ಸಿಡ್ನಿ: ಭಾರತ- ಆಸೀಸ್ ನಡುವಿನ ಮೂರನೇ ಟೆಸ್ಟ್ ವಿಶೇಷ ಕಾರಣಕ್ಕಾಗಿ ಸುದ್ದಿಯಾಗುತ್ತಿದೆ. ಅದೇನೆಂದರೆ ಪುರುಷರ ಟೆಸ್ಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವನಿತಾ ಫೋರ್ತ್ ಅಂಪಾಯರ್ ಕರ್ತವ್ಯ ನಿಭಾಯಿಸಿದ್ದಾರೆ.
ಈ ಅವಕಾಶ ಪಡೆದ ಅದೃಷ್ಟವಂತೆ ಆಸ್ಟ್ರೇಲಿಯದ ಕ್ಲೇರ್ ಪೊಲೊಸಾಕ್. 2019ರ ನ ಮೀಬಿಯಾ-ಒಮಾನ್ ನಡುವಿನ ವರ್ಲ್ಡ್ ಕ್ರಿಕೆಟ್ ಲೀಗ್ ಡಿವಿಷನ್-2 ಫೈನಲ್‌ನಲ್ಲಿ ಪೊಲೊಸಾಕ್ ಫೀಲ್ಡ್ ಅಂಪಾಯರ್ ಆಗಿದ್ದರು.
ಸಿಡ್ನಿಯಲ್ಲೂ “ಪಿಂಕ್ ಟೆಸ್ಟ್’!
ಸಿಡ್ನಿಯಲ್ಲೂ ಪಿಂಕ್ ಟೆಸ್ಟ್ ನಡೆಯುತ್ತಿದೆ. ಆದರೆ ಇದು ಪಿಂಕ್ ಬಾಲ್ ಟೆಸ್ಟ್ ಅಥವಾ ಡೇ-ನೈಟ್ ಪಂದ್ಯವಲ್ಲ. ಸ್ತನ ಕ್ಯಾನ್ಸರ್ ವಿರುದ್ಧ ಜಾಗೃತಿ ಮೂಡಿಸುವ, ಅಂಥವರ ನೆರವಿಗೆ ನಿಲ್ಲುವ “ಗ್ಲೆನ್ ಮೆಕ್‌ಗ್ರಾತ್ ಫೌಂಡೇಶನ್’ಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಇದನ್ನು ಕ್ರಿಕೆಟ್ ಆಸ್ಟ್ರೇಲಿಯ “ಪಿಂಕ್ ಟೆಸ್ಟ್’ ಎಂದು ಘೋಷಿಸಿದೆ.
ಇಲ್ಲಿನ ಕೆಲವು ಆಸನಗಳನ್ನು “ಪಿಂಕ್ ಸೀಟ್ಸ್’ ಎಂದು ಗುರುತಿಸಲಾಗಿದ್ದು, ಇದನ್ನು ಕಾದಿರಿಸಲು ಕ್ರಿಕೆಟ್ ಅಭಿಮಾನಿಗಳಿಗೆ ಮನವಿ ಮಾಡಲಾಗಿದೆ. ಇದಕ್ಕಾಗಿ ಅವರು ಕ್ರೀಡಾಂಗಣಕ್ಕೆ ಆಗಮಿಸಬೇಕೆಂದಿಲ್ಲ, ಆನ್‌ಲೈನ್‌ನಲ್ಲಿ ಕಾದಿರಿಸಿದರೂ ಸಾಕು. ಇಲ್ಲಿನ ಮೊತ್ತ ಮೆಕ್‌ಗ್ರಾತ್ ಫೌಂಡೇಶನ್ ತಲುಪುತ್ತದೆ. ಸ್ತನ ಕ್ಯಾನ್ಸರ್ ಪೀಡಿತ 700 ರಷ್ಟು ಆಸ್ಟ್ರೇಲಿಯನ್ ಕುಟುಂಬದವರ ಸೇವೆಗೈಯುತ್ತಿರುವ ದಾದಿಯರಿಗೆ ಆರ್ಥಿಕ ನೆರವು ನೀಡುವುದು ಇದರ ಉದ್ದೇಶ.
ಗ್ಲೆನ್ ಮೆಕ್‌ಗ್ರಾತ್ ಅವರ ಈ ಅಭಿಯಾನಕ್ಕೆ ಸಚಿನ್ ತೆಂಡುಲ್ಕರ್ ಶುಭ ಹಾರೈಸಿದ್ದಾರೆ. ಮೆಕ್‌ಗ್ರಾತ್ ಜತೆ ಇರುವ, ತಮ್ಮ ಹಸ್ತಾಕ್ಷರವುಳ್ಳ ಜೆರ್ಸಿ ಹಿಡಿದಿರುವ ಚಿತ್ರವೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ