ಹೊಸದಿಲ್ಲಿ : ಒಮ್ಮೆ ಆರೋಗ್ಯ ವಿಮೆ ಪಾಲಿಸಿ ಜಾರಿಯಾದ ನಂತರ ಮೊದಲೇ ಘೋಷಿಸಿರಲಿಲ್ಲ ಎಂಬ ಕಾರಣ ನೀಡಿ ವಿಮೆ ಕ್ಲೇಮ್ ನಿರಾಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಖಾಸಗಿ ಆರೋಗ್ಯ ವಿಮಾ ಕಂಪನಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದೆ.
ರಾಷ್ಟ್ರೀಯ ಗ್ರಾಹಕ ಆಯೋಗ ತಮ್ಮ ಮನವಿ ಸ್ವೀಕರಸಲು ನಿರಾಕರಿಸಿದ್ದರ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ ಮನಮೋಹನ್ ನಂದಾ ಎಂಬುವರ ಅರ್ಜಿ ವಿಚಾರಣೆ ಮಾಡಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಹಾಗೂ ಬಿ.ವಿ.ನಾಗರತ್ನ ಅವರನ್ನು ಒಳಗೊಂಡ ವಿಭಾಗೀಯ ಪೀಠ ಈ ಮಹತ್ವದ ನಿರ್ದೇಶನ ನೀಡಿದೆ.
ಖಾಸಗಿ ಇನ್ಶೂರೆನ್ಸ್ ಕಂಪನಿಗಳು ಪಾಲಿಸಿ ಕ್ಲೇಮ್ ಮಾಡುವಾಗ ವಿಧಿಸುತ್ತಿದ್ದ ಕಟ್ಟಳೆಗಳಿಂದ ಹೈರಾಣಾಗಿದ್ದ ಗ್ರಾಹಕರಿಗೆ ಸುಪ್ರೀಂ ಕೋರ್ಟ್‌ನ ಈ ನಿರ್ದೇಶನ ನಿಟ್ಟುಸಿರು ಮಾಡುವಂತೆ ಮಾಡಿದೆ. ಪೂರ್ವ ಘೋಷಣೆಯಾಗಿಲ್ಲ, ಎಂಬ ಕಾರಣ ನೀಡಿ ಪಾಲಿಸಿ ಪಡೆದು ಹಣ ಪಾವತಿಸಿದ ಗ್ರಾಹಕರಿಗೆ ಆರೋಗ್ಯ ವಿಮೆ ಕ್ಲೇಮ್ ಮಾಡುವುದಕ್ಕೆ ಅವಕಾಶ ನಿರಾಕರಿಸುವುದಕ್ಕೆ ಸಾಧ್ಯವಿಲ್ಲ. ಇದು ಗ್ರಾಹಕರ ಹಕ್ಕು ಕಸಿದುಕೊಂಡಂತಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟ ಅಭಿಪ್ರಾಯಪಟ್ಟಿದೆ.
ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿ ತಮ್ಮ ಕ್ಲೇಮ್ ನಿರಾಕರಿಸಿದ ಹಿನ್ನೆಲೆಯಲ್ಲಿ ನಂದಾ ರಾಷ್ಟ್ರೀಯ ಗ್ರಾಹಕ ಆಯೋಗದ ಮೆಟ್ಟಿಲೇರಿದ್ದರು. ಆದರೆ ಅವರ ಅರ್ಜಿ ವಿಚಾರಣೆ ನಡೆಸುವುದಕ್ಕೆ ಆಯೋಗ ನಿರಾಕರಿಸಿತ್ತು. ಹೀಗಾಗಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿದ್ದರು.
ಸಾಗರೋತ್ತರ ಮೆಡಿಕ್ಲೇಮ್ ಹಾಗೂ ರಜಾ ಪಾಲಿಸಿ ಪಡೆದಿದ್ದ ನಂದಾ ಅಮೆರಿಕಾಕ್ಕೆ ಪ್ರಯಾಣ ಬೆಳೆಸಿದ್ದರು. ಆದರೆ ಸ್ಯಾನ್ ಫ್ರಾನ್ಸಿಸ್ಕೋ ವಿಮಾನ ನಿಲ್ದಾಣದಲ್ಲಿ ಅವರಿಗೆ ಅನಾರೋಗ್ಯ ಸಮಸ್ಯೆ ಎದುರಾಯಿತು. ಆಸ್ಪತ್ರೆಗೆ ದಾಖಲಿಸಿದಾಗ ಹೃದಯ ಸಂಬಂಧಿ ಕಾಯಿಲೆ ಇರುವುದು ಸ್ಪಷ್ಟವಾಯಿತು. ಆಂಜಿಪ್ಲಾಸ್ಟಿ ಜತೆಗೆ, ಸ್ಟಂಟ್ ಅಳವಡಿಸಲಾಗಿತ್ತು. ಇನ್ಶೂರೆನ್ಸ್ ಪಾಲಿಸಿದಾರರಾಗಿದ್ದ ನಂದಾ ಕ್ಲೇಮ್‌ಗೆ ಅರ್ಜಿ ಸಲ್ಲಿಸಿದರು. ಆದರೆ ಇನ್ಶೂರೆನ್ಸ್ ಸೇವೆ ಪಡೆಯುವಾಗ ನೀವು ಹೃದಯ ಸಂಬಂಧಿ ಸಮಸ್ಯೆ ಬಗ್ಗೆ ಹೇಳಿಲ್ಲ. ಸಕ್ಕರೆ ಕಾಯಿಲೆ ಇರುವ ವಿಚಾರ ಮುಚ್ಚಿಟ್ಟಿದ್ದೀರಿ ಎಂದು ಸಂಬಂಧಪಟ್ಟ ಇನ್ಶೂರೆನ್ಸ್ ಕಂಪನಿ ಆಕ್ಷೇಪ ಸಲ್ಲಿಸಿತ್ತು.
ಸಂಸ್ಥೆಯ ಈ ನಿಲುವನ್ನು ಒಪ್ಪದ ಸುಪ್ರೀಂ ಕೋರ್ಟ್ ಅನಾರೋಗ್ಯದ ಬಗ್ಗೆ ಮುಂಚಿತವಾಗಿ ಸಂಪೂರ್ಣ ಮಾಹಿತಿ ನೀಡಿಲ್ಲ ಎಂದು ವಾದಿಸುವುದು ಸರಿಯಲ್ಲ. ಪೂರ್ವ ಘೋಷಣೆ ಮಾಡಿಲ್ಲ ಎಂಬ ಮಾತ್ರಕ್ಕೆ ಕ್ಲೇಮ್ ನಿರಾಕರಿಸುವುದು ಕಾಯಿದೆಗೆ ಬದ್ಧವಲ್ಲ. ಆಕಸ್ಮಿಕವಾಗಿ ಸಂಭವಿಸಬಹುದಾದ ಆರೋಗ್ಯ ಸಮಸ್ಯೆಗೆ ವೈದಕೀಯ ನೆರವು ಪಡೆಯುವುದಕ್ಕಾಗಿಯೇ ಆರೋಗ್ಯ ವಿಮೆ ಸೌಲಭ್ಯ ಪಡೆದುಕೊಳ್ಳುವುದು ಎಂಬುದನ್ನು ನೆನಪಿನಲ್ಲಿಡಬೇಕು. ಇಂಥ ಕಾರಣಗಳ ಮೂಲಕ ಕ್ಲೇಮ್ ನಿರಾಕರಣೆ ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.