Advertisement

ನ್ಯಾ|ಡಿ.ವೈ.ಚಂದ್ರಚೂಡ್‌ 50ನೇ ಸಿಜೆಐ ಸ್ಥಾನಕ್ಕೆ ನೇಮಕ ಶಿಫಾರಸು

11:58 PM Oct 11, 2022 | Team Udayavani |

ಸುಪ್ರೀಂಕೋರ್ಟ್‌ನ 50 ನೇ ಮುಖ್ಯನ್ಯಾಯ ಮೂರ್ತಿಯಾಗಿ ಡಿ.ವೈ.ಚಂದ್ರಚೂಡ್‌ ಅವರು ನೇಮಕವಾಗುವುದು ಖಚಿತ. ಮಂಗಳವಾರ ಹಾಲಿ ಸಿಜೆಐ ಯು.ಯು.ಲಲಿತ್‌ ಅವರು, ನ್ಯಾ| ಡಿ.ವೈ.ಚಂದ್ರಚೂಡ್‌ ಅವರ ಹೆಸರನ್ನು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿದ್ದಾರೆ. ಹೀಗಾಗಿ ಹಿರಿತನದ ಆಧಾರದ ಮೇಲೆ ಇವರೇ ಮುಂದಿನ ಸಿಜೆಐ ಆಗಲಿದ್ದಾರೆ. ಇದೇ ಮೊದಲ ಬಾರಿಗೆ ತಂದೆ ಏರಿದ್ದ ಸ್ಥಾನಕ್ಕೆ ಪುತ್ರ ಏರುತ್ತಿರುವುದು ವಿಶೇಷ. ಅಂದರೆ ಇವರ ತಂದೆ ನ್ಯಾ| ವೈ.ವಿ.ಚಂದ್ರಚೂಡ್‌ ಅವರು 1978ರಲ್ಲಿ ಸಿಜೆಐ ಆಗಿದ್ದರು.

Advertisement

ಅಪ್ಪ-ಮಗನ ಸಿಜೆಐ ಹೊಣೆಗಾರಿಕೆಯಲ್ಲಿ ಒಂದು ಸಾಮ್ಯತೆ ಇದೆ. ನ್ಯಾ| ವೈ.ವಿ.ಚಂದ್ರಚೂಡ್‌ ಅವರು 1978ರಿಂದ 1985ರವರೆಗೆ, ಅಂದರೆ ಏಳು ವರ್ಷದ ವರೆಗೆ ಸಿಜೆಐ ಆಗಿದ್ದರು. ಇಡೀ ಸುಪ್ರೀಂ ಕೋರ್ಟ್‌ ಇತಿಹಾಸದಲ್ಲೇ ಇಷ್ಟು ದೀರ್ಘಾವಧಿಗೆ ಸಿಜೆಐ ಆಗಿದ್ದವರು ಇವರೊಬ್ಬರೇ. ಈಗ ನ್ಯಾ| ಡಿ.ವೈ.ಚಂದ್ರಚೂಡ್‌ ಅವರೂ ಸುಮಾರು 2 ವರ್ಷಗಳ ಕಾಲ ಸಿಜೆಐ ಆಗಿರಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇಷ್ಟು ದೀರ್ಘಾವಧಿಗೆ ಸಿಜೆಐ ಆಗಿ ಸೇವೆ ಸಲ್ಲಿಸುವವರೂ ಇವರೇ ಆಗಿದ್ದಾರೆ.

ತಂದೆಯ 2 ಕೇಸ್‌ ಉಲ್ಟಾ
ವಿಶೇಷವೆಂದರೆ ನ್ಯಾ| ಡಿ.ವೈ.ಚಂದ್ರಚೂಡ್‌ ಅವರು ತಂದೆ ನ್ಯಾ| ವೈ.ವಿ.ಚಂದ್ರಚೂಡ್‌ ನೀಡಿದ್ದ ಎರಡು ಪ್ರಮುಖ ಪ್ರಕರಣಗಳ ತೀರ್ಪನ್ನು ರದ್ದು ಮಾಡಿ ಹೊಸ ತೀರ್ಪು ನೀಡಿದ್ದಾರೆ. ತುರ್ತುಪರಿಸ್ಥಿತಿ ಕಾಲ, 1975ರಲ್ಲಿ ನ್ಯಾ| ವೈ.ವಿ.ಚಂದ್ರಚೂಡ್‌ ಅವರಿದ್ದ ಪೀಠ, ಖಾಸಗಿತನದ ಹಕ್ಕನ್ನು ನಿಯಂತ್ರಣದಲ್ಲಿ ಇರಿಸುವುದಕ್ಕೆ ಅವಕಾಶ ನೀಡಿತ್ತು. 2017ರಲ್ಲಿ ನ್ಯಾ| ಡಿ.ವೈ.ಚಂದ್ರಚೂಡ್‌ ಅವರ ಪೀಠ, ಎಲ್ಲರ ಖಾಸಗಿತನಕ್ಕೂ ಗೌರವವಿದೆ ಎಂದು ಹೇಳಿ, ತುರ್ತುಪರಿಸ್ಥಿತಿ ಕಾಲದ ತೀರ್ಪನ್ನು ರದ್ದು ಮಾಡಿತ್ತು.

ಇನ್ನು ಎರಡನೆಯದಾಗಿ, ವ್ಯಭಿಚಾರವನ್ನು ಅಪರಾಧವೆಂದು ಹೇಳಲಾಗುತ್ತಿದ್ದ ಕಾನೂನನ್ನು ರದ್ದು ಪಡಿಸಿದರು. ಏಕೆಂದರೆ ತಂದೆಯ ಕಾಲದಲ್ಲಿ ವಸಾಹತುಶಾಹಿ ಕಾಲದ ಈ ಕಾನೂನಿಗೆ ಮಾನ್ಯತೆ ಇದೆ ಎಂದು ತೀರ್ಪು ನೀಡಲಾಗಿತ್ತು.

ಹಾರ್ವರ್ಡ್‌ ವಿವಿಯ ಪದವೀಧರ
ಮಹಾರಾಷ್ಟ್ರ ಮೂಲದ ನ್ಯಾ| ಡಿ.ವೈ.ಚಂದ್ರಚೂಡ್‌ ಅವರು, ನಿವೃತ್ತ ಸಿಜೆಐ ಯಶವಂತ ವಿಷ್ಣು ಚಂದ್ರಚೂಡ್‌ ಮತ್ತು ಶಾಸ್ತ್ರೀಯ ಸಂಗೀತಗಾರ್ತಿ ಪ್ರಭಾ ಅವರ ಪುತ್ರ. ಮುಂಬಯಿ, ದಿಲ್ಲಿಯಲ್ಲಿ ಶಿಕ್ಷಣ ಮುಗಿಸಿದ ಇವರು, ಉನ್ನತ ವ್ಯಾಸಂಗಕ್ಕಾಗಿ ಹಾರ್ವರ್ಡ್‌ ವಿಶ್ವವಿದ್ಯಾನಿಲಯಕ್ಕೆ ತೆರಳಿದ್ದರು. ಅಲ್ಲೇ ನ್ಯಾಯಾಂಗ ವಿಜ್ಞಾನಕ್ಕೆ ಸಂಬಂಧಿಸಿದಂತೆ 1986ರಲ್ಲಿ ಡಾಕ್ಟರೇಟ್‌ ಪದವಿ ಪಡೆದಿದ್ದಾರೆ.

Advertisement

ಬಳಿಕ ಭಾರತದಲ್ಲಿ ವಕೀಲಿಕೆ ಆರಂಭಿಸಿದ ಇವರು, ಫಾಲಿ ನಾರಿಮನ್‌ ಅವರ ಜ್ಯೂನಿಯರ್‌ ಆಗಿಯೂ ಕೊಂಚ ಕಾಲ ಸೇವೆ ಸಲ್ಲಿಸಿದರು. 39ನೇ ವಯಸ್ಸಿಗೇ ಹಿರಿಯ ವಕೀಲ ಎಂಬ ಗೌರವ ಪಡೆದವರು. 1998ರಲ್ಲಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಆಗಿ ನೇಮಕವಾದರು. 2000ರಲ್ಲಿ ಬಾಂಬೆ ಹೈಕೋರ್ಟ್‌ ನ ನ್ಯಾಯಮೂರ್ತಿಯಾಗಿ ನೇಮಕವಾದರು. ಇಲ್ಲಿ 13 ವರ್ಷ ಸೇವೆ ಸಲ್ಲಿಸಿದ ಬಳಿಕ, 2013ರಲ್ಲಿ ಅಲಹಾಬಾದ್‌ ಹೈಕೋರ್ಟ್‌ನ ಮುಖ್ಯ ನ್ಯಾಯ ಮೂರ್ತಿಯಾದರು. ಇದಾದ ಮೂರು ವರ್ಷಗಳ ಬಳಿಕ ಸುಪ್ರೀಂಕೋರ್ಟ್‌ಗೆ ಭಡ್ತಿ ಪಡೆದರು.

ಪ್ರಮುಖ ಕೇಸ್‌ಗಳು
1. ಅಯೋಧ್ಯಾ ರಾಮಮಂದಿರ
2. ಖಾಸಗಿತನದ ಹಕ್ಕು
3. ಆಧಾರ್‌ನ ಸಿಂಧುತ್ವ
4. ಹಾದಿಯಾ ವಿವಾಹ ಪ್ರಕರಣ
5. ಭಿಮಾ ಕೊರಂಗಾವ್‌ ಹೋರಾಟಗಾರರ ಬಂಧನ
6. ದಯಾಮರಣ ಪ್ರಕರಣ
7. ಶಬರಿಮಲೆ ಪ್ರಕರಣ
8. ನ್ಯಾಯಾಧೀಶ ಲೋಯಾ ಕೊಲೆ ಪ್ರಕರಣ
9. ದಿಲ್ಲಿಯ ಎಲ್‌ಜಿ ಮತ್ತು ರಾಜ್ಯ ಸರಕಾರದ ನಡುವಿನ ವಿವಾದ
10. ಕರ್ನಾಟಕದ ಮೀಸಲಾತಿ ಕುರಿತ ತೀರ್ಪು.

Advertisement

Udayavani is now on Telegram. Click here to join our channel and stay updated with the latest news.

Next