನಿಸಬಹುದಾಗಿದೆ. ಮಂತ್ರಗಳನ್ನು ಮನನ ಮಾಡುವಾಗಲೂ ಸ್ವರಾನುಲಕ್ಷ್ಯವು ಅಗತ್ಯವೆಂದೇ ಪಾಠ. ಅಂದರೆ, “ಮಂತ್ರ’ಕ್ಕೊಂದು “ಆಚಾರ’ವಿದೆ. ಅದು “ಉಚ್ಚಾರ’ಕ್ಕೆ ಸಂಬಂಧಿಸಿದ್ದೇ ಆಗಿದೆ. ಮಂತ್ರದ ಉಚ್ಚಾರ ಮತ್ತು ಪ್ರಯೋಗಕ್ಕೆ ಪೂರ್ವದಲ್ಲಿ ಗುರೂಪದೇಶವು ಕಡ್ಡಾಯ. ಮಂತ್ರವು “ಪವಿತ್ರ’ವೆಂಬ ಭಾವನೆಯಿದೆ, ಅದರ ಹಿಂದೆ ಭಕ್ತಿಯಿದೆ. ಮಂತ್ರಗಳ ಸ್ಪಷ್ಟ ಉಚ್ಚಾರವು ಪುಣ್ಯಪ್ರದವೆಂದು ಹೇಳಲಾಗಿದೆ. ವೈಜ್ಞಾನಿಕವಾಗಿ ನೋಡಿದರೆ ಅದರ ಹಿಂದೆ “ಆರೋಗ್ಯಸೂತ್ರ’ವಿದೆ. ಮನಬಂದಂತೆ ಮಂತ್ರವನ್ನುಚ್ಚರಿಸುವುದು ದೋಷಕರವೆಂದೂ ಹೇಳಲಾಗಿದೆ. ಇನ್ನು ಈ ಪುಣ್ಯ-ಪಾಪಗಳ ವಿಚಾರವನ್ನು ಬದಿಗಿಟ್ಟು ನೋಡಿದರೂ, ಮಂತ್ರಗಳನ್ನು ಬೇಕು ಬೇಕಾದಂ ತೆಲ್ಲ ಬೇಕಾಬಿಟ್ಟಿಯಾಗಿ ಒಟ್ಟಾರೆಯಾಗಿ ಉಚ್ಚರಿಸುವುದು ಅದರ ಗುಣಮಟ್ಟವನ್ನು ಅವಗಣಿಸಿದಂತಾಗುವುದಿಲ್ಲವೇ? ಆ ಮೂಲಕ ಒಂದು ಭಾಷೆ ಮತ್ತು ಅದರೊಂದಿಗೆ ಬೆಸೆದಿರುವ ಸಂಸ್ಕೃತಿಗೆ ಅಪಚಾರ ಎಸಗಿದಂತಾಗುವುದಿಲ್ಲವೇ? ಒಂದು ಭಾಷೆಯನ್ನೊ, ಸಂಸ್ಕೃತಿಯನ್ನೋ ಸಾಧ್ಯವಿದ್ದರೆ ಉಪಚರಿಸಬೇಕು. ಆದರೆ ಅದು ಅಸಾಧ್ಯವಾದಲ್ಲಿ ಅಪಚಾರವನ್ನಂತೂ ಎಸಗಬಾರ ದೆಂಬುದು ಪ್ರಾಜ್ಞರೆಲ್ಲರ ಅಭಿಮತ.
ಭಾಷೆ ಯಾವುದೇ ಇರಲಿ – ಉಚ್ಚಾರವು ದೋಷಪೂರಿತವಾದರೆ ಆಯಾ ಭಾಷೆಗಳ ಸೌಂದರ್ಯವು ಕೆಡುವುದು. ಉಚ್ಚಾರವು ಅಸ್ಪಷ್ಟವಾದರೆ ಸಂವಹನವೋ ಅಭಿವ್ಯಕ್ತಿಯೋ ಪರಿಣಾಮಕಾರಿಯಾಗದು. ಭಾವವು ನಿರೀಕ್ಷಿತ – ಅಪೇಕ್ಷಿತ ಮಟ್ಟವನ್ನು ತಲುಪದು. ಅಪೇಕ್ಷಿತ ಪರಿಣಾಮವನ್ನು ಉಂಟು ಮಾಡದ ಭಾಷೆಯು ಕ್ರಮೇಣ ಉಪೇಕ್ಷಿಸಲ್ಪಡಬಹುದು. ಭಾವ ವ್ಯತ್ಯಾಸ ಅರ್ಥವ್ಯತ್ಯಾಸಗಳಿಂದಾಗಿ ಮಾತು ಹಾಳಾಗಿಹೋಗಬಹುದು. ಹಾಗಾಗ ಕೂಡದೆಂಬ ಎಚ್ಚರಿಕೆಯಿಂದ ನಮ್ಮ ಪೂರ್ವಿಕರು ಸಾಕಷ್ಟು ಅಧ್ಯಯನ-ಸಂಶೋಧನೆಗಳನ್ನು ಮಾಡಿ ಮಾತನ್ನು ಉಚ್ಚರಿಸಬೇಕಾದ ವಿಧಿ-ವಿಧಾನಗಳನ್ನೆಲ್ಲ – ಒಂದರ್ಥದಲ್ಲಿ – ಶಾಸನ ಮಾಡಿ ಹೋಗಿದ್ದಾರೆ.
ಉಚ್ಚಾರಣೆಗೆ ಘನವಿದ್ವತ್ ಬೇಡ! ಆದರೆ ಧ್ವನ್ಯಂಗಗಳ ಸಮರ್ಪಕ ಬಳಕೆ ಬೇಕು! ಅದಕ್ಕೆ ಸರಿಯಾದ ತರಬೇತಿ ಸಿಗಬೇಕು. ಮುಖ್ಯವಾಗಿ ತರಬೇತಿ ಪಡೆದುಕೊಳ್ಳಲು ಆಸಕ್ತಿ ಬೇಕು. ಆದರೆ ಬರೀ ಆಸಕ್ತಿಯೊಂದೇ ಸಾಕಾಗದು, ಪ್ರಯತ್ನವೂ ಬೇಕು. ಮೇಲಾಗಿ, ಪ್ರತೀ ಭಾಷೆಯ ಹಿಂದೆ ಒಂದು ಸಂಸ್ಕಾರ, ಸಂಸ್ಕೃತಿ ಇದೆ. ಉಚ್ಚಾರಣಾಸಕ್ತ ವ್ಯಕ್ತಿಯ “ಸ್ವಭಾವ’ವಿದೆ. ನೈಸರ್ಗಿಕ-ದೇಶಿಕ-ಪ್ರಾದೇಶಿಕ ಕೊಡುಗೆಯಿದೆ. ಒಟ್ಟಿನಲ್ಲಿ, ತರತಮವೇ ಗಟ್ಟಿಯಾಗುಳ್ಳ ನಮ್ಮಿà ಭೂಮಿಯಲ್ಲಿ ಭಾಷಿಕ ತರತಮವೂ ವೇದ್ಯ. ಯಾವ ಭಾಷೆಯೂ ಮೇಲಲ್ಲ; ಯಾವ ಭಾಷೆಯೂ ಕೀಳಲ್ಲ . ಭಾಷೆಗಳನ್ನು ಬೇಕು ಬೇಕಾದಂತೆ ಉಚ್ಚರಿಸುವುದೋ, ಬಳಸುವುದೋ ಮಾಡಿದಲ್ಲಿ ಆಯಾ ಭಾಷೆಗಳ ಸೌಂದರ್ಯ -ಸ್ವಾರಸ್ಯವು ಹಾಳಾಗುವುದು. ಗದ್ಯ ಬೇರೆ; ಪದ್ಯ ಬೇರೆ ; ಹಾಡು ಬೇರೆ; ಮಂತ್ರ ಬೇರೆ – ಎಲ್ಲವೂ ಒಂದೇ ಅಲ್ಲ ಎನ್ನುವ ಅರಿವು ಅಗತ್ಯ.
ಜಯಪ್ರಕಾಶ್ ಎ., ನಾಕೂರು